ಧರ್ಮಸಂಸತ್ ಅಧಿವೇಶನ ಕಾರ್ಯಾಲಯ ಕಚೇರಿ ಉದ್ಘಾಟನೆ
ಉಡುಪಿ: ಭಾರತ ತ್ಯಾಗ ಭೂಮಿ. ಇಲ್ಲಿ ರಾಜಪೀಠಕ್ಕಿಂತ ಗುರು ಪೀಠ ಶ್ರೇಷ್ಠ. ಆದರೆ ಇತ್ತೀಚಿನ ವರ್ಷಗಳಲ್ಲಿ ಹಿಂದೂ ಸಮಾಜದ ಮೇಲೆ ವೈಚಾರಿಕ, ಸಾಂಸ್ಕøತಿಕ, ಅಧಿಕಾರದ ತ್ರಿವಳಿ ದಾಳಿಗಳು ನಿರಂತರವಾಗುತ್ತಿದ್ದು, ಧರ್ಮ ಸಂಸತ್ತು ಇದಕ್ಕೆಲ್ಲಾ ಉತ್ತರ ನೀಡುವಂತಾಗಲಿ ಎಂದು ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ವಿಶ್ವಹಿಂದೂ ಪರಿಷತ್ ಆಶ್ರಯದಲ್ಲಿ ನ. 24ರಿಂದ ಮೂರು ದಿನಗಳ ಕಾಲ ಉಡುಪಿಯಲ್ಲಿ ನಡೆಯುವ ಧರ್ಮಸಂಸತ್ ಅಧಿವೇಶನ ಹಿನ್ನೆಲೆಯಲ್ಲಿ ಶನಿವಾರ ಅಧಿವೇಶನ ಕಾರ್ಯಾಲಯ ಕಚೇರಿ ಉದ್ಘಾಟನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಹಿಂದೂ ಧರ್ಮವನ್ನು ನಿಂದಿಸುವ, ಧರ್ಮಪೀಠಗಳು ಮತ್ತು ಗುರುಪೀಠಗಳಂಥ ಶ್ರದ್ಧಾಕೇಂದ್ರಗಳಲ್ಲಿ ವಿಕೃತಿ ಮೂಡಿಸುವ ಮೂಲಕ ವೈಚಾರಿಕ ದಾಳಿ ನಡೆದರೆ, ಲವ್ ಜಿಹಾದ್ ಹೆಸರಿನಲ್ಲಿ ಮಹಿಳೆಯರನ್ನು ಶೋಷಿಸುವ ಮೂಲಕ ಸಾಂಸ್ಕøತಿಕ ದಾಳಿ ನಡೆಯುತ್ತಿದೆ. ಅಹಿಂದ ಹೆಸರಿನಲ್ಲಿ ಸಮಾಜದಲ್ಲಿ ಅಸಮಾನತೆ, ಲಿಂಗಾಯತ- ವೀರಶೈವ ಎಂಬಿತ್ಯಾದಿಗಳ ಮೂಲಕ ಧರ್ಮವನ್ನು ಒಡೆಯುವ ಕಾರ್ಯವನ್ನು ಅಧಿಕಾರಶಾಹಿ ಮಾಡುತ್ತಿದೆ. ಇವೆಲ್ಲವುಗಳಿಗೆ ಸಂತರು ನೀಡುವ ನಿರ್ಣಯವೇ ಉತ್ತರವಾಗಬೇಕು ಎಂದರು.
ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ನಡೆಯುವ ಧರ್ಮ ಸಂಸತ್ ಅಧಿವೇಶನದಲ್ಲಿ ಸ್ವಯಂಸೇವಕನಾಗಿ ಭಾಗವಹಿಸುವುದಾಗಿ ಸುದ್ದಿಗಾರರಿಗೆ ತಿಳಿಸಿದ ಸಂಸದ ನಳಿನ್‍ಕುಮಾರ್ ಕಟೀಲು, ಸಮಾವೇಶದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ ಯೋಗಿ, ವಿಹಿಂಪ ಪ್ರಮುಖ ಮೋಹನ ಭಾಗವತ್ ಮೊದಲಾದವರು ಭಾಗವಹಿಸುತ್ತಾರೆ. ಪೇಜಾವರ ಶ್ರೀಗಳ ಪರ್ಯಾಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಇಚ್ಛೆಯನ್ನು ಈ ಹಿಂದೆಯೇ ವ್ಯಕ್ತಪಡಿಸಿದ್ದು , ಸಮಾವೇಶಕ್ಕೆ ಆಹ್ವಾನ ನೀಡಲಾಗಿದೆ. ಈ ಬಗ್ಗೆ ಸ್ಥಳೀಯ ಸಂಸದೆ ಶೋಭಾ ಕರಂದ್ಲಾಜೆ ಕೂಡಾ ಯತ್ನಿಸುತ್ತಿದ್ದಾರೆ ಎಂದರು.
ಪರ್ಯಾಯ ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮಾತನಾಡಿ, ಧರ್ಮಗ್ಲಾನಿಯಾದಾಗ ಭಗವಂತನೇ ಧರೆಗವತರಿಸಿ ಬರುವುದಾಗಿ ಶ್ರೀಕೃಷ್ಣನೇ ಗೀತೆಯಲ್ಲಿ ಸಾರಿದ್ದಾನೆ. ಪ್ರಸ್ತುತ ನಡೆಯುತ್ತಿರುವ ಸಾಮಾಜಿಕ ಅಸಮಾನತೆ, ಗೋಹತ್ಯೆ ಇತ್ಯಾದಿಗಳು ತೊಲಗಿದಾಗ ಸಮಾಜದಲ್ಲಿ ಅಶಾಂತಿ ತೊಲಗುತ್ತದೆ. ಶ್ರೀಕೃಷ್ಣನ ನಾಡಿನಲ್ಲಿ ನಡೆಯುವ ಸಮಾವೇಶದಲ್ಲಿ ತಳೆಯುವ ನಿರ್ಣಯಗಳ ಜಾರಿಗೆ ಶ್ರೀಕೃಷ್ಣನೇ ಪ್ರೇರಣೆಯಾಗಲಿ ಎಂದು ಆಶಿಸಿದರು.
ಕಚೇರಿ ಉದ್ಘಾಟಿಸಿದ ಪತ್ರಿಕೋದ್ಯಮಿ ಗೌತಮ ಪೈ, ಉಡುಪಿಯಲ್ಲಿ ಎರಡನೇ ಬಾರಿಗೆ ನಡೆಯುವ ಧರ್ಮಸಂಸತ್ ಅಧಿವೇಶನ ಹಿಂದೂ ಧರ್ಮಕ್ಕೆ ದಿಕ್ಸೂಚಿಯಾಗಲಿ. ಸಮಾಜದ ಸಂಕಷ್ಟ ನಿವಾರಣೆಗೆ ಅಧಿವೇಶನ ಮುನ್ನುಡಿಯಾಗಲಿ ಎಂದು ಹಾರೈಸಿದರು.
ವಿಹಿಂಪ ಸಂಘಚಾಲಕ ಟಿ. ಶಂಭು ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿಹಿಂಪ ಉಪಾಧ್ಯಕ್ಷ ಎಂ. ಬಿ. ಪುರಾಣಿಕ್ ಸ್ವಾಗತಿಸಿದರು. ಪ್ರಾಸ್ತಾವಿಕವಗಿ ಮಾತನಾಡಿದ ವಿಹಿಂಪ ಸಂಘಟನಾ ಕಾರ್ಯದರ್ಶಿ ಬಸವರಾಜ್, ನ. 24ರಿಂದ ಮೂರು ದಿನಗಳ ಕಾಲ ನಡೆಯುವ ಧರ್ಮ ಸಂಸತ್ ಅಧಿವೇಶನದಲ್ಲಿ ಸುಮಾರು 2,500 ಮಂದಿ ಸಂತರು ಹಾಗೂ ವಿವಿಧ ಜಾತಿಮುಖಂಡರು ಭಾಗವಹಿಸುವರು. ಪರ್ಯಾಯ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ನಡೆಯುವ ಸಮಾವೇಶದಲ್ಲಿ ಗೋಹತ್ಯೆ ನಿಷೇಧ, ಹಿಂದೂ ಧರ್ಮದಲ್ಲಿನ ಜಾತೀಯತೆ ತೊಲಗಿ ಸಾಮರಸ್ಯ ಸ್ಥಾಪನೆ, ಮತಾಂತರಕ್ಕೆ ತಡೆ ಹಾಗೂ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣ ಕುರಿತು ಪ್ರಮುಖ ನಿರ್ಣಯ ತಳೆಯಲಾಗುವುದು ಎಂದರು.
ವಿಹಿಂಪ ಜಿಲ್ಲಾಧ್ಯಕ್ಷ ಪಾಂಗಾಳ ವಿಲಾಸ ನಾಯಕ್ ವಂದಿಸಿದರು. ವಿಹಿಂಪ ಪ್ರಾಂತ ಸಹಕಾರ್ಯದರ್ಶಿ ಕೃಷ್ಣಮೂರ್ತಿ ನಿರೂಪಿಸಿದರು.