ಧರ್ಮದ ಹೆಸರಿನಲ್ಲಿ ಒಡಕು ಮೂಡಿಸುವ ಸುಳ್ಳು ದೇಶಭಕ್ತರನ್ನು ತೊಲಗಿಸಬೇಕು ; ದಿನೇಶ್ ಅಮೀನ್ ಮಟ್ಟು
ಉಡುಪಿ: ಧರ್ಮದ ಆಧಾರದಲ್ಲಿ ಜನರಲ್ಲಿ ಒಡಕು ಮೂಡಿಸಿ ದೇಶಭಕ್ತಿಯ ನಾಟಕವನ್ನಾಡುವ ಸುಳ್ಳು ದೇಶಭಕ್ತರನ್ನು ಸಿದ್ದಾಂತದ ಅಡಿಯಲ್ಲಿ ದೇಶದಿಂದ ತೊಲಗಿಸುವ ಕೆಲಸ ಇಂದು ನಡೆಯಬೇಕಾದ ಅಗತ್ಯತೆ ಇದೆ ಎಂದು ರಾಜ್ಯದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ, ಪತ್ರಕರ್ತರಾದ ದೀನೇಶ್ ಅಮೀನ್ ಮಟ್ಟು ಹೇಳಿದರು.
ಅವರು ಉಡುಪಿ ಜಿಲ್ಲಾ ಕಾಂಗ್ರೆಸ್ ಮತ್ತು ಜಿಲ್ಲಾ ಸೇವಾ ದಳ ಜಂಟಿಯಾಗಿ ಕ್ವಿಟ್ ಇಂಡಿಯಾ ಚಳುವಳಿಯ 75 ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಬುಧವಾರ ನಗರದ ಕ್ಲಾಕ್ ಟವರ್ ಬಳಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇಂದು ದೇಶ ಹಾಗೂ ರಾಜ್ಯಗಳು ಮತಾಂಧತೆ, ಜಾತಿವಾದದ ಪರಿಣಾಮ ಭಯದಿಂದ ಬುದುಕುತ್ತಿದ್ದು ಅದನ್ನು ಮೊದಲು ತೊಡೆದು ಹಾಕುವುದರ ಮೂಲಕ ದೇಶ ಮತ್ತು ರಾಜ್ಯವನ್ನು ಭಯಮುಕ್ತವಾಗಿರಿಸಬೇಕಾಗಿದೆ. ಇಂದು ದೇಶಭಕ್ತಿ ಮತ್ತು ರಾಷ್ಟ್ರಿಯತೆ ವಿಷಯ ಪ್ರತಿಯೊಬ್ಬರಲ್ಲೂ ಚರ್ಚೆಯಾಗುತ್ತಿದೆ. ಇದರ ಕುರಿತು ಚರ್ಚೆ ಮಾಡುತ್ತಿರುವ ರಾಷ್ಟ್ರ ಭಕ್ತರೆನಿಸಿಕೊಳ್ಳುವ ಆರ್ ಎಸ್ ಎಸ್ ಅಥವಾ ಸಂಘಪರಿವಾರದ ಸಂಘಟನೆಗಳು ಕೇವಲ ಪ್ರಚಾರಕ್ಕಾಗಿ ತಮ್ಮ ದೇಶಭಕ್ತಿಯನ್ನು ತೋರಿಸಿ ಜನರಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡುತ್ತಿವೆ. ಸ್ವಾತಂತ್ರ್ಯ ಹೋರಾಟದಲ್ಲಿ ಕೇವಲ ಒಬ್ಬನೇ ಒಬ್ಬ ಸಂಘಪರಿವಾರದ ನಾಯಕ ಕೂಡ ಭಾಗವಹಿಸದೆ ಇಂದು ರಾಷ್ಟ್ರೀಯತೆಯ ಕುರಿತು ಮಾತನಾಡುವ ಕೆಲಸ ಮಾಡುತ್ತಿದ್ದಾರೆ. ಕಳೆದ 52 ವರ್ಷಗಳಿಂದ ತನ್ನ ಕೇಂದ್ರ ಕಚೇರಿಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸದ ಆರ್ ಎಸ್ ಎಸ್ ಇಂದು ರಾಷ್ಟ್ರೀಯತೆ ಮತ್ತು ದೇಶಭಕ್ತಿಯ ಕುರಿತಾಗಿ ಮಾತನಾಡುತ್ತಿರುವುದು ವಿಪರ್ಯಾಸದ ಸಂಗತಿ, ಇದರ ಕುರಿತು ನಿಜವಾದ ದೇಶಪ್ರೇಮ ಮೆರೆಯುವ ಪ್ರತಿಯೊಬ್ಬ ನಾಗರಿಕರು ಕೂಡ ಎಚ್ಚೆತ್ತುಕೊಂಡು ಜಾಗೃತರಾಗಬೇಕಾಗಿದೆ. ದೇಶ ಪೇಮದ ಮುಖವಾಡ ಹೊತ್ತಿರುವ ಇಂತಹ ದೇಶದ್ರೋಹಿಗಳ ಮುಖವಾಡ ಕಳಚಬೇಕಾದ ಅನಿವಾರ್ಯತೆ ಇಂದು ಇದೆ ಎಂದರು.
ಹಿಂದೂ ಧರ್ಮವೇ ಶ್ರೇಷ್ಟ ಎಂದು ಹೇಳಿ ದೇಶದಲ್ಲಿ ಹಿಂದೂ ಧರ್ಮದ ಹೆಸರಿನಲ್ಲಿ ನಡೆಸುತ್ತಿರುವ ಅನ್ಯಾಯದ ವಿರುದ್ದ ಪ್ರತಿಯೊಬ್ಬರು ಕೂಡ ಹೋರಾಡಬೇಕಾಗದ ಅಗತ್ಯತೆ ಇದ್ದು, ಇಂದು ನಮಗೆ ಸ್ವಾಮಿ ವಿವೇಕಾನಂದ, ನಾರಾಯಣ ಗುರುಗಳು ತೋರಿಸಿದ ಹಿಂದೂ ಧರ್ಮದ ಅಗ್ಯತತೆ ಇದ್ದು, ಕಲ್ಲಡ್ಕ ಪ್ರಭಾಕರ ಭಟ್, ಅಮಿತ್ ಶಾ ಅವರು ಹೇಳಿಕೊಡುವ ಹಿಂದೂ ಧರ್ಮದ ಅಗತ್ಯ ಇಲ್ಲ. ಹಿಂದೂ ಸಂಘಟನೆಗಳು ಕೇವಲ ಒಂದು ಪಕ್ಷದ ಏಜೆಂಟರಂತೆ ವರ್ತಿಸಿ ಅವರಿಗಾಗಿ ಚುನಾವಣಾ ಪ್ರಚಾರದಲ್ಲೂ ಭಾಗವಹಿಸುವುದು ಸರಿಯಲ್ಲ. ಧರ್ಮ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಖಾಸಗಿ ವಿಚಾರವಾಗಿದ್ದು ಅದನ್ನು ವೈಭವಿಕರಿಸುವ ಕೆಲಸ ಸಲ್ಲದು. ಧಾರ್ಮಿಕ ಗುರುಗಳು ಎನಿಸಿಕೊಂಡವರು ನಿಜವಾದ ಹಿಂದೂ ಧರ್ಮದ ಕುರಿತು ಜನರಿಗೆ ತಿಳಿ ಹೇಳುವುದರ ಮೂಲಕ ಸಮಾಜದಲ್ಲಿ ಶಾಂತಿ ನೆಲೆಸುವ ಕೆಲಸ ಮಾಡಬೇಕು. ಒಂದು ಧರ್ಮವನ್ನು ತಮ್ಮ ಲಾಭಕ್ಕಾಗಿ ಬಳಸಿ ಇನ್ನೋಬ್ಬರನ್ನು ಎತ್ತಿಕಟ್ಟುವುದರ ಬದಲು ಪ್ರತಿಯೊಬ್ಬರು ನಮ್ಮನ್ನು ನಾವು ಪರಸ್ಪರ ಪ್ರೀತಿಸುವುದನ್ನು ಕಲಿಯಬೇಕಾಗಿದೆ ಎಂದರು.
ಇಂದು ದೇಶದಲ್ಲಿ ಅಧಿಕಾರ ಹಾಗೂ ಹಣದ ಬಲದಿಂದ ಸಾಂವಿಧಾನಿಕ ಸಂಸ್ಥೆಗಳನ್ನು ತಮ್ಮ ಕೈಗೊಂಬೆಗಳಾಗಿ ಆಡಿಸುವ ಕೆಲಸ ನಡೆಯುತ್ತಿದೆ. ಮತದಾರರನ್ನು ಹಣದ ಮೂಲಕ ಕೊಂಡು ಕೊಳ್ಳುವ ಕೆಟ್ಟ ಸಂಸ್ಕೃತಿ ದೇಶದಲ್ಲಿದೆ ಇದರಿಂದ ಪವಿತ್ರವಾದ ಮತದಾನಕ್ಕೆ ಕಳಂಕ ತರುತ್ತಿದ್ದು ಅದಕ್ಕೆ ಸ್ಪಷ್ಟ ಉದಾಹರಣೆ ಎಂಬಂತೆ ಗುಜರಾತಿನ ರಾಜ್ಯ ಸಭ ಚುನಾವಣೆಯಾಗಿದೆ. ಕೊನೆಯ ಕ್ಷಣದಲ್ಲಿ ಚುನಾವಣಾ ಆಯೋಗ ನೈಜ ತೀರ್ಪನ್ನು ನೀಡುವುದರ ಮೂಲಕ ಮತದಾನದ ಘನತೆಯನ್ನು ಹೆಚ್ಚಿಸುವ ಕೆಲಸ ಮಾಡಿದ್ದಾರೆ. ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಜನರಲ್ಲಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದು ದೇಶದ ಸಂವಿಧಾನ ಭಯದಲ್ಲಿದೆ ಅದನ್ನು ಉಳಿಸುವ ಕೆಲಸ ನಡೆಯಬೇಕಾಗಿದೆ ಅಂತಹ ಕೆಲಸ ಯುವಕರಿಂದ ಮಾತ್ರ ಸಾಧ್ಯ ಈ ನಿಟ್ಟಿನಲ್ಲಿ ಯುವಜನರು ನೈಜ ದೇಶಪ್ರೇಮದ ಮೂಲಕ ಜನರನ್ನು ಜಾಗೃತಗೊಳಿಸುವ ಕೆಲಸ ಮಾಡಬೇಕಾಗಿದೆ ಎಂದರು.
ಸಭೆಗೂ ಮುನ್ನ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಧ್ವಜಾರೋಹಣ ನೇರವೇರಿಸಿ ಬಳಿಕ ಬ್ರಹ್ಮಗಿರಿ, ಅಜ್ಜರಕಾಡು, ಹಳೆ ತಾಲೂಕು ಆಫೀಸ್, ಡಯಾನಾ ಸರ್ಕಲ್, ಕೆ ಎಮ್ ಮಾರ್ಗ ಮೂಲಕ ಕ್ಲಾಕ್ ಟವರ್ ತನಕ ಜಾಥಾ ನಡೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಕಾರ್ಕಳ ಮಾಜಿ ಶಾಸಕ ಗೋಪಾಲ ಭಂಡಾರಿ, ಜಿಲ್ಲಾ ಸೇವಾ ದಳ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಂಗ್ರೆಸ್ ನಾಯಕರುಗಳಾದ, ನರಸಿಂಹ ಮೂರ್ತಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ವೆರೋನಿಕಾ ಕರ್ನೆಲಿಯೊ, ಎಮ್ ಎ ಗಫೂರ್, ಹರೀಶ್ ಕಿಣಿ, ಕೃಷ್ಣ ರಾಜ ಸರಳಾಯ, ಉದ್ಯಾವರ ನಾಗೇಶ್ ಕುಮಾರ್, ಮೀನಾಕ್ಷಿ ಮಾಧವ ಬನ್ನಂಜೆ, ಸೆಲಿನಾ ಕರ್ಕಡ, ವಿಘ್ನೇಶ್ ಕಿಣಿ, ಮುರಳಿ ಶೆಟ್ಟಿ, ದಿನೇಶ್ ಪುತ್ರನ್, ಅಮೃತ್ ಶೆಣೈ, ಚಂದ್ರಿಕಾ ಶೆಟ್ಟಿ, ಕ್ರಿಸ್ಟನ್ ಆಲ್ಮೇಡಾ, ನೀರಜ್ ಪಾಟೀಲ್, ಯತೀಶ್ ಕರ್ಕೇರಾ, ಪ್ರಖ್ಯಾತ್ ಶೆಟ್ಟಿ, ಪ್ರಶಾಂತ್ ಪೂಜಾರಿ, ರಮೇಶ್ ಕಾಂಚನ್, ವಿಶ್ವಾಶ್ ಶೆಟ್ಟಿ, ಇಚ್ಚಿತಾರ್ಥ ಶೆಟ್ಟಿ, ಡಾ ಸುನೀತಾ ಶೆಟ್ಟಿ, ರೋಶನಿ ಒಲಿವೇರ, ಜ್ಯೋತಿ ಹೆಬ್ಬಾರ್, ಮೆಲ್ವಿನ್ ಡಿಸೋಜ, ಉಮೇಶ್ ನಾಯ್ಕ್, ಪ್ರಕಾಶ್ ಅಂದ್ರಾದೆ ಹಾಗೂ ಇತರರು ಉಪಸ್ಥಿತರಿದ್ದರು.