ದಕ ಜಿಲ್ಲೆಯ ಕೋಮು ಗಲಭೆ ನಿಯಂತ್ರಿಸುವಲ್ಲಿ ವಿಫಲ; ಸಚಿವ ರೈ ರಾಜೀನಾಮೆಗೆ ಎಸ್‍ಡಿಪಿಐ ಆಗ್ರಹ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮುಪ್ರೇರಿತ ಗಲಭೆಗಳನ್ನು ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತವು ವಿಫಲಗೊಂಡಿರುವುದರಿಂದ ಇದರ ನೈತಿಕ ಹೊಣೆಯನ್ನು ಹೊತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ರಾಜಿನಾಮೆಯನ್ನು ನೀಡಬೇಕು ಎಂದು ಎಸ್‍ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಇಲ್ಯಾಸ್ ಮಹಮ್ಮದ್ ತುಂಬೆ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬುಧವಾರ ಬೆಳಿಗ್ಗೆ ಸುಮಾರು 11 ಗಂಟೆಯ ಸಮಯಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಅಮ್ಮುಂಜೆ ಗ್ರಾಮದ ಕಲಾಯಿ ಖೈಬರ್ ನಗರ ನಿವಾಸಿ ದಿ.ಶೇಕಬ್ಬ ಎಂಬವರ ಪುತ್ರ ಆಟೋ ಚಾಲಕ ವೃತ್ತಿಯ ಮಹಮ್ಮದ್ ಅಶ್ರಫ್ (33) ಎಂಬವರನ್ನು ದುಷ್ಕರ್ಮಿಗಳು ಕೋಮು ದ್ವೇಷದಿಂದ ಕೊಲೆಗೈದಿರುತ್ತಾರೆ. ಮೃತರು ಪತ್ನಿ ಮತ್ತು ಎರಡು ಹೆಣ್ಣು ಮತ್ತು ಒಂದು ಗಂಡು ಮಕ್ಕಳನ್ನು ಕಳೆದುಕೊಂಡಿರುತ್ತಾರೆ. ಇವರು ಎಸ್.ಡಿ.ಪಿ.ಐ ಪಕ್ಷದ ಅಮ್ಮುಂಜೆ ಪ್ರದೇಶದ ವಲಯಾಧ್ಯಕ್ಷರಾಗಿದ್ದು, ಅವರು ಬೀಡಿ ಉದ್ಯಮಿ ಶೀನ ಪೂಜಾರಿ ಎಂಬವರನ್ನು ಆಟೋದಲ್ಲಿ ಎಂದಿನಂತೆ ಬಾಡಿಗೆಗೆ ಕರೆದುಕೊಂಡು ಹೋಗಿದ್ದ ವೇಳೆ ಬೆಂಜನಪದವಿನ ಕರಾವಳಿ ಸೈಟ್‍ನ ರಾಮನಗರ ಎಂಬಲ್ಲಿ ದುಷ್ಕರ್ಮಿಗಳು ಪೂರ್ವ ಯೋಜಿತವಾಗಿ ಕೋಮುದ್ವೇಷದಿಂದ ಮಹಮ್ಮದ್ ಅಶ್ರಫ್‍ರವರನ್ನು ಕೊಲೆಗೈದಿರುತ್ತಾರೆ.
ಮಹಮ್ಮದ್ ಅಶ್ರಫ್‍ರವರು ವಾರಕ್ಕೆ 3 ದಿನ ವಿಕಲಚೇತನರಾಗಿರುವ ಶೀನ ಪೂಜಾರಿಯವರನ್ನು ತನ್ನ ರಿಕ್ಷಾದಲ್ಲಿ ಕರಾವಳಿ ಸೈಟ್‍ನ ರಾಮನಗರ ಎಂಬಲ್ಲಿಗೆ ಕರೆತಂದು ಅದೇ ರಿಕ್ಷಾದಲ್ಲಿ ವಾಪಸ್ಸು ಬರುತ್ತಿದ್ದರು. ಸಮಾಜ ಸೇವಕರು, ಸರ್ವಧರ್ಮ ಭಾಂದವರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದ ಅಶ್ರಫ್‍ರವರನ್ನು ಕೊಂದಿರುವ ಘಟನೆಯು ಇಡೀ ಜಿಲ್ಲೆಯಾದ್ಯಂತ ಮುಸ್ಲಿಂ ಸಮುದಾಯದ ಮನಸ್ಸಿನಲ್ಲಿ ಭಯ ಹಾಗೂ ಅಭದ್ರತೆಯನ್ನು ಹುಟ್ಟುಹಾಕಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವಿಶೇಷತಃ ಬಂಟ್ವಾಳ ತಾಲೂಕಿನಲ್ಲಿ ಅವ್ಯಹತವಾಗಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಹತ್ಯಾ ಯತ್ನ, ಚೂರಿಇರಿತ, ಕೊಲೆ ಬೆದರಿಕೆ, ಮಸೀದಿಗಳ ಮೇಲೆ ಕಲ್ಲೆಸೆತ ಹಾಗೂ ಥಳಿತ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದೆ. ಎರಡು ದಿನಗಳ ಹಿಂದೆ ಜೂನ್ 20ರದು ತುಂಬೆಯಲ್ಲೂ ಮುಸ್ಲಿಂ ಹುಡುಗನೊಬ್ಬನ ಕೊಲೆಯತ್ನ ನಡೆದಿತ್ತು, ಎರಡು ತಿಂಗಳ ಹಿಂದೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಅಬ್ದುಲ್ ಜಲೀಲ್ ಕರೋಪಾಡಿಯ ಹತ್ಯೆಯು ನಡೆದಿತ್ತು, ಅಲ್ಲದೆ ಸಂಘಪರಿವಾರದ ನಾಯಕರಿಂದ ಕೋಮು ಗಲಭೆಯ ಪ್ರಚೋದನಕಾರಿ ಭಾಷಣಗಳು ಮತ್ತು ಹೇಳಿಕೆಗಳು ನಿರಂತರವಾಗಿ ನಡೆಯುತ್ತಲೇ ಬಂದಿರುತ್ತದೆ.
ಅಶ್ರಫ್ ಕಲಾಯಿಯವರ ಹತ್ಯೆಯು ಕೂಡ ಸಂಘಪರಿವಾರ ಪ್ರಾಯೋಜಿತ ಕೋಮು ಗಲಭೆ ನಡೆಸುವ ಸಂಚಿನ ಭಾಗವಾಗಿದೆ. ಕಳೆದೊಂದು ವರ್ಷದಲ್ಲಿ ಸುಮಾರು ಆರು ಮಂದಿ ಅಮಾಯಕರನ್ನು ಸಂಘಪರಿವಾರ ಹತ್ಯೆ ನಡೆಸಿದ್ದು ಹಲವು ಮಂದಿಯ ಮೇಲೆ ಹತ್ಯಾ ಯತ್ನದ ದಾಳಿ ನಡೆಸಿರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮು ಪ್ರಕ್ಷುಬ್ದ ವಾತಾವರಣವನ್ನು ಮತ್ತು ಸಂಘಪರಿವಾರದವರ ಅಟ್ಟಹಾಸವನ್ನು ನಿಯಂತ್ರಿಸುವಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿರುವುದರಿಂದ ಈ ಕೊಲೆಯ ನೇರ ಹೊಣೆಯನ್ನು ಜಿಲ್ಲಾಡಳಿತವೇ ಹೊರಬೇಕಾಗಿರುತ್ತದೆ. ಅಶ್ರಫ್ ಕಲಾಯಿಯ ಹಂತಕರನ್ನು ಹಾಗೂ ಸಂಚಿನ ರೂವಾರಿಗಳನ್ನು ಕೂಡಲೇ ಬಂಧಿಸಿಸಬೇಕು ಹಾಗೂ ಜಿಲ್ಲಾದ್ಯಂತ ಕೋಮು ಗಲಭೆ ನಡೆಸಲು ಯತ್ನಿಸುವ ಸಂಘಪರಿವಾರದ ಸಂಚನ್ನು ಬಯಲುಗೊಳಿಸಿ ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಸ್‍ಡಿಪಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ರಾಜ್ಯ ಸರಕಾರದೊಂದಿಗೆ ಆಗ್ರಹಿಸಿದರು.
ಅಲ್ಲದೆ ಮಹಮ್ಮದ್ ಅಶ್ರಫ್‍ರವರ ಕೊಲೆಗೈದ ಹಂತಕರನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳಬೇಕು. ಮಹಮ್ಮದ್ ಅಶ್ರಫ್‍ರವರ ಕುಟುಂಬಕ್ಕೆ ಸೂಕ್ತ ಪರಿಹಾರ ಧನವನ್ನು ಸರಕಾರವು ನೀಡಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘಪರಿವಾರದ ಕಾನೂನುಬಾಹಿರ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರುವುದರಿಂದ ಕೂಡಲೇ ಸರಕಾರವು ಆರ್.ಎಸ್.ಎಸ್ ಸಂಘಟನೆಯನ್ನು ನಿಷೇಧಿಸಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ಸಿದ್ದೀಕ್ ಪುತ್ತೂರು (ಜಿಲ್ಲಾ ಉಪಾಧ್ಯಕ್ಷರು, ಎಸ್‍ಡಿಪಿಐ, ದ.ಕ. ಜಿಲ್ಲೆ), ಇಕ್ಬಾಲ್ ಬೆಳ್ಳಾರೆ (ಜಿಲ್ಲಾ ಕಾರ್ಯದರ್ಶಿ, ಎಸ್‍ಡಿಪಿಐ, ದ.ಕ. ಜಿಲ್ಲೆ), ಇಕ್ಬಾಲ್ ಗೂಡಿನಬಳಿ (ಜಿಲ್ಲಾ ಕೋಶಾಧಿಕಾರಿ, ಎಸ್‍ಡಿಪಿಐ, ದ.ಕ. ಜಿಲ್ಲೆ), ನಾಸಿರ್ ಸಜಿಪ (ಅಧ್ಯಕ್ಷರು, ಗ್ರಾಮ ಪಂಚಾಯತ್, ಸಜಿಪನಡು), ಉಮರ್ ಸುಳ್ಯ (ಸದಸ್ಯರು, ನಗರ ಪಂಚಾಯತ್, ಸುಳ್ಯ) ಉಪಸ್ಥಿತರಿದ್ದರು