ಧರ್ಮಸ್ಥಳ ಲಕ್ಷ ದೀಪೋತ್ಸವ: ಸರ್ವಧರ್ಮ ಸಮ್ಮೇಳನ ಉದ್ಘಾಟನೆ

Spread the love

ಧರ್ಮಸ್ಥಳ ಲಕ್ಷ ದೀಪೋತ್ಸವ: ಸರ್ವಧರ್ಮ ಸಮ್ಮೇಳನ ಉದ್ಘಾಟನೆ

ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ಸಂದರ್ಭದಲ್ಲಿ ಆಯೋಜಿಸಲಾದ ಸರ್ವ ಧರ್ಮ ಸಮ್ಮೇಳನದ 84ನೇ ಅಧಿವೇಶನವನ್ನು ಭಾನುವಾರ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲ ಗೌಡ ಉದ್ಘಾಟಿಸಿದರು. ಶಿರಹಟ್ಟಿಯ ಫಕೀರ ಸಿದ್ಧರಾಮ ಸ್ವಾಮೀಜಿ, ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ನವ ದೆಹಲಿಯ ಡಾ. ಜಯಕುಮಾರ್ ಉಪಾಧ್ಯೆ, ಪುತ್ತೂರಿನ ಡಾ. ಜಬ್ಬಾರ್ ಸಮೊ, ಪ್ರಶಾಂತ್ ವೆಸ್ಲಿ ಡಿ’ಸೋಜಾ ಪ್ರೊ.ಎಸ್. ಪ್ರಭಾಕರ್ ಮತ್ತು ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.

dharmastala-lakshadeep-sarvadharma

ಪವಿತ್ರ ಆಚಾರವೇ ಧರ್ಮ ಆಗಿದೆ. ಧರ್ಮವು ವಿಶ್ವವ್ಯಾಪಿಯಾಗಿದ್ದು ಧರ್ಮದ ನೆಲೆಯಲ್ಲಿ ಅರ್ಥ ಮತ್ತು ಕಾಮವನ್ನು ನಿಯಂತ್ರಿಸಿ ಮೋಕ್ಷ ಪ್ರಾಪ್ತಿ ಮಾಡಬಹುದು. ಧರ್ಮಕ್ಕೆ ಕಾನೂನಿನ ತಳಹದಿ ಇದೆ. ನೈತಿಕತೆಯ ಹಿನ್ನೆಲೆ ಇದೆ. ಸಂಪ್ರಾದಾಯ, ನಂಬಿಕೆ – ನಡವಳಿಕೆ , ವಾಡಿಕೆಯ ಹೆಸರಿನಲ್ಲಿ ಧರ್ಮವನ್ನು ನಾವು ಅನುಷ್ಠಾನಗೊಳಿಸುತ್ತೇವೆ.

ಸರ್ವ ಧರ್ಮ ಸಮನ್ವಯದಿಂದ ಶಾಂತಿ, ಸಾಮರಸ್ಯದ ಮೂಲಕ ಮಾನವೀಯ ಮೌಲ್ಯಗಳನ್ನು ಹೊಂಧಿರುವ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲ ಗೌಡ ಹೇಳಿದರು.

ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ಸಂದರ್ಭದಲ್ಲಿ ಆಯೋಜಿಸಲಾದ ಸರ್ವ ಧರ್ಮ ಸಮ್ಮೇಳನದ 84ನೇ ಅಧಿವೇಶನವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಬಹಮತೀಯ ರಾಷ್ಟ್ರವಾದ ಭಾರತದಲ್ಲಿ ಸರ್ವಧರ್ಮಗಳ ಸಮನ್ವಯದೊಂದಿಗೆ ಪರಸ್ಪರ ತಿಳುವಳಿಕೆ ಮತ್ತು ವೈಚಾರಿಕತೆ ಬೆಳೆಸಿಕೊಳ್ಳಲು ಸಂವಿಧಾನಾತ್ಮಕವಾಗಿ ಅನುಕೂಲ ಮಾಡಿಕೊಡಲಾಗಿದೆ. ಎಲ್ಲಾ ಮತ ಧರ್ಮಗಳ ವಿಚಾರಧಾರೆಯನ್ನು ಗೌರವಿಸಬೇಕು. ಸರ್ವಧರ್ಮ ಸಮನ್ವಯದಿಂದ ಸಹಿಷ್ಣುತೆ ಮತ್ತು ಕೋಮು ಸಾವiರಸ್ಯ ಕಾಪಾಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಮತೀಯ ಗಲಭೆಗಳನ್ನು ತಡೆಯಬೇಕು. ಯುವಜನತೆ ಸರ್ವಧರ್ಮಗಳ ಸಾರವನ್ನು ತಿಳಿದು ದೇಶ ಪ್ರೇಮದೊಂದಿಗೆ ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಬೇಕು. ಸದೃಢ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ ಶಿರಹಟ್ಟಿಯ ಫಕೀರ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ದ್ವೇಷ ಬಿಡಿ, ಪ್ರೀತಿ ಮಾಡಿ ಎಂದು ಸಲಹೆ ನೀಡಿದರು. ಅಹಿಂಸೆ, ದಯೆ, ಪ್ರೀತಿ, ಅನುಕಂಪ, ತ್ಯಾಗ, ಶಾಂತಿ, ಸೇವಾ ಮನೋಭಾವ ಎಲ್ಲಾ ಧರ್ಮಗಳ ಸಾರವಾಗಿದೆ. ನಾವು ಶ್ರೇಷ್ಠವಾದ ಮಾನವ ಜನ್ಮ ಪಡೆದ ಮೇಲೆ ಪ್ರೀತಿ-ವಿಶ್ವಾಸದ ಭಾವನೆಯಿಂದ ಸಾರ್ಥಕ ಜೀವನ ನಡೆಸಬೇಕು. ದ್ವೇಷ, ಜಗಳ, ಮತ್ಸರದಿಂದ ಜೀವನ ನರಕ ಸದೃಶವಾಗುತ್ತದೆ. ಪ್ರೀತಿ-ವಿಶ್ವಾಸದಿಂದ ಸುಖ-ಶಾಂತಿಯೊಂದಿಗೆ ಇಹದಲ್ಲೇ ಸ್ವರ್ಗ ಸುಖ ಪಡೆಯಬಹುದು ಎಂದರು.

ವಿಶಾಲ ಮನೋಭಾವದ ಗುರು-ಹಿರಿಯರಿಂದ ನಾಡು ಪವಿತ್ರವಾಗುತ್ತದೆ. ನಾಡಿನ ಜನ ಸುಖ-ಶಾಂತಿಯಿಂದ ಜೀವಿಸುತ್ತಾರೆ ಎಂದು ಹೇಳಿದ ಅವರು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅನ್ನ ದಾಸೋಹ, ಜ್ಞಾನ ದಾಸೋಹದೊಂದಿಗೆ ಗ್ರಾಮಾಭಿವೃದ್ಧಿ ಯೋಜನೆ ಮದ್ಯವರ್ಜನ ಶಿಬಿರದ ಮೂಲಕ ಮಾಡುತ್ತಿರುವ ಸೇವಾ ಕೈಂಕರ್ಯ ಅಮೂಲ್ಯವಾಗಿದೆ ಎಂದು ಶ್ಲಾಘಿಸಿ ಅಭಿನಂದಿಸಿದರು.

ನವ ದೆಹಲಿಯ ಡಾ. ಜಯಕುಮಾರ್ ಉಪಾಧ್ಯೆ, “ಜೈನ ಧರ್ಮದಲ್ಲಿ ಸಮನ್ವಯ”ದ ಬಗ್ಯೆ, ಪುತ್ತೂರಿನ ಡಾ. ಜಬ್ಬಾರ್ ಸಮೊ “ಇಸ್ಲಾಂ ಧರ್ಮದಲ್ಲಿ ಸಮನ್ವಯ” ದೃಷ್ಟಿ ಬಗ್ಯೆ ಮತ್ತು ಪ್ರಶಾಂತ್ ವೆಸ್ಲಿ ಡಿ’ಸೋಜಾ “ಕ್ರೈಸ್ತ ಧರ್ಮದಲ್ಲಿ ಸಮನ್ವಯ” ದೃಷ್ಟಿ ಬಗ್ಯೆ ಉಪನ್ಯಾಸ ನೀಡಿದರು.
ಪ್ರತಿಭಾವಂತ ನಾಟಕ ಕಲಾವಿದ ಆದಿತ್ಯ ಎಂ. ಅವರನ್ನು ಸನ್ಮಾನಿಸಲಾಯಿತು.

ಪ್ರೊ.ಎಸ್. ಪ್ರಭಾಕರ್ ಮತ್ತು ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.

ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದನ್ ಕಾಮತ್ ಧನ್ಯವಾದವಿತ್ತರು. ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಬಿ.ಪಿ. ಸಂಪತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

ಧಾರ್ಮಿಕತೆಯೊಂದಿಗೆ ನೈತಿಕತೆ ಹೆಚ್ಚಾಗಬೇಕು: ಹೆಗ್ಗಡೆ

ಇಂದು ವಿಶ್ವದಲ್ಲಿ ಧಾರ್ಮಿಕತೆ ಹೆಚ್ಚಾದಂತೆ ಕಾಣುತ್ತದೆ. ದೇವಸ್ಥಾನಗಳಲ್ಲಿ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಿದೆ. ಹಬ್ಬ ಹರಿದಿನಗಳ ಆಚರಣೆ ಜಾಸ್ತಿಯಾಗಿದೆ. ಮಾಧ್ಯಮಗಳಲ್ಲಿಯೂ ಪೂರ್ವಜನ್ಮದ ನಂಬಿಕೆಗಳು, ಜೋತಿಷ್ಯ ಫಲಶಾಸ್ತ್ರಗಳ ಕಾರ್ಯಕ್ರಮಗಳು ಹೆಚ್ಚಾಗುತ್ತಿವೆ. ಧಾರ್ಮಿಕ ಭಾವ, ಭಕ್ತಿ, ಶ್ರದ್ಧೆ ಹೆಚ್ಚಾದಂತೆ ನೈತಿಕತೆಯೂ ಹೆಚ್ಚಾಗುವಂತೆ ಮಾಡಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ತಮ್ಮ ಸ್ವಾಗತ ಭಾಷಣದಲ್ಲಿ ಸಲಹೆ ನೀಡಿದರು.

ಇಂದು ದೇಶದೆಲ್ಲೆಡೆ ಭಕ್ತಿ ಹೆಚ್ಚಾಗಿದೆ. ಆದರೆ ಶಿಸ್ತು ಹೆಚ್ಚಾಗಿಲ್ಲ. ಧರ್ಮಸ್ಥಳಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾದಂತೆ ತ್ಯಾಜ್ಯಗಳು ಹೆಚ್ಚಾಗುತ್ತಿವೆ. ಸ್ವಚ್ಛ ಭಾರತ ಅಭಿಯಾನದಲ್ಲಿ ಎಲ್ಲರೂ ಭಾಗವಹಿಸಿದಾಗ ಪೂರ್ಣ ಯಶಸ್ಸು ಸಾಧ್ಯವಾಗುತ್ತದೆ. ಶಿಸ್ತು ಮತ್ತು ಸ್ವಚ್ಛತೆ ನೈತಿಕತೆಯ ಒಂದು ಭಾಗವೇ ಆಗಿದೆ. ಧಾರ್ಮಿಕತೆಗೂ, ಸ್ವಚ್ಛತೆಗೂ ಅವಿನಾಭಾವ ಸಂಬಂಧವಿದೆ. ಮಡಿ-ಮೈಲಿಗೆಗಳು ಸ್ವಚ್ಛತೆಗೆ ಪ್ರಾಧಾನ್ಯ ನೀಡಿವೆ. ಮನುಷ್ಯರೊಳಗೆ ಭೇದವನ್ನಲ್ಲ ಎಂದು ಅವರು ಸ್ಪಷ್ಟ ಪಡಿಸಿದರು. ವಿಶಾಲ ಮನೋಭಾವ, ಸ್ವಾಭಿಮಾನ, ಸಹಿಷ್ಣತೆ ಮತ್ತು ಸಾಮಾಜಿಕ ಸಾಮ್ಯರಸ್ಯದ ಮೂಲಕ ನಾವೆಲ್ಲರೂ ಶ್ರೇಷ್ಠ ಭಾರತೀಯರಾಗಬಹುದು ಎಂದು ಹೆಗ್ಗಡೆಯವರು ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳು ಸ್ವಚ್ಛ ಹಾಗೂ ಸುಂದರ ಪರಿಸರ ರೂಪಿಸಲು ದೃಢ ಸಂಕಲ್ಪ ಮಾಡಬೇಕು ಎಂದು ಅವರು ಕಿವಿಮಾತು ಹೇಳಿದರು.

ಧರ್ಮಸ್ಥಳದಿಂದ ಎರಡು ಹೊಸ ಯೋಜನೆಗಳು ಪ್ರಕಟ

2017 ರ ಜನವರಿ 14 ರ ಮಕರ ಸಂಕ್ರಾಂತಿಗೆ ಮೊದಲು ರಾಜ್ಯದ ಎಲ್ಲಾ ದೇವಸ್ಥಾನಗಳು ಮತ್ತು ಗುಡಿ – ಗೋಪುರಗಳು ಹಾಗೂ ಮಂದಿರಗಳಳ್ಲಿ ಆಂತರಿಕ ಮತ್ತು ಬಾಹ್ಯ ಪರಿಸರ ಸ್ವಚ್ಛತೆಗೆ ಧರ್ಮಸ್ಥಳದ ವತಿಯಿಂದ ಯೋಜನೆ ರೂಪಿಸಲಾಗಿದೆ ಎಂದು ಡಿ. ವೀರೇಂದ್ರ ಹೆಗ್ಗಡೆಯವರು ಪ್ರಕಟಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 18 ಸಾವಿರ ಒಕ್ಕೂಟಗಳ ಸದಸ್ಯರ ಮೂಲಕ ಸ್ಥಳಿಯ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಸ್ಚಚ್ಛತೆ ಕಾಪಾಡಲಾಗುವುದು. ಮುಂದೆ ನಿರಂತರ ಸ್ವಚ್ಛತೆಗೆ ಒತ್ತು ನೀಡಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಮಳೆ ಕಡಿಮೆಯಾಗಿ ಜಲ ಕ್ಷಾಮ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ನೂರು ಕೆರೆಗಳ ಹೂಳೆತ್ತಿ ಜಲ ಸಮೃದ್ಧಿಗಾಗಿ ಯೋಜನೆ ರೂಪಿಸಲಾಗಿದೆ. ಈಗಾಗಲೇ 25 ಕೆರೆಗಳ ಹೂಳು ತೆಗೆಯಲಾಗಿದೆ ಎಂದು ಹೆಗ್ಗಡೆಯವರು ಪ್ರಕಟಿಸಿದರು.

ಸೋಮವಾರ ಲಕ್ಷದೀಪೋತ್ಸವ

ಸೋಮವಾರ ರಾತ್ರಿ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ನಡೆಯುತ್ತದೆ. ನಾಡಿನೆಲ್ಲೆಡೆಯಿಂದ ಲಕ್ಷಾಂತರ ಮಂದಿ ಭಕ್ತಾದಿಗಳು ಇದನ್ನು ವೀಕ್ಷಿಸಿ ಪುಣ್ಯ ಭಾಗಿಗಳಾಗುವರು

ಕಾರ್ತಿಕ ಮಾಸದಲ್ಲಿ ಸೋಮವಾರ ಲಕ ್ಷದೀಪೋತ್ಸವ ನಡೆಯುವುದು ವಿಶೇಷವಾಗಿದೆ.
ನಾಳೆ ಸಮವಸರಣ ಪೂಜೆ: ಮಂಗಳವಾರ ಸಂಜೆ ಮಹೋತ್ಸವ ಸಭಾ ಭವನದಲ್ಲಿ ಭಗವಾನ್ ಚಂದ್ರನಾಥ ಸ್ವಾಮಿಯ ಸಮಸರಣ ಪೂಜೆ ನಡೆಯುತ್ತದೆ. ತೀರ್ಥಂಕರರು ತಮ್ಮ ದಿವ್ಯ ಧ್ವನಿಯಿಂದ ಧರ್ಮೋಪದೇಶ ನೀಡುವ ಸಭೆಗೆ ಸಮವಸರಣ ಎನ್ನುತ್ತಾರೆ. ಜೈನರ ಶ್ರದ್ಧಾ ಕೇಂದ್ರಗಳಾದ ಬಸದಿಗಳು ಸಮಸರಣದ ಪ್ರತೀಕವಾಗಿವೆ.


Spread the love