ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ : ರಾಜ್ಯಮಟ್ಟದ ವಸ್ತು ಪ್ರದರ್ಶನ ಉದ್ಘಾಟನೆ
ಉಜಿರೆ: ನಾಡಿನ ಪವಿತ್ರಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವದ ಅಂಗವಾಗಿ ಗುರುವಾರ ಪ್ರೌಢಶಾಲಾ ವಠಾರದಲ್ಲಿ ರಾಜ್ಯ ಮಟ್ಟದ ವಸ್ತುಪ್ರದರ್ಶನ ಪ್ರಾರಂಭಗೊಂಡಿದೆ.
ವಸ್ತು ಪ್ರದರ್ಶನ ಉದ್ಘಾಟಿಸಿದ ದಕ್ಷಿಣಕನ್ನಡ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ ಆರ್ಥಿಕವಾಗಿ ದುರ್ಬಲರ ಸಬಲೀಕರಣಕ್ಕಾಗಿ ಧರ್ಮಸ್ಥಳದ ವತಿಯಿಂದ ಹಮ್ಮಿಕೊಂಡ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ – ಸಾಧನೆಯನ್ನು ಶ್ಲಾಘಿಸಿ ಅಭಿನಂದಿಸಿದರು. ಧರ್ಮ–ಜಾಗೃತಿ ಕಲೆ, ಸಾಹಿತ್ಯ, ಸಂಸ್ಕøತಿ ಸಂರಕ್ಷಣೆ ಮತ್ತು ಉದ್ದೀಪನಕ್ಕೆ ಧರ್ಮಸ್ಥಳದ ಕೊಡುಗೆ ಅಮೂಲ್ಯವಾಗಿದೆ. ಧರ್ಮಸ್ಥಳದ ಮಾರ್ಗದರ್ಶನ, ಪ್ರೇರಣೆಯಿಂದ ಪ್ರತಿಯೊಬ್ಬರ ಮನೆಯೂ, ಮನವೂ ಇಂದು ಬೆಳಗುತ್ತಿದೆ, ಬೆಳೆಯುತ್ತಿದೆ. ಸ್ವಚ್ಛತೆ ಬಗ್ಗೆಯೂ ಜನಸಾಮಾನ್ಯರಲ್ಲಿ ಅರಿವು–ಜಾಗೃತಿ ಮೂಡಿಬರುತ್ತಿದೆ. ವಸ್ತು ಪ್ರದರ್ಶನ ವೀಕ್ಷಣೆಯಿಂದ ಪಡೆದ ಮಾಹಿತಿ, ಅನುಭವವನ್ನು ಜೀವನದಲ್ಲಿಯೂ ಅಳವಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಜ್ಞಾನದಾನವೇ ವಸ್ತು ಪ್ರದರ್ಶನದ ಉದ್ದೇಶವಾಗಿದೆ. ಜಾತ್ರೆ, ಉತ್ಸವಗಳು ಶಿಸ್ತಿನಿಂದ ನಡೆದು ಉತ್ತಮ ಸಂಸ್ಕಾರದೊಂದಿಗೆ ಧರ್ಮ ಜಾಗೃತಿಯಾಗಬೇಕು. ವೈಭವ, ಆಡಂಬರದ ನೆಪದಲ್ಲಿ ಮೂಲ ತತ್ವ ಮತ್ತು ಸತ್ವವನ್ನು ಕಡೆಗಣಿಸಬಾರದು. ಉತ್ಸವ, ಜಾತ್ರೆಗಳಿಂದ ಸಮಾಜದಲ್ಲಿ ಕ್ರಾಂತಿಕಾರಿ ಪರಿವರ್ತನೆಯಾಗಿ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗಬೇಕು ಎಂದು ಹೆಗ್ಗಡೆಯವರು ಹಾರೈಸಿದರು.
ಎಸ್.ಡಿ.ಎಮ್.ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ.ಎಸ್. ಪ್ರಭಾಕರ ಉಪಸ್ಥಿತರಿದ್ದರು. ಸುನಿಲ್ ಪಂಡಿತ್ ಸ್ವಾಗತಿಸಿದರು. ಅಬ್ರಹಾಂ ಜೇಮ್ಸ್ ಧನ್ಯವಾದವಿತ್ತರು.
ರಾಜ್ಯ ಮಟ್ಟದ ವಸ್ತು ಪ್ರದರ್ಶನದಲ್ಲಿ 198 ಮಳಿಗೆಗಳಿದ್ದು ಪ್ರತಿದಿನ ಬೆಳಿಗ್ಗೆ 9.00 ರಿಂದರಾತ್ರಿ 9.00 ರ ವರೆಗೆ ಉಚಿತ ಪ್ರವೇಶಾವಕಾಶವಿದೆ ಎಂದು ಸಂಗಟಕರು ತಿಳಿಸಿದ್ದಾರೆ.