ಧರ್ಮಸ್ಥಳದಲ್ಲಿ ನಲ್ವತ್ತೆಂಟನೇ ವರ್ಷದ ಉಚಿತ ಸಾಮೂಹಿಕ ವಿವಾಹ – 102 ಜೋಡಿ ಗೃಹಸ್ಥಾಶ್ರಮಕ್ಕೆ ಪಾದಾರ್ಪಣೆ

Spread the love

ಧರ್ಮಸ್ಥಳದಲ್ಲಿ ನಲ್ವತ್ತೆಂಟನೇ ವರ್ಷದ ಉಚಿತ ಸಾಮೂಹಿಕ ವಿವಾಹ – 102 ಜೋಡಿ ಗೃಹಸ್ಥಾಶ್ರಮಕ್ಕೆ ಪಾದಾರ್ಪಣೆ

ಉಜಿರೆ: ನಾಡಿವ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಬುಧವಾರ ಮದುವೆಯ ಸಂಭ್ರಮ – ಸಡಗರ. ಸಂದರ್ಭ ನಲ್ವತ್ತೆಂಟನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ. ಸಂಜೆ ಗಂಟೆ 6.48 ಕ್ಕೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಅಮೃತವರ್ಷಿಣಿ ಸಭಾ ಭವನದಲ್ಲಿ 102 ಜೋಡಿ ವಧು-ವರರು ಮಂಗಲಸೂತ್ರ ಧಾರಣೆಯೊಂದಿಗೆ ಗೃಹಸ್ಥಾಶ್ರಮಕ್ಕೆ ಪಾದಾರ್ಪಣೆ ಮಾಡಿದರು.

ಬೆಳಿಗ್ಗೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬೀಡಿನಲ್ಲಿ (ತಮ್ಮ ನಿವಾಸದಲ್ಲಿ) ವಧುವಿಗೆ ಸೀರೆ, ರವಿಕೆ, ಹಾಗೂ ವರನಿಗೆ ಶಾಲು, ಧೋತಿ ನೀಡಿ ಹರಸಿದರು. ನೂತನ ವಧು-ವರರ ಜೋಡಿ ಹೆಗ್ಗಡೆಯವರಿಗೆ ಫಲ ಕಾಣಿಕೆ ಅರ್ಪಿಸಿ ಆಶೀರ್ವಾದ ಪಡೆದರು.

ಬಳಿಕ ಸಂಜೆ ಗಂಟೆ 5 ಕ್ಕೆ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಭವ್ಯ ಮೆರವಣಿಗೆಯಲ್ಲಿ ವಧು-ವರರು ಪ್ರದಕ್ಷಿಣೆ ಬಂದು ಮದುವೆಯ ಸಭಾ ಭವನ “ಅಮೃತವರ್ಷಿಣಿ” ಪ್ರವೇಶಿಸಿದರು.

ಹೆಗ್ಗಡೆಯವರು ಹಾಗೂ ಗಣ್ಯ ಅತಿಥಿಗಳು ಮಂಗಳಸೂತ್ರ ವಿತರಣೆ ಮಾಡಿದರು. ವೇದ ಘೋಷದೊಂದಿಗೆ ಮಂಗಳವಾದ್ಯ ಮೊಳಗಿದಾಗ ಒಂದೇ ಮುಹೂರ್ತದಲ್ಲಿ ಆಯಾ ಜಾತಿ – ಮತ ಸಂಪ್ರದಾಯದಂತೆ ಧಾರ್ಮಿಕ ವಿಧಿ-ವಿಧಾನಗಳನ್ನು ಪೂರೈಸಿ 6.48 ರ ಶುಭ ಮುಹೂರ್ತದಲ್ಲಿ ವಧು-ವರರು ಹಾರ ವಿನಿಮಯ ಮಾಡಿ ವರನು ವಧುವಿಗೆ ಮಂಗಲಸೂತ್ರ ಕಟ್ಟಿದರು.

ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಮಾತನಾಡಿ , ಧಾರ್ಮಿಕ ವಿಧಿ-ವಿಧಾನಗಳ ಮೌಲ್ಯವನ್ನು ಕಾಪಾಡಿಕೊಂಡು, ಸರ್ವಧರ್ಮೀಯರಿಗೂ ಅನುಕೂಲವಾಗುವಂತೆ ಪ್ರತಿವರ್ಷ ಧರ್ಮಸ್ಥಳದಲ್ಲಿ ವೈಭವದಿಂದ ಹೆಗ್ಗಡೆಯವರ ನೇತೃತ್ವದಲ್ಲಿ ಆಯೋಜಿಸುವ ಉಚಿತ ಸಾಮೂಹಿಕ ವಿವಾಹ ಸಮಾರಂಭ ದೇಶಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ಧವರ್iಜಾಗೃತಿಯೊಂದಿಗೆ ಕೃಷಿ, ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಹೆಗ್ಗಡೆಯವರ ಕೊಡುಗೆಯನ್ನು ಶ್ಲಾಘಿಸಿದರು. ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳಿಗೆ ಸ್ವ-ಉದ್ಯೋಗ ಮಾಡಲು ರುಡ್‍ಸೆಟ್ ಸಂಸ್ಥೆಗಳ ಮೂಲಕ ನೀಡುವ ತರಬೇತಿ ಮತ್ತು ಮಾರ್ಗದರ್ಶನವನ್ನು ಅವರು ಕೊಂಡಾಡಿದರು. ಹೆಗ್ಗಡೆಯವರು ಸಾಮೂಹಿಕ ವಿವಾಹದ ಸಂಭ್ರಮದ ಕ್ಷಣಗಳನ್ನು ಕಣ್ತುಂಬಿಕೊಂಡು ತಮ್ಮ ಮನೆಯ ಸಮಾರಂಭದಂತೆ ಆನಂದ, ತೃಪ್ತಿ ಹೊಂದಿದ್ದಾರೆ ಎಂದು ಸಚಿವರು ಬಣ್ಣಿಸಿದರು.

ಸಂತಾನೋತ್ಪತ್ತಿಯಲ್ಲಿ ಮಿತಿ ಇರಲಿ ಎಂದು ಸಚಿವರು ನೂತನ ದಂಪತಿಗಳಿಗೆ ಕಿವಿಮಾತು ಹೇಳಿದರು.

ಚಲನಚಿತ್ರ ನಟ ಶಿವರಾಜ್ ಕುಮಾರ್ ಮಾತನಾಡಿ, 25 ವರ್ಷಗಳ ಹಿಂದೆ ತನ್ನ ಅಪ್ಪಾಜಿ ಜೊತೆಗೆ ಬಂದು ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಭಾಗವಹಿಸಿರುವುದನ್ನು ಅವರು ಧನ್ಯತೆಯಿಂದ ಸ್ಮರಿಸಿ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿಸುವುದು ತನ್ನ ಭಾಗ್ಯವಾಗಿದೆ ಎಂದರು. “ಚಿಗುರಿದ ಕನಸು” ಸಿನೆಮಾ ಶೂಟಿಂಗ್ ಸಂದರ್ಭ 45 ದಿನ ಧರ್ಮಸ್ಥಳದಲ್ಲಿ ಇದ್ದುದನ್ನು ನೆನಪಿಸಿದ ಅವರು ಪವಿತ್ರ ಕ್ಷೇತ್ರದಲ್ಲಿ ಮದುವೆಯಾದ ನೂತನ ದಂಪತಿಗಳ ಜೀವನ ಸುಖ-ಶಾಂತಿಯಿಂದ ಸಾಗಲಿ ಎಂದು ಹಾರೈಸಿದರು.
ಶಾಸಕ ಹರೀಶ್ ಪೂಂಜ ಶುಭಾಶಂಸನೆ ಮಾಡಿದರು.

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಶುಭ ಹಾರೈಸಿ, ಪ್ರತಿ ವರ್ಷ ಧರ್ಮಸ್ಥಳದಲ್ಲಿ ಸರಳ ರೀತಿಯಲ್ಲಿ ಸಾಮೂಹಿಕ ವಿವಾಹವನ್ನು ಏರ್ಪಡಿಸುತ್ತಿದ್ದು ಇಲ್ಲಿ ಮದುವೆಯಾದವರಿಗೆ ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹ ಹಾಗೂ ಗುರು – ಹಿರಿಯರ ಆಶೀರ್ವಾದ ಇದೆ. ಆದುದರಿಂದ ಎಲ್ಲಿಯೂ ಭಿನ್ನಾಭಿಪ್ರಾಯ ಹಾಗೂ ಸಮಸ್ಯೆ ಕಂಡು ಬಂದಿಲ್ಲ. ಪ್ರತಿಯೊಬ್ಬರಿಗೂ ದಾಂಪತ್ಯದ ಮಹತ್ವ ಮತ್ತು ಶ್ರೇಷ್ಠತೆಯನ್ನು ತಿಳಿಸಲಾಗುತ್ತಿದೆ. ಈಗ ಅಲ್ಲಲ್ಲಿ ಧರ್ಮಸ್ಥಳದ ಮಾದರಿಯಲ್ಲಿ ಸಾಮೂಹಿಕ ವಿವಾಹಗಳು ನಡೆಯತ್ತಿರುವುದು ಸಂತಸವಾಗಿದೆ. ಅಲ್ಲದೆ ಕಟೀಲು, ಕೊಲ್ಲೂರು, ಸುಬ್ರಹ್ಮಣ್ಯ ಮೊದಲಾದ ತೀರ್ಥಕ್ಷೇತ್ರಗಳಲ್ಲಿ ನಿತ್ಯವೂ ಮದುವೆಯಾಗುತ್ತಿದೆ.

ಧರ್ಮಸ್ಥಳದಲ್ಲಿ ನಡೆಯುವ ಸಾಮೂಹಿಕ ವಿವಾಹಕ್ಕೆ ಕೊಲ್ಕತ್ತಾದ ಬಿರ್ಲಾ ಟ್ರಸ್ಟ್, ಮುಂಬೈ ಹಾಗೂ ಬೆಂಗಳೂರಿನ ಅನೇಕ ದಾನಿಗಳು ಗುಪ್ತ ದಾನವ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಳೆ-ಬೆಳೆ ಚೆನ್ನಾಗಿ ಆಗಿ ಎಲ್ಲೆಲ್ಲೂ ಸುಖ-ಶಾಂತಿ, ನೆಮ್ಮದಿ ನೆಲೆಸಲಿ ಎಂದು ಹೆಗ್ಗಡೆಯವರು ದೇವರಲ್ಲಿ ಪ್ರಾರ್ಥಿಸಿದರು.

ಹೇಮಾವತಿ ವಿ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್. ಡಿ. ಹರ್ಷೇಂದ್ರ ಕುಮಾರ್, ಚಲನಚಿತ್ರ ನಿರ್ದೇಶಕ ಚಿನ್ನೇಗೌಡ, ವಿಧಾನಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ಆಂದ್ರಪ್ರದೇಶ ಸರ್ಕಾರದ ಕಾರ್ಯದರ್ಶಿ ಗಿರಿಜಾ ಶಂಕರ್, ಗೀತಾ ಶಿವರಾಜ್‍ಕುಮಾರ್ ಮತ್ತು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಉಪಸ್ಥಿತರಿದ್ದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಜಯಶಂಕರ ಶರ್ಮ ಸ್ವಾಗತಿಸಿದರು. ಪಿ. ಸುಬ್ರಹ್ಮಣ್ಯ ರಾವ್ ಧನ್ಯವಾದವಿತ್ತರು. ದೀಕ್ಷಿತ್ ರೈ ಕಾರ್ಯಕ್ರಮ ನಿರ್ವಹಿಸಿದರು.

ನೂತನ ದಂಪತಿಗಳು ದೇವರ ದರ್ಶನದ ಬಳಿಕ ಅನ್ನಪೂರ್ಣ ಭೋಜನಾಲಯದಲ್ಲಿ ಮದುವೆಯ ಊಟ ಮಾಡಿ ಊರಿಗೆ ತೆರಳಿದರು.


Spread the love