Home Mangalorean News Kannada News ಧರ್ಮ ಸಂಸತ್ತಿನಲ್ಲಿ ಸಂವಿಧಾನ ಬದಲಾವಣೆ,  ದಲಿತರ ಮೀಸಲಾತಿ ವಿರೋಧಿ ಹೇಳಿಕೆ ನೀಡಿಲ್ಲ ; ಪೇಜಾವರ ಸ್ವಾಮೀಜಿ

ಧರ್ಮ ಸಂಸತ್ತಿನಲ್ಲಿ ಸಂವಿಧಾನ ಬದಲಾವಣೆ,  ದಲಿತರ ಮೀಸಲಾತಿ ವಿರೋಧಿ ಹೇಳಿಕೆ ನೀಡಿಲ್ಲ ; ಪೇಜಾವರ ಸ್ವಾಮೀಜಿ

Spread the love

ಧರ್ಮ ಸಂಸತ್ತಿನಲ್ಲಿ ಸಂವಿಧಾನ ಬದಲಾವಣೆ,  ದಲಿತರ ಮೀಸಲಾತಿ ವಿರೋಧಿ ಹೇಳಿಕೆ ನೀಡಿಲ್ಲ ; ಪೇಜಾವರ ಸ್ವಾಮೀಜಿ

ಉಡುಪಿ: ಇತ್ತೀಚೆಗೆ ಉಡುಪಿಯಲ್ಲಿ ನಡೆದ ಧರ್ಮಸಂಸತ್ತಿನಲ್ಲಿ ದಲಿತರ ಮೀಸಲಾತಿ ವಿರೋಧೀಸುವ ಅಥವಾ ಸಂವಿಧಾನ ಬದಲಾವಣೆ ಮಾಡಬೇಕೆಂಬ ರೀತಿಯ ಹೇಳಿಕೆಯನ್ನು ಎಂದೂ ನೀಡಿಲ್ಲ ಬದಲಾಗಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ನೀಡುವ ಸವಲತ್ತನ್ನು ಬಹುಸಂಖ್ಯಾತ ಹಿಂದೂಗಳಿಗೆ ನೀಡಬೇಕು ಎಂದು ಮಾತ್ರ ಹೇಳಿದ್ದೇನೆ ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ಅವರು ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಾನು ಧರ್ಮ ಸಂಸತ್ತಿನಲ್ಲಿ ಮಂಡಿಸಿ ಸ್ವೀಕರಿಸಿದ ಪ್ರಸ್ತಾವದ ಬಗ್ಗೆ ತಪ್ಪು ಕಲ್ಪನೆಗಳಿಂದ ಸಾಹಿತಿಗಳು ಮತ್ತು ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಯುತ್ತಿದೆ.

ನಾನು ದಲಿತರ ಮೀಸಲಾತಿಯನ್ನು ವಿರೋಧಿಸಲೇ ಇಲ್ಲ. ಧಾರ್ಮಿಕ ಅಲ್ಪಸಂಖ್ಯಾಕರಿಗೆ ನೀಡುವ ಸವಲತ್ತುಗಳನ್ನು ಧಾರ್ಮಿಕ ಬಹುಸಂಖ್ಯಾಕರಿಗೂ ನೀಡಬೇಕೆಂದು ಹೇಳಿದ್ದಾಗಿದೆ. ಧಾರ್ಮಿಕ ಅಲ್ಪಸಂಖ್ಯಾಕರಲ್ಲಿ ದಲಿತರು ಸೇರುವುದಿಲ್ಲ. ಮುಸ್ಲಿಮರು ಮತ್ತು ಕೈಸ್ತರು ಸೇರುತ್ತಾರೆ. ಅವರಿಗೂ ನೀಡುವ ಸವಲತ್ತನ್ನು ನಿಲ್ಲಿಸಬೇಕೆಂದು ನಾನು ಹೇಳಿಲ್ಲ. ಅದನ್ನು ಉಳಿದ ಧಾರ್ಮಿಕ ಬಹುಸಂಖ್ಯಾಕ ಹಿಂದೂಗಳಿಗೂ ಕೊಡಬೇಕೆಂದು ಮಾತ್ರ ಹೇಳಿದ್ದೇನೆ. ಇದರಿಂದ ಧಾರ್ಮಿಕ ಬಹುಸಂಖ್ಯಾಕರಲ್ಲಿ ಸೇರುವ ದಲಿತರಿಗೂ ಹಿಂದುಳಿದವರು ನಡೆಸುವ ಶಿಕ್ಷಣ ಸಂಸ್ಥೆಗಳಿಗೂ ಹೆಚ್ಚಿನ ಸವಲತ್ತುಗಳು ದೊರೆಯಲು ಅವಕಾಶವಾಗುತ್ತದೆ. ಅದರಂತೆ ಚರ್ಚ, ಮಸೀದಿಗಳಿಗೆ ಇರುವ ಸ್ವಾಯತ್ತತೆ ಮಠ, ಮಂದಿರಗಳಿಗೂ ದೊರೆಯುತ್ತದೆ. ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವುದು ಬೇಡ ಎಲ್ಲರನ್ನು ಸಮಾನವಾಗಿ ನೋಡಿ ಎಂಬುದೇ ಇದರ ಸಂದೇಶ. ಇದರಿಂದ ಯಾರಿಗೂ ಅನ್ಯಾಯವಾಗುವುದಿಲ್ಲ. ಇದರಲ್ಲಿ ಆಕ್ಷೇಪಾರ್ಹ ಅಂಶವೇನು? ಇದನ್ನು ಅರ್ಥಮಾಡಿಕೊಳ್ಳದೆ ಕೆಲವರು ಪ್ರತಿಭಟನೆ ಮಾಡುತ್ತಿರುವುದು ವಿಷಾದಕರ.

ಇದಕ್ಕಾಗಿ ಸಂವಿಧಾನದಲ್ಲಿ ತಿದ್ದುಪಡಿ ಮಾಡಬೇಕಾಗುತ್ತದೆ. ಸಂವಿಧಾನದಲ್ಲಿ ಅನೇಕಾನೇಕ ತಿದ್ದುಪಡಿಗಳು ಇಷ್ಟರವರೆಗೆ ನಡೆದಿದೆ. ನಾನು ತಿದ್ದುಪಡಿ ಸೂಚಿಸಿದರೆ ಅದು ಸಂವಿಧಾನ ವಿರೋಧಿಯಾಗುತ್ತದೆಯೇ? ಮತ್ತು ಅಂಬೇಡ್ಕರ್‍ಗೆ ಅವಮಾನವಾಗುತ್ತದೆಯೇ ?

ಸಂವಿಧಾನವನ್ನು ಅಂಬೇಡ್ಕರರೊಬ್ಬರೇ ಮಾಡಿದ್ದಲ್ಲ. ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಕೆ.ಎಮ್‍ಮುನಶಿ, ಬೆನಗಲ್ ಮುಂತಾದ ಅನೇಕರು ಸದಸ್ಯರಾಗಿದ್ದು ಅಂಬೇಡ್ಕರರು ಅಧ್ಯಕ್ಷರಾಗಿದ್ದ ಸಮಿತಿಯ ಕರಡು ಪ್ರತಿಯನ್ನು ಸಿದ್ಧಪಡಿಸಿದೆ. ರಾಜೇಂದ್ರ ಬಾಬುಗಳ ಅಧ್ಯಕ್ಷತೆಯ ರಾಷ್ಟ್ರದ 500ಕ್ಕಿಂತ ಹೆಚ್ಚು ಪ್ರತಿನಿಧಿಗಳುಳ್ಳ ಸಂಘಟನಾ ಸಮಿತಿಯು ಸಂವಿಧಾನವನ್ನು ಅಂಗೀಕರಿಸಿದೆ. ಇದನ್ನು ಅವಮಾನಿಸಿದರೆ ಅಂಬೇಡ್ಕರರನ್ನು ಮಾತ್ರವಲ್ಲದೆ ಇಡೀಯ ರಾಷ್ಟ್ರವನ್ನೇ ಅವಮಾನಿಸಿದಂತಾಗುತ್ತದೆ. ಅಂತಹ ಕಾರ್ಯಕ್ಕೆನಾನು ಇಳಿಯಲಾರೆ. ಸಮಾಜದಲ್ಲಿ ಬೇದ, ಭಾವ ಮಾಡದೆ ಎಲ್ಲರನ್ನೂ ಸಮಾನವಾಗಿ ನೋಡಬೇಕೆಂಬ ಉದ್ದೇಶದಿಂದ ನಾನು ಈ ಪ್ರಸ್ತಾಪವನ್ನು ಮಾಡಿದ್ದೇನೆ ಎಂದರು.


Spread the love

Exit mobile version