Home Mangalorean News Kannada News ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಸ್ವಾಮಿ ಮೂರ್ತಿಗೆ ಪಾದಾಭಿಷೇಕ

ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಸ್ವಾಮಿ ಮೂರ್ತಿಗೆ ಪಾದಾಭಿಷೇಕ

Spread the love

ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಸ್ವಾಮಿ ಮೂರ್ತಿಗೆ ಪಾದಾಭಿಷೇಕ

ಉಜಿರೆ: ದೇಹ ನಶ್ವರ, ಆತ್ಮ ಶಾಶ್ವತ. ಶರೀರ ಬದಲಾಗಬಹುದು, ಆದರೆ ಆತ್ಮ ಬದಲಾಗುವುದಿಲ್ಲ. ವ್ಯವಹಾರ ಮತ್ತು ನಿಶ್ಚಯವನ್ನು (ನಿಜವನ್ನು) ಅರಿತು ನಾವು ಮೋಕ್ಷ ಸಾಧನೆ ಮಾಡಬೇಕು. ಮೋಕ್ಷ-ಪ್ರಾಪ್ತಿ ನಮ್ಮ ಗುರಿಯಾಗಿರಬೇಕು. ಮುನಿಗಳ ಆಹಾರ-ವಿಹಾರದಲ್ಲಿ ಸೇವೆ ಮಾಡುವುದರಿಂದ ಪುಣ್ಯ ಸಂಚಯವಾಗುತ್ತದೆ ಎಂದು ನರಸಿಂಹರಾಜಪುರದ ಸಿಂಹನಗದ್ದೆ ಬಸ್ತಿ ಮಠದ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಹೇಳಿದರು.

ಅವರು ಶನಿವಾರ ಧರ್ಮಸ್ಥಳದಲ್ಲಿ ರತ್ನಗಿರಿಯಲ್ಲಿ ಭಗವಾನ್ ಬಾಹುಬಲಿ ಸ್ವಾಮಿ ಮೂರ್ತಿಗೆ 216 ಕಲಶಗಳಿಂದ ಪಾದಾಭಿಷೇಕ ನಡೆದ ಸಂದರ್ಭ ಮಂಗಲ ಪ್ರವಚನ ನೀಡಿದರು.

ಇಂದ್ರಾದಿ ದೇವತೆಗಳು ಮಾತ್ರ ಅಭಿಷೇಕ ಮಾಡುತ್ತಾರೆ. ಬಾಹುಬಲಿ ಸ್ವಾಮಿ ಮೂರ್ತಿಯ ಚರಣ ಸ್ಪರ್ಶ ಮಾಡಿ ಪಾದಾಭಿಷೇಕ ಮಾಡಿದವರೆಲ್ಲ ದೇವತೆಗಳಿಗೆ ಸಮಾನರು ಎಂದು ಅವರು ಹೇಳಿದರು.

ದಕ್ಷಿಣ ಭಾರತದಲ್ಲಿ ಸಂಸ್ಕøತಿ, ಸಂಸ್ಕಾರ ಉತ್ತಮವಾಗಿದೆ. ಸಂಸೆಯಲ್ಲಿ ಬೆತ್ತದಿಂದ ರಥ ಎಳೆಯುವ ವಿಧಾನವನ್ನು ಉಲ್ಲೇಖಿಸಿದ ಅವರು ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಅಚ್ಚುಕಟ್ಟಾದ ಆಡಳಿತ ವ್ಯವಸ್ಥೆ, ಸ್ವಚ್ಛತೆ ಮತ್ತು ಚತುರ್ವಿಧ ದಾನ ಪರಂಪರೆಯನ್ನು ಅವರು ಶ್ಲಾಘಿಸಿದರು.

ಧರ್ಮಸ್ಥಳ ಬಸದಿಯಲ್ಲಿರುವ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಹಾಗೂ ರತ್ನಗಿರಿಯಲ್ಲಿರುವ ಭಗವಾನ್ ಬಾಹುಬಲಿಯ ದಿವ್ಯ ಸಂದೇಶವನ್ನು ಅವರು ವಿವರಿಸಿದರು.
ಸೋಂದಾ ಸ್ವಾದಿ ಜೈನ ಮಠದ ಭಟ್ಟಾಕಳಂಕ ಸ್ವಾಮೀಜಿ ಮಾತನಾಡಿ, ನಾವು ನಿತ್ಯವೂ ಮಾಡುವ ಶುಭಾಶುಭ ಕರ್ಮಗಳಿಂದ ಪುಣ್ಯ, ಪಾಪದ ಫಲ ಆತ್ಮನಿಗೆ ಅಂಟಿಕೊಳ್ಳುತ್ತದೆ. ನಮ್ಮನ್ನು ನಾವು ಅರಿತುಕೊಂಡು ಜಪ, ತಪ, ಧ್ಯಾನ ಹಾಗೂ ಸತ್ಕರ್ಮಗಳ ಮೂಲಕ ಆತ್ಮಕಲ್ಯಾಣ ಮಾಡಿಕೊಳ್ಳಬೇಕು. ಆಹಾರ ದಾನದಿಂದ ಅಕ್ಷಯ ಪುಣ್ಯ ಪ್ರಾಪ್ತಿಯಾಗುತ್ತದೆ. ಅಖಿಲಾ ದೇವಿ ಮುನಿಗಳಿಗೆ ಆಹಾರ ದಾನ ಮಾಡಿ ದೇವತೆಯಾದ ಕಥೆಯನ್ನು ಅವರು ವಿವರಿಸಿದರು.

ಕಾರ್ಕಳದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ ನಮ್ಮ ಭವ್ಯ ಪರಂಪರೆಯೇ ಧರ್ಮವಾಗಿದೆ. ಧರ್ಮ ಮತ್ತು ಸಂಸ್ಕøತಿಯನ್ನು ಕಡೆಗಣಿಸಬಾರದು. ನಮ್ಮ ಆಚಾರ-ವಿಚಾರಗಳು ಧರ್ಮ ಮತ್ತು ಸಂಸ್ಕøತಿಯ ನೆಲೆಯಲ್ಲಿದ್ದಾಗ ಮಾತ್ರ ನಾವು ಶಾಂತಿ, ನೆಮ್ಮದಿ ಪಡೆಯಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕ:
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ 2019 ರ ಫೆಬ್ರವರಿ ತಿಂಗಳಿನಲ್ಲಿ ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಸ್ವಾಮಿ ಮೂರ್ತಿಗೆ ಮಹಾಮಸ್ತಕಾಭಿಷೇಕ ನಡೆಯಲಿದೆ ಎಂದು ಪ್ರಕಟಿಸಿದರು.

ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಪ್ರೊ. ಎಸ್. ಪ್ರಭಾಕರ್. ಡಾ. ಬಿ. ಯಶೋವರ್ಮ ಉಪಸ್ಥಿತರಿದ್ದರು.


Spread the love

Exit mobile version