ಧರ್ಮದಿಂದ ಸಮಾಜದ ಉಳಿವು: ಬಾರ್ಕೂರು ಮಹಾಸಂಸ್ಥಾನ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಸ್ವಾಮೀಜಿ
ಉಡುಪಿ: ಶ್ರೀ ಬಾರ್ಕೂರು ಮಹಾಸಂಸ್ಥಾನದಲ್ಲಿ ಶ್ರೀ ವಿಶ್ವ ಸಂತೋಷ ಭಾರತೀ ಶ್ರೀಪಾದರ ನೇತೃತ್ವದಲ್ಲಿ ಎಪ್ರೀಲ್ 19 ರಿಂದ 21 ರವರೆಗೆ ನಡೆಯು ಶ್ರೀ ನಾಗದೇವರ ಮತ್ತು ಮೂಲದೈವಗಳ ಪುನಃ ಪ್ರತಿಷ್ಠೆ ಮತ್ತು ನಾಗಮಂಡಲೋತ್ಸವ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮಗಳಿಗೆ ಬುಧವಾರ ಚಾಲನೆ ನೀಡಲಾಯಿತು.
ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಸುಬ್ರಹಣ್ಯದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮಿಜಿ ಉದ್ಘಾಟಿಸಿ ಬಾರಕೂರು ದೈವ ದೇವರ ನೆಲೆಬೀಡಾಗಿದ್ದು,ಇದರ ಉಳಿಯುವಿಕೆಗೆ ಎಲ್ಲಾ ಬಂಟ ಸಮುದಾಯವನ್ನು ಒಗ್ಗೂಡಿಸುವ ಪ್ರಯತ್ನವಾಗಿ ಆರಂಭಿಸಿರುವ ಬಾರಕೂರು ಮಹಾಸಂಸ್ಥಾನದ ಪ್ರಯತ್ನ ಶ್ಲಾಘನಾರ್ಹ. ಮನುಷ್ಯ ತನ್ನ ಇತಿಮಿತಿಯಲ್ಲಿ ಜೀವನ ನಡೆಸಿದಾಗ ಅವನಿಗೆ ಜೀವನ ಯಶಸ್ಸು ಸಿಗುವುದು. ಅದರಂತೆಯೇ ದೈವ, ದೇವತೆಗಳ ನಂಬಿಕೆಯಿಂದ ಸಮಾಜದೊಂದಿಗೆ ನಮ್ಮ ಬದುಕು ಕೂಡ ಸಾರ್ಥಕವಾಗುತ್ತದೆ. ಸಮಾಜ ಸಾವಿರಾರು ನಿಯಮಗಳ ಮೇಲೆ ನಿಂತಿರುವುದಕ್ಕೆ ಇಲ್ಲಿರುವ ಧರ್ಮವೇ ಕಾರಣ. ಒಂದೇ ಕಡೆ ಸೇರಿಸುವಂತಹ ಕೆಲಸವನ್ನು ಇಂತಹ ಧಾರ್ಮಿಕ ಕಾರ್ಯಕ್ರಮಗಳು ಮಾಡುತ್ತವೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮೂಡಬಿದರೆ ಆಳ್ವಾಸ್ ಶಿಕ್ಷಣ ಸಂಸ್ಥಾನದ ಡಾ ಮೋಹನ್ ಆಳ್ವ ಅವರು ಬಾರ್ಕೂರು ಕ್ಷೇತ್ರ ಮಹಾತ್ಮೆ ಪ್ರಸಂಗವನ್ನು ಬಿಡುಗಡೆ ಮಾಡಿ ಮಾತನಾಡಿ ಬಂಟರು ಧರ್ಮವನ್ನು ಮುಂದಿಟ್ಟುಕೊಂಡು ಬದುಕುವ ವಿಶಾಲ ಹೃದಯದವರು. ಅವರು ಸದಾ ದಾನಕ್ಕೆ ಹೆಸರಾಗಿದ್ದು, ದೇವಸ್ಥಾನಗಳ ಅಭಿವೃದ್ಧಿಯಲ್ಲಿ ಬಂಟರು ಮೊದಲಿಗರಾಗಿದ್ದಾರೆ. ಆದ್ದರಿಂದ ಮುಂದಿನ ದಿನಗಳಲ್ಲಿ ಬಾರ್ಕೂರು ಮಹಾ ಸಂಸ್ಥಾನದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸೋಣ ಎಂದರು.
ಬಾರ್ಕೂರು ಮಹಾಸಂಸ್ಥಾನದ ವಿಶ್ವ ಸಂತೋಷ ಭಾರತಿ ಶ್ರೀಪಾದರು ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಪ್ರಮುಖ ದಾನಿಗಳನ್ನು ಗೌರವಿಸಲಾಯಿತು.
ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ರೈ, ಮಂದಾರ್ತಿ ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಧನಂಜಯ ಶೆಟ್ಟಿ, ಪೆರ್ಡೂರು ಮೇಳದ ವ್ಯವಸ್ಥಾಪಕ ವೈ ಕರುಣಾಕರ ಶೆಟ್ಟಿ, ಪೂನಾ ಕನ್ನಡದ ಸಂಘದ ಅಧ್ಯಕ್ಷ ಕುಶಲ ಹೆಗ್ಡೆ, ಪೂನಾ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ, ಮುಂಬೈ ಬಂಟರ ಸಂಘದ ಮಾಜಿ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ತಿರ್ಥಹಳ್ಳಿ ಬಂಟರ ಸಂಘದ ಗೌರವಾಧ್ಯಕ್ಷ ಅಡ್ಡಮನೆ ಪ್ರಬಾಕರ ಶೆಟ್ಟಿ, ಪ್ರಸಂಗಕರ್ತ ಬಸವರಾಜ ಶೆಟ್ಟಿಗಾರ್, ಗ್ರಾಮಪಂಚಾಯತಿ ಅಧ್ಯಕ್ಷೆ ಶೈಲಾ ಡಿಸೋಜ, ಗುರ್ಮೆ ಸುರೇಶ್ ಬಿ ಶೆಟ್ಟಿ, ವಿಠಲ್ ಹೆಗ್ಡೆ, ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು.
ಸಿ ಎ ಶಂಕರ ಶೆಟ್ಟಿ ಸ್ವಾಗಿತಿಸಿದರು, ಡಾ ಸತ್ಯಪ್ರಕಾಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶೋಕ್, ಅಭಿಷೇಕ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಹೊರೆ ಕಾಣಿಕೆ ಮೆರವಣಿಗೆ
ಬಾರ್ಕೂರು ಮಹಾಸಂಸ್ಥಾನಂ ಭಾರ್ಗವ ಬೀಡು ಲೋಕಾರ್ಪಣೆ ಹಾಗೂ ಶ್ರೀ ನಾಗದೇವರ ಮತ್ತು ಮೂಲದೈವಗಳ ಪುನಃ ಪ್ರತಿಷ್ಠೆ ಮತ್ತು ನಾಗಮಂಡಲೋತ್ಸವ ಪ್ರಯುಕ್ತ ಹೊರೆ ಕಾಣಿಕೆ ಮೆರವಣಿಗೆ ಬುಧವಾರ ಬೆಳಿಗ್ಗೆ ಜರುಗಿತು.
ಬೇರೆ ಬೇರೆ ಕಡೆಯಿಂದ ಬಂದ ಹೊರೆ ಕಾಣಿಕೆಗಳನ್ನು ಒಗ್ಗೂಡಿಸಿ ಬ್ರಹ್ಮಾವರದ ಗಾಂಧಿ ಮೈದಾನದಿಂದ ಅದ್ದೂರಿ ಮೆರವಣಿಗೆ ಮೂಲಕ ಬ್ರಹ್ಮಾವರ ಮುಖ್ಯ ಪೇಟೆ ಮೂಲಕ ಸಾಗಿ ಸಂಸ್ಥಾನಕ್ಕೆ ತರಲಾಯಿತು. ಮಾಜಿ ಜಿಪಂ ಅಧ್ಯಕ್ಷ ಭುಜಂಗ ಶೆಟ್ಟಿ ಹಾಗೂ ಟ್ರಸ್ಟಿನ ಸದಸ್ಯ ಬೆಳಗಾವಿ ವಿಠಲ ಹೆಗ್ಡೆ ಅವರು ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು.