ದ.ಕ ಜಿಲ್ಲಾ ಸರಕಾರಿ ವಾಹನ ಚಾಲಕರ ಸಂಘದ ಮಹಾಸಭೆ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ವಾಹನ ಚಾಲಕರ ಕೇಂದ್ರ ಸಂಘ(ರಿ) ಮಂಗಳೂರು ಇದರ ತೃತೀಯ ವಾರ್ಷಿಕ ಮಹಾಸಭೆ ಹಾಗೂ ವರದಿ, ವರ್ಷದಲ್ಲಿ ಸರಕಾರಿ ಸೇವೆಯಿಂದ ವಯೋ ನಿವೃತ್ತಿ ಹೊಂದಿದ ವಾಹನ ಚಾಲಕರಿಗೆ ಸನ್ಮಾನ ಸಮಾರಂಭ ಸಂಘದ ಕಛೇರಿಯ ಸಭಾಂಗಣದಲ್ಲಿ ಆಗಸ್ಟ್ 20 ರಂದು ನಡೆಯಿತು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ದಯಾನಂದ .ಕೆ. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಧ್ಯಕ್ಷರು, ಕರ್ನಾಟಕ ರಾಜ್ಯ ಸರಕಾರಿ ನೌಕರ ಜಿಲ್ಲಾ ಸಂಘದ ಅಧ್ಯಕ್ಷ ಪ್ರಕಾಶ ನಾಯಕ್, ದ.ಕ. ಜಿಲ್ಲಾ ಗ್ರೂಪ್ ಡ ನೌಕರರ ಸಂಘದ ಅಧ್ಯಕ್ಷ ಪ್ರಾಂಕಿ ಪ್ರಾನ್ಸಿಸ್ ಕುಟಿನ್ಹಾ, ದ.ಕ ಜಿಲ್ಲಾ ಸರಕಾರಿ ವಾಹನ ಚಾಲಕರ ಕೇಂದ್ರ ಸಂಘದ ಮಾಜಿ ಅಧ್ಯಕ್ಷ ಬಿ. ವಿಶ್ವನಾಥ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಕಾಶ್ ನಾಯಕ್, ರಾಜ್ಯದಲ್ಲಿ ಸುಮಾರು 5 ಲಕ್ಷದ 20 ಸಾವಿರ ಸರಕಾರಿ ನೌಕರರಿದ್ದು ಈ ನೌಕರರ 6ನೇ ವೇತನ ಆಯೋಗದ ವರದಿಯನ್ನಾಧರಿಸಿ ಮುಂದಿನ ಡಿಸೆಂಬರ್ 2017 ರೊಳಗೆ ವೇತನ ಪರಿಷ್ಕರಣೆ ಆಗಲಿದೆ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದರು.
ಪ್ರಸಕ್ತ ವರ್ಷದಲ್ಲಿ ಸರಕಾರಿ ಸೇವೆಯಿಂದ ವಯೋನಿವೃತ್ತರಾದ ವಾಹನ ಚಾಲಕರಾದ ಆರೋಗ್ಯ ಇಲಾಖೆಯ ರಾಘವ ಶೆಟ್ಟಿ, ಕೃಷಿ ಇಲಾಖೆಯ ಅಲೆಕ್ಸ್ ಡಿ. ಸೋಜ, ವಾಣಿಜ್ಯ ತೆರಿಗೆ ಇಲಾಖೆಯ ಜಿ. ಜಯರಾಮ ಹಾಗೂ ಮಂಗಳೂರು ಮಹಾನಗರಪಾಲಿಕೆಯ ಪುರುಷೋತ್ತಮ ಶೆಟಿಗಾರ್ ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯದರ್ಶಿ ಕೆ. ಬಾಲಕೃಷ್ಣ ವರದಿ ವಾಚಿಸಿದರು, ಖಜಾಂಚಿ ಪೌಲ್ ಡಿ. ಸೋಜ ಲೆಕ್ಕಪತ್ರಗಳನ್ನು ಮಂಡಿಸಿದರು.ಜೊತೆ ಕಾರ್ಯದರ್ಶಿ ಎನ್. ಪುರುಷೋತ್ತಮ ಸ್ವಾಗತಿಸಿ, ಉಪಾಧ್ಯಕ್ಷ ಮಾಧವ ವಂದಿಸಿದರು, ಬಿ. ಮನಮೋಹನ್ ರಾವ್ ಕಾರ್ಯಕ್ರಮ ನಿರೂಪಿಸಿದರು.