ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಮೂರ್ತಿಗೆ ಗುರುವಾರ ಡಿ. ವೀರೇಮದ್ರ ಹೆಗ್ಗಡೆಯವರು ಮತ್ತು ಕುಟುಂಬಸ್ಥರು 216 ಕಲಶಗಳಿಂದ ಪಾದಾಭಿಷೇಕ ಮಾಡಿದರು.
ಧರ್ಮಸ್ಥಳದಲ್ಲಿ ಗುರುವಾರ ರತ್ನಗಿರಿಯಲ್ಲಿರುವ ಭಗವಾನ್ ಬಾಹುಬಲಿ ಮೂರ್ತಿಗೆ 216 ಕಲಶಗಳಿಂದ ಪಾದಾಭಿಷೇಕ ನಡೆಯಿತು.
ಮಂಗಲ ಪ್ರವಚನ ನೀಡಿದ ಕಾರ್ಕಳದ ಲಲಿತಕೀರ್ತಿ ಭಟ್ಟಾರಕರು ಮಾತನಾಡಿ, ಬಾಹುಬಲಿ ನೀಡಿದ ತ್ಯಾಗ, ಅಹಿಂಸೆ ಮತ್ತು ಶಾಂತಿಯ ಸಂದೇಶ ಸಾರ್ವಕಾಲಿಕ ಮೌಲ್ಯ ಹೊಂದಿದ್ದು ಆದರ್ಶ ಹಾಗೂ ಅನುಕರಣೀಯವಾಗಿದೆ ಎಂದರು.
ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆ ಹೊಂದಿರುವ ಧರ್ಮಸ್ಥಳದಲ್ಲಿ ಚತುರ್ವಿಧ ದಾನಗಳನ್ನು ವೀರೇಂದ್ರ ಹೆಗ್ಗಡೆಯವರು ಚಾಚೂ ತಪ್ಪದೆ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಮಹಾರಾಷ್ಟ್ರದ ಮಾಂಗಿ – ತುಂಗಿ ಪವಿತ್ರ ಕ್ಷೇತ್ರದಲ್ಲಿ 108 ಅಡಿ ಎತ್ತರದ ಭಗವಾನ್ ಋಷಭ ದೇವರ ಏಕಶಿಲಾ ಮೂರ್ತಿಯ ಪ್ರತಿಷ್ಠಾ ಮಹೋತ್ಸವವು ಫೆಬ್ರವರಿ 11 ರಿಂದ 17ರ ವರೆಗೆ ನಡೆಯುತ್ತಿರುವುದು ನಮಗೆ ಸಂತೋಷದ ಸಂಗತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆಯವರು, ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಪ್ರೊ.ಎಸ್. ಪ್ರಭಾಕರ್ ಮತ್ತು ಡಾ. ಬಿ. ಯಶೋವರ್ಮ ಮಂಗಲ ದ್ರವ್ಯಗಳಿಂದ ಪಾದಾಭಿಷೇಕ ನಡೆಸಿದರು.