Home Mangalorean News Kannada News ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಧನೆ ವಿಶ್ವಕ್ಕೇ ಮಾದರಿ ಸಚಿವ ರುದ್ರಪ್ಪ ಲಮಾಣಿ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಧನೆ ವಿಶ್ವಕ್ಕೇ ಮಾದರಿ ಸಚಿವ ರುದ್ರಪ್ಪ ಲಮಾಣಿ

Spread the love

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಧನೆ ವಿಶ್ವಕ್ಕೇ ಮಾದರಿ ಸಚಿವ ರುದ್ರಪ್ಪ ಲಮಾಣಿ

ಬೆಳ್ತಂಗಡಿ: ಮುಜರಾಯಿ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ ಧರ್ಮಸ್ಥಳದಲ್ಲಿ ಸೋಮವಾರ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಸಹೋದರ ಡಿ. ಹರ್ಷೇಂದ್ರ ಕುಮಾರ್ ಅವರನ್ನು ಸನ್ಮಾನಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಗ್ರಾಮೀಣ ಪ್ರದೇಶದ ಜನರಲ್ಲಿ ಸ್ವಚ್ಛತೆ ಬಗ್ಯೆ ಅರಿವು, ಜಾಗೃತಿ ಮೂಡಿಸಿ ಪ್ರತಿ ಮನೆಗೂ ಶೌಚಾಲಯ ನಿರ್ಮಿಸಿ ಕೊಟ್ಟಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಧನೆ ವಿಶ್ವಕ್ಕೇ ಮಾದರಿಯಾಗಿದೆ ಎಂದು ಮುಜರಾಯಿ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ ಹೇಳಿದರು.

ಅವರು ಧರ್ಮಸ್ಥಳದಲ್ಲಿ ಸೋಮವಾರ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ 49ನೇ ವರ್ಷದ ಪಟ್ಟಾಭಿಷೇಕ ದಿನಾಚರಣೆ ಹಾಗೂ ದೇಶದಲ್ಲೇ “ಸ್ವಚ್ಛ ಧಾರ್ಮಿಕ ನಗರ” ಎಂದು ಧರ್ಮಸ್ಥಳವನ್ನು ಗೌರವಿಸಲ್ಪಟ್ಟ ಬಗ್ಯೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಸ್ವ-ಸಹಾಯ ಸಂಘಗಳ ಮೂಲಕ ಮಹಿಳಾ ಸಬಲೀಕರಣ ಮತ್ತು ಆರ್ಥಿಕ ಭದ್ರತೆ ಒದಗಿಸಿ ಅವರು ವ್ಯವಹಾರ ಪರಿಣತರಾಗಿ ಸ್ವಾವಲಂಬಿ ಜೀವನ ನಡೆಸಲು ಪ್ರೇರಣೆ, ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಿರುವುದು ಹೆಗ್ಗಡೆಯವರ ಹೆಗ್ಗಳಿಕೆಯಾಗಿದೆ.

ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ಹಾವೇರಿಯಲ್ಲಿ ನಡೆದ ಕೃಷಿಮೇಳದಲ್ಲಿ ಭಾಗವಹಿಸಿದ ಮಹಿಳೆಯರ ಸಂಖ್ಯೆ ನೋಡಿ ತನಗೆ ಆಶ್ಚರ್ಯವಾಯಿತು ಎಂದು ಸಚಿವರು ಹೇಳಿದರು. ಬಡತನ, ಅನಕ್ಷರತೆ, ನಿರುದ್ಯೋಗ ಸಮಸ್ಯೆ ನಿವಾರಣೆಯಲ್ಲಿ ಧರ್ಮಸ್ಥಳದ ಕೊಡುಗೆ ಅಮೂಲ್ಯವಾಗಿದೆ. ದುರ್ಬಲರ ಸೇವೆಗಾಗಿ ಶ್ರಮಿಸುವ ಹೆಗ್ಗಡೆಯವರು ದೇಶದ ಹೆಮ್ಮೆಯ ಪುತ್ರ ಹಾಗೂ ನಡೆದಾಡುವ ದೇವರು ಎಂದು ಸಚಿವರು ಬಣ್ಣಿಸಿದರು.

ರಾಜ್ಯ ಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಮಾತನಾಡಿ ಕಲೆ, ಶಿಕ್ಷಣ, ಸಾಹಿತ್ಯ ಮತ್ತು ಸಂಸ್ಕøತಿ ಉದ್ದೀಪನದಲ್ಲಿ ಹೆಗ್ಗಡೆಯವರ ಕೊಡುಗೆಯನ್ನು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ ಶಾಸಕ ಕೆ. ವಸಂತ ಬಂಗೇರ ಮಾತನಾಡಿ ಧರ್ಮಸ್ಥಳವು ಜಾಗತಿಕ ಮಟ್ಟದ ಪುಣ್ಯ ಕ್ಷೇತ್ರವಾಗಿ ಬೆಳೆಯಲಿ, ಬೆಳಗಲಿ ಎಂದು ಹಾರೈಸಿದರು.

sdk_1212

ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ದೇವಸ್ಥಾನದ ಧಾರ್ಮಿಕ ವಿಧಿ-ವಿಧಾನ, ಪೂಜಾದಿ ಕಟ್ಟುಕಟ್ಟಳೆಯ ನಿರ್ವಹಣೆಯೊಂದಿಗೆ ಆರೋಗ್ಯಪೂರ್ಣ ಸಮಾಜ ರೂಪಿಸುವುದು ಹೆಗ್ಗಡೆಯವರ ಹೊಣೆಗಾರಿಕೆಯಾಗಿದೆ. ಧರ್ಮ ಮಾರ್ಗದಲ್ಲಿ ಎಲ್ಲಾ ಕೆಲಸಗಳನ್ನು ಮಾಡಿದಾಗ ಮಾತ್ರ ಸುಖ, ಶಾಂತಿ ಮತ್ತು ನೆಮ್ಮದಿ ಸಿಗುತ್ತದೆ. ಒಳ್ಳೆಯ ಕೆಲಸ ಮಾಡುವವರಿಗೆ ಯಾವಾಗಲೂ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದರು.

ಅನ್ನದಾನ, ವಿದ್ಯಾದಾನ, ಔಷಧಿ ದಾನ ಮತ್ತು ಅಭಯ ದಾನ ಧರ್ಮಸ್ಥಳದಲ್ಲಿ ನಿತ್ಯೋತ್ಸವವಾಗಿದೆ. ಅಭಯ ದಾನದ ಮೂಲಕ ಭಕ್ತರಿಗೆ ಆಪ್ತ ಸಲಹೆಯೊಂದಿಗೆ ಮಾರ್ಗದರ್ಶನ ನೀಡಿ ಅವರು ಭಯ, ಸಂಶಯ ನಿವಾರಣೆ ಮಾಡಿ ಆತ್ಮ ವಿಶ್ವಾಸ ಮೂಡಿಸಲಾಗುತ್ತದೆ. ಮುಗ್ದ ಜನರ ಮೂಡ ನಂಬಿಕೆಯನ್ನು ಹೋಗಲಾಡಿಸಿ ಮೂಲ ನಂಬಿಕೆಯನ್ನು ಸದೃಢಗೊಳಿಸಿ ಧೈರ್ಯ ನೀಡಲಾಗುತ್ತದೆ. ನ್ಯಾಯ ದಾನ ಕೂಡಾ ವಿಶಿಷ್ಟ ದಾನವಾಗಿದ್ದು 98 ವರ್ಷಗಳ ಹಿಂದಿನ ಹೊಯ್ಲು ಇತ್ತೀಚೆಗೆ ತೀರ್ಮಾನವಾಗಿದೆ ಎಂದು ಹೆಗ್ಗಡೆಯವರು ಪ್ರಕಟಿಸಿದರು.

ಹೊಸ ಯೋಜನೆಗಳು: ಧರ್ಮಸ್ಥಳದಲ್ಲಿ ಸರದಿ ಸಾಲಿನಲ್ಲಿ ದೇವರ ದರ್ಶನದ ವ್ಯವಸ್ಥೆಯನ್ನು ಅನೇಕ ಹೊಸ ಸೌಲಭ್ಯಗಳೊಂದಿಗೆ ಸುಧಾರಣೆ ಮಾಡಲು ಉದ್ದೇಶಿಸಲಾಗಿದೆ. ಧರ್ಮಸ್ಥಳದ ಪುರೋಭಿವೃದ್ಧಿಗಾಗಿ ವ್ಯವಸ್ಥಿತ ವಾಹನ ನಿಲುಗಡೆ ಮೊದಲಾದ ಸೌಕರ್ಯಗಳನ್ನು ಒದಗಿಸಲಾಗುವುದು ಎಂದರು. ಸಾಧನೆಯ ಹಾದಿಯಲ್ಲಿ ಸಂದರ್ಭೋಚಿತವಾಗಿ ಹೊಸ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು.

ಬಂಗಾಡಿಯ ರವಿರಾಜ ಬಳ್ಳಾಲ್ ರಚಿಸಿದ “ಧರ್ಮಸ್ಥಳದ ಇತಿಹಾಸ” ಪುಸ್ತಕವನ್ನು ಹೆಗ್ಗಡೆಯವರು ಬಿಡುಗಡೆಗೊಳಿಸಿದರು.

ಕ್ಷೇತ್ರ ಹಿರಿಯ ನೌಕರರಾದ ಓಬಯ್ಯ ಗೌಡ ಮತ್ತು ಕಮಲ ಪೂಜಾರ್ತಿ ಸೇರಿದಂತೆ ಹದಿಮೂರು ಮಂದಿ ನೌಕರರನ್ನು ಹೆಗ್ಗಡೆಯವರು ಸನ್ಮಾನಿಸಿದರು.

ವಿಧಾನ ಪರಿಷತ್ ಸದಸ್ಯ ಕೌಜಲಗಿಮಠ್, ಶಾಸಕ ಕೆ. ಅಭಯಚಂದ್ರ ಜೈನ್, ಹೇಮಾವತಿ ವಿ. ಹೆಗ್ಗಡೆ, ಮಾಣಿಲದ ಮೋಹನದಾಸ ಸ್ವಾಮೀಜಿ, ಪ್ರೊ. ಎಸ್. ಪ್ರಭಾಕರ್, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಸ್ವಾಗತಿಸಿದರು. ದೇವಳದ ಪಾರುಪತ್ಯಗಾರ್ ಲಕ್ಷ್ಮೀನಾರಾಯಣ ರಾವ್ ಧನ್ಯವಾದವಿತ್ತರು. ಡಾ. ಶ್ರೀಧರ ಭಟ್ ಕಾರ್ಯಕ್ರಮ ನಿರೂಪಿಸಿದರು.


Spread the love

Exit mobile version