ದ.ಕ. ಮಳೆ: ಜಿಲ್ಲಾಡಳಿತಕ್ಕೆ ಸಕಲ ನೆರವು- ಮುಖ್ಯಮಂತ್ರಿ ಕುಮಾರಸ್ವಾಮಿ
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಗೂ ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಸುರಿಯುತ್ತಿರುವ ತೀವ್ರ ಮಳೆಯ ಪರಿಸ್ಥಿತಿಯನ್ನು ರಾಜ್ಯ ಸರಕಾರ ನಿಕಟವಾಗಿ ಗಮನಿಸುತ್ತಿದ್ದು, ಸಂತ್ರಸ್ತರ ರಕ್ಷಣೆಗೆ ಜಿಲ್ಲಾಡಳಿತಕ್ಕೆ ರಾಜ್ಯ ಸರಕಾರ ಸಕಲ ನೆರವು ನೀಡಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಅತಿವೃಷ್ಟಿ ಬಗ್ಗೆ ಇಂದು ಬೆಳಿಗ್ಗೆ ಅಲ್ಲಿನ ಜಿಲ್ಲಾಧಿಕಾರಿಗಳಿಂದ ತಾನು ಮಾಹಿತಿ ಪಡೆದಿದ್ದು, ಮಳೆ ಹಾನಿ ತೀವ್ರತೆ ಕಡಿಮೆಗೊಳಿಸಲು ಮತ್ತು ಸಂತ್ರಸ್ತರ ಪ್ರಾಣಹಾನಿ ತಪ್ಪಿಸಲು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಒತ್ತು ನೀಡಲು ಸೂಚಿಸಿದ್ದೇನೆ. ಈಗಾಗಲೇ ಜಿಲ್ಲಾಡಳಿದೊಂದಿಗೆ ರಾಜ್ಯ ಸರಕಾರದ ಹಿರಿಯ ಅಧಿಕಾರಿಗಳು ಸರಕಾರ ನಿರಂತರ ಸಂಪರ್ಕದಲ್ಲಿದ್ದು, ಪರಿಸ್ಥಿತಿಯ ಮೇಲೆ ನಿಗಾ ಇಡಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಸಂತ್ರಸ್ತರಿಗೆ ತಕ್ಷಣದ ಮೂಲಸೌಕರ್ಯವನ್ನು ಒದಗಿಸುವುದರೊಂದಿಗೆ ಪರಿಹಾರವನ್ನು ತ್ವರಿತವಾಗಿ ನೀಡಲು ಸೂಚಿಸಲಾಗಿದೆ. ಜಿಲ್ಲಾಡಳಿತಕ್ಕೆ ಹೆಚ್ಚುವರಿ ಅತಿವೃಷ್ಟಿ ಅನುದಾನ ನೀಡಲು ರಾಜ್ಯ ಸರಕಾರ ಸಿದ್ಧವಿದೆ.
ಮಳೆಯಿಂದ ಹಾನಿಗೊಂಡಿರುವ ರಸ್ತೆ, ವಿದ್ಯುತ್ ಸಂಪರ್ಕಗಳನ್ನು ಆದ್ಯತೆಯಲ್ಲಿ ದುರಸ್ತಿಗೊಳಿಸಲಾಗುವುದು. ಸಮುದ್ರ ತೀರ ಪ್ರದೇಶಗಳಲ್ಲಿ ಕಡಲಕೊರತೆ ಸಾಧ್ಯತೆ ಇರುವುದರಿಂದ ಈ ಬಗ್ಗೆ ನಿಗಾ ಇಡಲೂ ಸೂಚಿಸಲಾಗಿದೆ. ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದ್ದು, ಅಗತ್ಯ ಬಿದ್ದರೆ ರಜೆ ವಿಸ್ತರಿಸುವ ನಿರ್ಧಾರವನ್ನು ಜಿಲ್ಲಾಧಿಕಾರಿ ಕೈಗೊಳ್ಳಲಿದ್ದಾರೆ.
ಈಗಾಗಲೇ ಮಂಗಳೂರು ಮತ್ತು ಉಡುಪಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ (NDRF) ಕಳುಹಿಸಲಾಗಿದೆ.
ಅತಿವೃಷ್ಟಿಯ ಈ ಸಂಕಷ್ಟದ ಸಂದರ್ಭದಲ್ಲಿ ರಾಜ್ಯ ಸರಕಾರ ಜನತೆಯೊಂದಿಗೆ ಇದೆ.
ಸಾರ್ವಜನಿಕರೂ ಈ ನಿಟ್ಟಿನಲ್ಲಿ ಸರಕಾರದೊಂದಿಗೆ ಸಹಕರಿಸಬೇಕು ಎಂದು ಮುಖ್ಯಮಂತ್ರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.