Home Mangalorean News Kannada News ದ.ಕ: 3.62 ಲಕ್ಷ ಮಕ್ಕಳಿಗೆ ದಡಾರ ಚುಚ್ಚುಮದ್ದು ನೀಡಿಕೆ

ದ.ಕ: 3.62 ಲಕ್ಷ ಮಕ್ಕಳಿಗೆ ದಡಾರ ಚುಚ್ಚುಮದ್ದು ನೀಡಿಕೆ

Spread the love

ದ.ಕ: 3.62 ಲಕ್ಷ ಮಕ್ಕಳಿಗೆ ದಡಾರ ಚುಚ್ಚುಮದ್ದು ನೀಡಿಕೆ

ಮ0ಗಳೂರು : ಫೆಬ್ರವರಿ 7ರಿಂದ ಆರಂಭವಾಗಿರುವ ದಡಾರ ಮತ್ತು ರುಬೆಲ್ಲಾ ಅಭಿಯಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆ.21ರವರೆಗೆ 362489 ಮಕ್ಕಳಿಗೆ ಚುಚ್ಚಮದ್ದು ನೀಡಲಾಗಿದೆ.

ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಸಂಬಂಧ ನಡೆದ ಸಭೆಯಲ್ಲಿ ಈ ಮಾಹಿತಿ ನೀಡಲಾಯಿತು. 9 ತಿಂಗಳಿನಿಂದ 5 ವರ್ಷದವರೆಗಿನ 101485 ಮಕ್ಕಳು, 5-10 ವರ್ಷದ 123103 ಮಕ್ಕಳು ಹಾಗೂ 10-15 ವರ್ಷದ 137901 ಮಕ್ಕಳಿಗೆ ಇದುವರೆಗೆ ಚುಚ್ಚುಮದ್ದು ನೀಡಲಾಗಿದೆ.

ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ 71213, ಗ್ರಾಮಾಂತರ ವ್ಯಾಪ್ತಿಯಲ್ಲಿ 83711, ಬಂಟ್ವಾಳ ತಾಲೂಕಿನಲ್ಲಿ 66328, ಬೆಳ್ತಂಗಡಿ ತಾಲೂಕಿನಲ್ಲಿ 50837, ಪುತ್ತೂರು ತಾಲೂಕಿನಲ್ಲಿ 61846 ಹಾಗೂ ಸುಳ್ಯ ತಾಲೂಕಿನಲ್ಲಿ 28478 ಮಕ್ಕಳು ಚುಚ್ಚುಮದ್ದು ಪಡೆದಿರುತ್ತಾರೆ.

ಶೇಕಡಾವಾರು ಮಂಗಳೂರು ತಾಲೂಕು-ಶೇ.63.69, ಬಂಟ್ವಾಳ -ಶೇ.74.79, ಪುತ್ತೂರು -ಶೇ.97.75, ಬೆಳ್ತಂಗಡಿ -ಶೇ.89.11 ಹಾಗೂ ಸುಳ್ಯ ತಾಲೂಕಿನಲ್ಲಿ ಶೇ.90.28 ಸಾಧನೆಯಾಗಿದ್ದು, ಜಿಲ್ಲೆಯಲ್ಲಿ ಶೇಕಡಾ 74.91ರಷ್ಟು ಸಾಧನೆಯಾಗಿದೆ.
ಇದಲ್ಲದೇ, ಪ್ರತೀ ದಿನ ನಿಗದಿತ ಗುರಿಯಲ್ಲಿ ಚುಚ್ಚುಮದ್ದು ಪಡೆಯದ 15319 ಮಕ್ಕಳಿಗೂ ಬಳಿಕ ದಡಾರ ಲಸಿಕೆ ನೀಡಲಾಗಿದೆ.

ಡಿಸಿ ಸೂಚನೆ: ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ ಮಾತನಾಡಿ, ದಡಾರ ರುಬೆಲ್ಲಾ ಲಸಿಕೆ ನೀಡಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತಮ ಪ್ರಗತಿಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಈಗಾಗಲೇ ನೀಡಿರುವ ಗುರಿಯನ್ನು ಶೇಕಡಾ 100ರಷ್ಟು ಸಂಪೂರ್ಣ ಸಾಧಿಸಲು ಆರೋಗ್ಯ ಇಲಾಖೆ ಇನ್ನಷ್ಟು ಪರಿಣಾಮಕಾರಿಯಾಗಿ ಗಮನಹರಿಸಬೇಕು ಎಂದು ಅವರು ಸೂಚಿಸಿದರು.

ಈಗಾಗಲೇ ಶಾಲೆಗಳಲ್ಲಿ ದಡಾರ ಚುಚ್ಚುಮದ್ದು ನೀಡುವ ದಿನದಂದು ಹಾಜರಾಗದ ಮಕ್ಕಳಿಗೆ ಇನ್ನೊಂದು ಅಭಿಯಾನವನ್ನು ಆಯಾ ಶಾಲೆಗಳಲ್ಲಿ ನಡೆಸಿ ಚುಚ್ಚುಮದ್ದು ನೀಡಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಆರೋಗ್ಯ ಇಲಾಖೆಯ ಜತೆಗೂಡಿ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಮಕ್ಕಳ ಆರೋಗ್ಯ ರಕ್ಷಣೆಯಲ್ಲಿ ಯಾವುದೇ ರಾಜೀ ಇಲ್ಲ. ಜಿಲ್ಲೆಯಲ್ಲಿ ಸಾರ್ವಜನಿಕರು ಉತ್ತಮ ರೀತಿಯ ಸಹಕಾರ ನೀಡುತ್ತಿರುವುದು ಶ್ಲಾಘನೀಯ. ಈಗಾಗಲೇ ಚುಚ್ಚುಮದ್ದು ನೀಡಿರುವ ಶಾಲೆ-ಅಂಗನವಾಡಿಗಳಲ್ಲಿ ಮತ್ತೊಮ್ಮೆ ವಿಶೇಷ ಅಭಿಯಾನ ನಡೆಸಿ, ಬಿಟ್ಟುಹೋಗಿರುವ ಮಕ್ಕಳಿಗೆ ಲಸಿಕೆ ನೀಡಲು ಅವರು ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ರಾವ್ ಮಾತನಾಡಿ, ಮಾರ್ಚ್ 1 ರೊಳಗೆ ದಡಾರ ಚುಚ್ಚುಮದ್ದು ನೀಡಿಕೆಯಲ್ಲಿ ಶೇ.100ರಷ್ಟು ಗುರಿ ಸಾಧಿಸಲು ಆರೋಗ್ಯ ಇಲಾಖೆ ಕಾರ್ಯಕ್ರಮ ಹಾಕಿಕೊಂಡಿದೆ ಎಂದರು.

ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ. ಅಶೋಕ್ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 483929 ಮಕ್ಕಳಿಗೆ ದಡಾರ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಜಿಲ್ಲೆಯ ಬಹುತೇಕ ಶಾಲೆ-ಅಂಗನವಾಡಿಗಳಲ್ಲಿ ಶೇ.100ರಷ್ಟು ಈಗಾಗಲೇ ಸಾಧಿಸಲಾಗಿದೆ. ಮಕ್ಕಳ ಪಾಲಕರೇ ಉತ್ಸಾಹದಿಂದ ತಮ್ಮ ಮಕ್ಕಳನ್ನು ಚುಚ್ಚುಮದ್ದು ಹಾಕಲು ಕರೆದುಕೊಂಡು ಬರುತ್ತಿದ್ದಾರೆ. ಆರಂಭದಲ್ಲಿ ಚುಚ್ಚುಮದ್ದು ಹಾಕಲು ಹಿಂಜರಿಯುತ್ತಿದ್ದ ಹಲವಾರು ಪಾಲಕರು ಬಳಿಕ ತಮ್ಮ ಮಕ್ಕಳಿಗೆ ಇಂಜಕ್ಷನ್ ನೀಡಿದ್ದಾರೆ. ಇದಲ್ಲದೇ ಹಲವು ಸಂಘ ಸಂಸ್ಥೆಗಳು, ಸಮಾಜ ಸೇವಕರು ಈ ಅಭಿಯಾನದಲ್ಲಿ ಕೈಜೋಡಿಸಿ ಉತ್ತಮ ಸಹಕಾರ ನೀಡುತ್ತಿದ್ದಾರೆ ಎಂದು ಸಭೆಗೆ ತಿಳಿಸಿದರು.

ಫೆಬ್ರವರಿ 26ರಂದು ಜಿಲ್ಲೆಯ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿಶೇಷ ದಡಾರ-ರುಬೆಲ್ಲಾ ಚುಚ್ಚುಮದ್ದು ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಈಗಾಗಲೇ ಚುಚ್ಚುಮದ್ದು ತೆಗೆದುಕೊಳ್ಳದ ಸಾರ್ವಜನಿಕರು ಅಂದು ತಮ್ಮ ಮಕ್ಕಳಿಗೆ ಚುಚ್ಚುಮದ್ದು ಹಾಕಿಸಿಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು.

ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು, ವೈದ್ಯಕೀಯ ಹಾಗೂ ನರ್ಸಿಂಗ್ ಕಾಲೇಜುಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.


Spread the love

Exit mobile version