ಮ0ಗಳೂರು : ಕಳೆದ ಮೂರು ವರ್ಷದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 93000 ನೂತನ ರೇಶನ್ ಕಾರ್ಡುಗಳನ್ನು ವಿತರಿಸಲಾಗಿದೆ.
ಮಂಗಳವಾರ ನಡೆದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಗೆ ಈ ಮಾಹಿತಿ ನೀಡಿದ ಆಹಾರ ಇಲಾಖೆ ಅಧಿಕಾರಿಗಳು, ಈ ಅವಧಿಯಲ್ಲಿ 32751 ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ. ಆಧಾರ್ ಸಂಖ್ಯೆಯನ್ನು ಕಾರ್ಡುಗಳಿಗೆ ಜೋಡಣೆ ಕಾರ್ಯದಲ್ಲಿ ಈಗಾಗಲೇ ದ.ಕ. ಜಿಲ್ಲೆಯಲ್ಲಿ 1.71 ಲಕ್ಷ ಕಾರ್ಡುಗಳಿಗೆ ಆಧಾರ್ ಸಂಖ್ಯೆ ಜೋಡಣೆ ಆಗಿದೆ. ನೂತನ ಕಾರ್ಡುಗಳಿಗಾಗಿ ಸಲ್ಲಿಸಿದ 13000 ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇದೆ. ಶೀಘ್ರವೇ ಹೊಸ ಪಡಿತರ ಚೀಟಿ ವಿತರಿಸಲಾಗುವುದು ಎಂದು ತಿಳಿಸಿದರು.
ಪಡಿತರ ಚೀಟಿದಾರರು ಬಯೋಮೆಟ್ರಿಕ್ ನೀಡಲು ತಾಲೂಕು ಕೇಂದ್ರಕ್ಕೆ ಹೋಗಬೇಕಾದ ಅಗತ್ಯವಿಲ್ಲ. ಪಂಚಾಯತ್ ಕಚೇರಿಯಲ್ಲಿಯೇ ನೀಡಬಹುದು ಎಂದು ಆಹಾರ ಇಲಾಖೆ ಉಪನಿರ್ದೇಶಕ ರಾಜು ಮೊಗವೀರ ಸಭೆಗೆ ತಿಳಿಸಿದರು.
ಇದಕ್ಕೂ ಮೊದಲು ಜಿ.ಪಂ. ಸದಸ್ಯ ಜನಾರ್ಧನ ಗೌಡ ಅವರು ಪಡಿತರ ಚೀಟಿ ವಿಷಯದ ಬಗ್ಗೆ ಪ್ರಸ್ತಾಪಿಸಿದರು. ಸದಸ್ಯ ಎಂ.ಎಸ್. ಮುಹಮ್ಮದ್ ಅವರು, ಬಿಪಿಎಲ್ ಪಡಿತರ ಚೀಟಿ ಅರ್ಜಿಯ ಪರಿಶೀಲನೆ ಹಂತದಲ್ಲೇ ಸಮರ್ಪಕವಾಗಿ ಪರಿಶೀಲಿಸಿ ಕಾರ್ಡು ವಿತರಿಸಿದರೆ, ರದ್ದತಿಯ ಪ್ರಮೇಯ ಉದ್ಭವಿಸುವುದಿಲ್ಲ ಎಂದರು.
ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಅವರು, ಎಲ್ಲಾ ಅರ್ಹರಿಗೂ ಪಡಿತರ ಚೀಟಿ ಮತ್ತು ಆಹಾರ ಸಾಮಾಗ್ರಿ ತಲುಪುವಂತೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಆರ್‍ಟಿಇ ಗೊಂದಲ: ಆರ್‍ಟಿಇ ಅಡಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಖಾಸಗಿ ಶಾಲೆಗಳು ಸತಾಯಿಸುತ್ತಿರುವ ಬಗ್ಗೆ ಹಾಗೂ ಶಾಲಾ ವ್ಯಾಪ್ತಿಯ ಗಡಿ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಸದಸ್ಯೆ ಮಮತಾ ಗಟ್ಟಿ ಅವರು ಶಾಲೆಯ ಒಂದು ಕಿ.ಮೀ. ವ್ಯಾಪ್ತಿಯ ಬಗ್ಗೆ ಅನೇಕ ಗೊಂದಲಗಳಿವೆ. ಇದರಿಂದ ಅರ್ಹ ಬಡ ವಿದ್ಯಾರ್ಥಿಗಳಿಗೆ ಆರ್‍ಟಿಇ ಅಡಿ ಪ್ರವೇಶ ನೀಡಲು ಸಮಸ್ಯೆಯಾಗಿದೆ ಎಂದರು. ಸದಸ್ಯರಾದ ಹರೀಶ್ ಕಂಜಿಪಿಲಿ, ವಿನೋದ್ ಕುಮಾರ್, ಶಾಹುಲ್ ಹಮೀದ್ ಮತ್ತಿತರರು ಇದರ ಬಗ್ಗೆ ಮಾತನಾಡಿದರು.
ಇದಕ್ಕೆ ಉತ್ತರಿಸಿದ ಡಿಡಿಪಿಐ ವಾಲ್ಟರ್ ಡಿಮೆಲ್ಲೋ, ಶಿಕ್ಷಣ ಹಕ್ಕು ಕಾಯಿದೆಯಡಿ ದ.ಕ. ಜಿಲ್ಲೆಯಲ್ಲಿ 1889 ಸೀಟುಗಳು ಹಂಚಿಕೆಯಾಗಿವೆ. ಈ ಪೈಕಿ ಮೊದಲ ಸುತ್ತಿನಲ್ಲಿ 927 ಸೀಟುಗಳು ಭರ್ತಿಯಾಗಿವೆ. ಉಳಿದ ಸೀಟುಗಳನ್ನು 2ನೇ ಸುತ್ತಿನಲ್ಲಿ ಭರ್ತಿ ಮಾಡಲಾಗುವುದು. ಸರಕಾರದ ಸುತ್ತೋಲೆ ಪ್ರಕಾರ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮದ ಹೊರಗಡೆ ಇರುವ ಶಾಲೆಗಳಿಗೆ ಆರ್‍ಟಿಇ ಅಡಿ ಪ್ರವೇಶಾತಿ ಲಭ್ಯವಾಗುವುದಿಲ್ಲ ಎಂದರು.
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ ಮಾತನಾಡಿ, ಆರ್‍ಟಿಇ ಅಡಿ ಬರುವ ಶಾಲೆಗಳು ಸೀಟು ಪಡೆದ ವಿದ್ಯಾರ್ಥಿಗಳಿಗೆ ಉದ್ದೇಶಪೂರ್ವಕವಾಗಿ ಪ್ರವೇಶ ನೀಡದೆ, ಸತಾಯಿಸಿದರೆ ಅಂತಹ ಶಾಲೆಗಳ ವಿರುದ್ಧ ತೀವ್ರ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಆರ್‍ಟಿಇ ಅಡಿ ನಗರ ಮತ್ತು ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯ ಗೊಂದಲಗಳ ಬಗ್ಗೆ ಸರಕಾರದ ಗಮನಕ್ಕೆ ತರಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಎಚ್‍ಐವಿ ಸೋಂಕಿತರಿಗೆ ಸರಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಔಷಧಿ ಲಭ್ಯ ಇಲ್ಲದಿರುವ ಬಗ್ಗೆ ಹಾಗೂ ಸೋಂಕಿತರಿಗೆ ಪ್ರಯಣ ಭತ್ಯೆ ನೀಡದಿರುವ ಬಗ್ಗೆ ಸದಸ್ಯೆ ಧನಲಕ್ಷ್ಮೀ ಅವರು ಸಭೆಯಲ್ಲಿ ಪ್ರಸ್ತಾವಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯಾಧಿಕಾರಿಗಳು, ಎಚ್‍ಐವಿ ಪೀಡಿತರ ಔಷಧಿಗಳನ್ನು ರಾಜ್ಯದಿಂದ ತರಿಸಿ ಸರಕಾರಿ ಆಸ್ಪತ್ರೆಗಳಿಗೆ ವಿತರಿಸಲಾಗುವುದು ಎಂದರು. ಔಷಧಿಗಳನ್ನು ಸಂಗ್ರಹಿಸದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಿ.ಪಂ. ಸಿಇಓ ಅವರು, ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸಿದರು.
ಮಳೆಗಾಲ ಆರಂಭವಾಗಿರುವುದರಿಂದ ಡೆಂಗ್ಯೂ, ಮಲೇರಿಯಾ ಮತ್ತಿತರ ಸಾಂಕ್ರಾಮಿಕ ರೋಗಗಳು ವ್ಯಾಪಿಸದಂತೆ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆಗೆ ಜಿ.ಪಂ. ಅಧ್ಯಕ್ಷರು ಸೂಚಿಸಿದರು.
ಬೆಳ್ತಂಗಡಿ ತಾಲೂಕು ಸರಳೀಕಟ್ಟೆ ಎಂಬಲ್ಲಿ ಸರಕಾರಿ ಪ್ರೌಢಶಾಲೆ ಕಟ್ಟಡ ಕಾಮಗಾರಿ ಹಲವು ವರ್ಷಗಳಿಂದ ನಿಧಾನಗತಿಯಲ್ಲಿ ನಡೆಯುತ್ತಿರುವ ಬಗ್ಗೆ ಸದಸ್ಯ ಶಾಹುಲ್ ಹಮೀದ್ ಹಾಗೂ ವಿದ್ಯುತ್ ಸಮಸ್ಯೆಗಳ ಸಂದರ್ಭದಲ್ಲಿ ಮೆಸ್ಕಾಂ ಶಾಖಾಧಿಕಾರಿಗಳು ಸಾರ್ವಜನಿಕರೊಂದಿಗೆ ಸರಿಯಾಗಿ ವರ್ತಿಸದಿರುವ ಬಗ್ಗೆ ಸದಸ್ಯ ವಿನೋದ್ ಕುಮಾರ್ ಸಭೆಯಲ್ಲಿ ಪ್ರಸ್ತಾಪಿಸಿದರು.
ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ ಉಪಸ್ಥಿತರಿದ್ದರು.