Home Mangalorean News Kannada News ಧರ್ಮ ಸಂಸದ್ ಗೆ ಸಜ್ಜಾಗುತ್ತಿದೆ ರಜತಪೀಠಪುರ ಉಡುಪಿ

ಧರ್ಮ ಸಂಸದ್ ಗೆ ಸಜ್ಜಾಗುತ್ತಿದೆ ರಜತಪೀಠಪುರ ಉಡುಪಿ

Spread the love

ಧರ್ಮ ಸಂಸದ್ ಗೆ ಸಜ್ಜಾಗುತ್ತಿದೆ ರಜತಪೀಠಪುರ ಉಡುಪಿ 

ಹಿಂದು ಧರ್ಮ ಜಗತ್ತಿಗೆ ಸಹಿಷ್ಣುತೆ, ಸರ್ವಧರ್ಮ ಸ್ವೀಕಾರ ಮನೋಭಾವವನ್ನು ಭೋದಿಸಿದ ಧರ್ಮ. ಯಾವುದನ್ನೂ ತಿರಸ್ಕರಿಸದೆ, ಪ್ರತಿಯೊಂದಕ್ಕೂ ತನ್ನೊಡಲಲ್ಲಿ ಜಾಗ ನೀಡಿ ತಾಯ್ತನವನ್ನು ಮೆರೆದು ಆದ್ಯಾತ್ಮಿಕ ತೊಟ್ಟಿಲು ಎಂದು ಜಗದ್ವಿಖ್ಯಾತವಾದ ಎಂದಿಗೂ ಅಳಿಯದ, ಚಿರಂತನವಾದ, ನಿರಂತರವಾದ ಸನಾತನ ಧರ್ಮ. ಹಿಂದು ಸಮಾಜವು ಪ್ರಾಗಿತಿಹಾಸದಲ್ಲಿ ಚಾಚಿರುವ ಬೇರುಗಳುಳ್ಳ ಮತ್ತು ಅಸ್ತಿತ್ವದಲ್ಲಿರುವ ಪ್ರಮುಖ ಸಂಪ್ರದಾಯವಾಗಿದೆ. ವೇದಾಂತ ಉಪನಿಷದ್ ನಿಂದ ಗಣಿತಶಾಸ್ತ್ರದವರೆಗೆ, ಭೂಗೋಳದಿಂದ ಖಗೋಳದವರೆಗೆ ಸಮಷ್ಟಿ ಹಿತಚಿಂತನೆಯನ್ನು ಇರಿಸಿ ಪ್ರಗತಿಯತ್ತ ಸಾಗಿದವರು ನಾವು. ಉತ್ತುಂಗ ಸಂಸ್ಕೃತಿಗಳ ವಾರಸುದಾರರಾಗಿ, ಸತತ ಪರಿಶ್ರಮದಿಂದ ಪರಾಕ್ರಮಗಳೊಂದಿಗೆ, ನಮ್ಮ ಸಂಸ್ಕೃತಿಯ ಧ್ವಜವನ್ನು ಹಿಮಾಲಯದೆತ್ತರಕ್ಕೇರಿಸಿ ಪರಾಕಾಷ್ಠೆ ಮೆರೆದ ಸರ್ವ ಸಮನ್ವಯ ಧರ್ಮ.

ಆದರೆ, ಜಗದ್ವಿಖ್ಯಾತವಾದ ಈ ಆಧ್ಯಾತ್ಮಿಕ ಪರಂಪರೆ ಧೀರ್ಘಕಾಲದಿಂದಲೂ ಗಂಭೀರ ಸಮಸ್ಯೆಗಳ ಮಡುವಿನಲ್ಲಿ ನರಳುತ್ತಿದೆ. ಅಸ್ಪೃಷ್ಯತೆ ಜಾತಿ ಭೇದ ಮೊದಲಾದ ಪೆಡಂಭೂತಗಳ ಕೈಗೆ ಸಿಕ್ಕಿ ನಲುಗುತ್ತದೆ.ಇದರ ನಿವಾರಣೆಗೆ ಅನೇಕ ಮಹಾಪುರುಷರು, ಸಾಧು ಸಂತರು, ವಿಶ್ವ ಹಿಂದು ಪರಿಷತ್ ಮೊದಲಾದ ಸಂಘ ಸಂಸ್ಥೆಗಳು ಅವಿರತಾಗಿ ಶ್ರಮಿಸುತ್ತಿವೆ.”ಧರ್ಮೋ ರಕ್ಷತಿ ರಕ್ಷಿತಃ” ಎಂಬಂತೆ ಸಂಸ್ಕೃತಿಯ, ಧರ್ಮದ ರಕ್ಷಣೆಗೆ ಕಟಿಬದ್ದವಾಗಿದೆ.ಈ ಕಾರ್ಯದ ಹಿನ್ನಲೆಯಾಗಿ ಹಿಂದು ಸಮಾಜದುನ್ನತಿಗಾಗಿ ವಿಶ್ವ ಹಿಂದು ಪರಿಷದ್ ನ ಕನಸಿನ ಕೂಸಾಗಿ ಧರ್ಮ ಸಂಸದ್ ನಂತಹ ಮಹತ್ತರ ಕಾರ್ಯಗಳು ಜರುಗಿವೆ, ಜರುಗುತ್ತಿವೆ. ಇದಕ್ಕೆ ಪ್ರೇರಕವೆಂಬಂತೆ 1966ರ ಪ್ರಯಾಗ ಸಮ್ಮೇಳನ, 1969ರ ಉಡುಪಿ ಸಮ್ಮೇಳನ, 1983ರ ಉಜಿರೆ ಸಮ್ಮೇಳನ, 1985ರ ಉಡುಪಿ ಸಮ್ಮೇಳನ ಹಾಗೂ ಹಿಂದು ಸಮುದಾಯದ ಜಾಗೃತಿ, ಗೋರಕ್ಷಣೆ, ಸಾಮಾಜಿಕ ಸಾಮರಸ್ಯ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪುನರ್ನಿರ್ಮಾಣ ಮೊದಲಾದ ಮಹತ್ವದ ಆಶಯಗಳನ್ನಿಟ್ಟುಕೊಂಡು ನವೆಂಬರ್ 24,25,26 ರಂದು ಉಡುಪಿಯಲ್ಲಿ ನಡೆಯುವ ಧರ್ಮ ಸಂಸತ್ ವಿಶ್ವ ಗುರುವಾದ ಹಿಂದು ಧರ್ಮವನ್ನೂ, ಅಧಃಪತನಗೊಳ್ಳುತ್ತಿರುವ ಸಂಸ್ಕೃತಿಯ ರಕ್ಷಣೆಗೆ ಟೊಂಕ ಕಟ್ಟಿ ನಿಂತಿದೆ.

ಧರ್ಮ ಸಂಸದ್ ನ ಇತಿಹಾಸ:
1964ರಲ್ಲಿ ಪರಮಪೂಜ್ಯ ಗುರೂಜಿ ಹಾಗೂ ಪೂಜ್ಯ ಚಿನ್ಮಯಾನಂದರ ಮಾರ್ಗದರ್ಶನದಲ್ಲಿ ಆರಂಭಗೊಂಡ ವಿಶ್ವ ಹಿಂದು ಪರಿಷತ್ ಹಿಂದೂ ಸಮಾಜದಲ್ಲಿ ಉಳಿದಿರುವ ಮೇಲುಕೀಳೆಂಬ ಭಾವನೆ,ಸಾಮರಸ್ಯದ ಕೊರತೆ,ಜಾತಿಭೇಧವೆಂಬ ತಾರತಮ್ಯ ಮುಂತಾದ ಎಲ್ಲಾ ಕೊರತೆಗಳನ್ನು ಸರಿಪಡಿಸಿ *ನಾವೆಲ್ಲಾ ಹಿಂದು ಎಂದೆಂದೂ ಒಂದು* ಎನ್ನುವ ಏಕರೂಪ ಏಕವಾಖ್ಯ ಪರಿಪಾಲನೆಗಾಗಿ

ಅದೇ ರೀತಿ ಹಿಂದೂ ಬಂಧುಗಳ ಮನೆಮನೆಯಲ್ಲೂ ಮನಮನದಲ್ಲೂ ಹಿಂದುತ್ವದ ಝೇಂಕಾರವವನ್ನು ಪಸರಿಸಲು ತಥಾ ದರ್ಮನಿಷ್ಟೆ ಹಾಗೂ ರಾಷ್ಟಭಕ್ತಿಯ ದಿವ್ಯ ಸಂಕಲ್ಪವನ್ನು ಸಾಷ್ಟಾಂಗಗೊಳಿಸಲು ಧರ್ಮ ಸಂಸದ್ ಎಂಬ ಸಾಧು ಸಂತರ ಸಮ್ಮೇಳನವನ್ನು ಹುಟ್ಟಿ ಹಾಕಿತು. ಇದರ ಫಲಶ್ರುತಿ ಎಂಬಂತೆ 1966 ರಲ್ಲಿ ಮೊದಲ ಪ್ರಯಾಗ ಸಮ್ಮೇಳನ ನಡೆದು” ನ ಹಿಂದು ಪತಿತೋ ಭವೆತ್” ಎಂಬ ಕಾಲೋಚಿತ ನಿರ್ಣಯದೊಂದಿಗೆ ಮತಾಂತರ ತಡೆದು ಪುನರಾಗಮನಕ್ಕೆ ಪ್ರೇರಣೆ ನೀಡುವ ಉನ್ನತ ಕಾರ್ಯದ ಸಂಕಲ್ಪವಾಯಿತು. ಇದರ ಮುಂದುವರಿದ ಭಾಗವಾಗಿ 1969ರಲ್ಲಿ ಉಡುಪಿಯಲ್ಲಿ ಮತ್ತೊಂದು ಧರ್ಮ ಸಂಸದ್ ನಡೆದು ” ಹಿಂದವಃ ಸೋದರಾಃ ಸರ್ವೇ” ಎನ್ನುವ ನಿರ್ಣಯದ ಮುಖಾಂತರ ಅಸ್ಪೃಶ್ಯತಾ ನಿವಾರಣೆ ಮಾಡುವುದರ ಮೂಲಕ ಸಾಮಾಜಿಕ ಸಾಮರಸ್ಯದ ಸಮಾಜದ ನಿರ್ಮಾಣಕ್ಕೆ ನಿರ್ಣಯವನ್ನು ತೆಗೆದುಕೊಳ್ಳಲಾಯಿತು. ಇನ್ನು 1983ರಲ್ಲಿ ಉಜಿರೆಯಲ್ಲಿ ನಡೆದ ಧರ್ಮ ಸಂಸದ್ ನಲ್ಲಿ “ಮಮ ದೀಕ್ಷಾ ಹಿಂದು ರಕ್ಷಾ, ಮಮ ಮಂತ್ರಃ ಸಮಾನತಾ” ಎನ್ನುವ ಮಹತ್ತರ ನಿರ್ಣಯದ ಮುಖೇನ ಸಮಾನತೆಯ ನಿರ್ದಾರ ಹಾಗೂ ಹಿಂದು ಧರ್ಮದ ರಕ್ಷಣೆಗೆ ಶಪಥ ಪಡೆಯಲಾಯಿತು. 1985ರಲ್ಲಿ ಉಡುಪಿಯಲ್ಲಿ ನಡೆದ ಮಗದೊಂದು ಧರ್ಮಸಂಸದ್ ನಲ್ಲಿ “ಶ್ರೀ ರಾಮ ಜನ್ಮಭೂಮಿ ತಾಲಾ ಖೋಲೋ” ಎಂಬ ಬಹು ಕಾಲೋಚಿತ ನಿರ್ಣಯದ ಫಲವಾಗಿ ಸಂಸದ್ ನಡೆದ ಒಂದೇ ವಾರದೊಳಗಾಗಿ ಶ್ರೀ ರಾಮ ಜನ್ಮಭೂಮಿಯ ಬೀಗ ತೆರೆಯಲಾಯಿತು. ಹೀಗೆ ಹಿಂದು ಸಮಾಜದಲ್ಲಿನ ದೋಷಗಳ ನಿವಾರಣೆಗಾಗಿ, ಮಾನ ಬಿಂದುಗಳ ಸಂರಕ್ಷಣೆ, ಸಂವರ್ಧನೆಗಾಗಿ ಕಾಲೋಚಿತ ನಿರ್ಣಯಗಳನ್ನು ನೀಡಿ ಹಿಂದು ಸಮಾಜದ ಉನ್ನತಿಗೆ ಭದ್ರ ಅಡಿಪಾಯ ಹಾಕಲಾಗಿದೆ.

2017ರ ಧರ್ಮ ಸಂಸದ್ ನ ಪ್ರಾಮುಖ್ಯತೆ:
ಹಿಂದು ಸಮಾಜದ ಭದ್ರ ಬುನಾದಿಗೆ ತಳಪಾಯ ಹಾಕುವತ್ತ ಈ ಐತಿಹಾಸಿಕ ಧರ್ಮ ಸಂಸದ್ ಅಧಿವೇಶನವು ಕಾರ್ಯ ಪ್ರವೃತ್ತವಾಗಿದ್ದು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವಿರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಸ್ವಾಗತ ಸಮಿತಿಯ ಉದ್ಘಾಟನೆಗೊಂಡಿದ್ದು, ಅಧಿವೇಶವನ್ನು ಯಶಸ್ವಿಗೊಳಿಸುವತ್ತ ಕಾರ್ಯ್ನೋನ್ಮುಖವಾಗಿದೆ. ಜಾತಿ ಲಿಂಗ ತಾರತಮ್ಯವಿರದೆ ಸಮಸ್ತ ಹಿಂದು ಬಂಧು ಭಗಿನಿಯರಿಗೆ ಸಮಾನ ಧಾರ್ಮಿಕ ಸ್ವಾತಂತ್ರ್ಯ, ಗೋ ಸಂವರ್ಧನೆ, ಗೋ ರಕ್ಷಣೆ,ಸಮಗ್ರ ಗೋ ಸಂರಕ್ಷಣಾ ಕಾನೂನು, ಮತಾಂತರ ತಡೆದು ಪುನರಾಗಮನದ ವೇಗ ಹೆಚ್ಚಿಸಲು ಸಂತರ ಸಕ್ರಿಯತೆ, ಸಾಂಸ್ಕೃತಿಕ ಆಕ್ರಮಣಕ್ಕೆ ತಡೆ, ಮನೆಗಳಲ್ಲಿ ಹಿಂದು ಸಂಸ್ಕೃತಿ ಸ್ವಾಭಿಮಾನ ಬೆಳೆಸುವ ಯೋಜನೆ, ಅಯೋದ್ಯಾ ಶ್ರೀರಾಮ ಜನ್ಮಭೂಮಿ ಮಂದಿರ ಪುನರ್ನಿರ್ಮಾಣದ ಕುರಿತು ಚಿಂತನೆ ನಡೆಸಿ ನಿರ್ಣಾಯಕ ನಿರ್ಧಾರಕ್ಕಾಗಿ ಕಾಲೋಚಿತ ನಿರ್ಣಯಗಳನ್ನು ತೆಗೆದು ಕೊಳ್ಳುವತ್ತ ವಿಚಾರ ಮಂಥನ ನಡೆಯಲಿದೆ.

ನವೆಂಬರ್ 24ಶುಕ್ರವಾರ ಬೆಳಿಗ್ಗೆ 10.00ಗಂಟೆಗೆ ಪರಮ ಪೂಜ್ಯ ಸರಸಂಘ ಚಾಲಕರ ಉಪಸ್ಥಿತಿಯಲ್ಲಿ ಧರ್ಮ ಸಂಸದ್ ಉದ್ಘಾಟನೆ ಹಾಗೂ ಗೋಷ್ಠಿ ಚರ್ಚೆ ಸಂವಾದಗಳು ನಡೆಯಲಿದೆ. ನವೆಂಬರ್ 25ಶನಿವಾರ ಬೆಳಿಗ್ಗೆ ಸಂವಾದ ಸಮಾಲೋಚನೆ, ನಿರ್ಣಯಗಳು ಮುಂದುವರೆಯಲಿದೆ.ನವೆಂಬರ್ 26ರ ಭಾನುವಾರ ಬೆಳಿಗ್ಗೆ 9.00ಕ್ಕೆ ಕರ್ನಾಟಕದ ಎಲ್ಲಾ ಜಿಲ್ಲೆಗಳ ಹಿಂದು ಸಕಲ ಸಮಾಜ ಪ್ರಮುಖರ ಸಮಾಲೋಚನೆ, ಧರ್ಮ ಸಂಸದ್ ನಿರ್ಣಯಗಳ ಕ್ರಿಯಾನ್ವಯದ ಯೋಜನೆ ನಡೆದು ಅದೇ ದಿನ ಮದ್ಯಾನ್ಹ 3.00 ಸಂತರ ಸಮಾಜ ಪ್ರಮುಖರ ನೇತೃತ್ವದಲ್ಲಿ ಹಿಂದು ಬಂಧು ಭಗಿನಿಯರ ಬೃಹತ್ ಆಕರ್ಷಕ ಶೋಭಾ ಯಾತ್ರೆ, ತದನಂತರ ಹಿಂದು ಸಮಾಜೋತ್ಸವ ಲಕ್ಷ ಲಕ್ಷ ಹಿಂದುಗಳ ಸಮ್ಮೇಳನ, ನಡೆದು ಸ್ವಾಮೀಜಿಗಳಿಂದ ಧರ್ಮ ಸಂಸದ್ ಸಂದೇಶ ಸಾರಲಿದೆ.ಧರ್ಮ ಸಂಸದ್ನಲ್ಲಿ 2-3 ಸಾವಿರ ಮಂದಿ ಸಾಧು ಸಂತರಹಾಗೂ ಅವರ ಶಿಷ್ಯವೃಂದ ಒಡಗೊಡಿ 5000 ಜನರ ಭಾಗವಹಿಸುವಿಕೆಯ ನಿರೀಕ್ಷೆ ಇದೆ. ಇನ್ನೂ ನವೆಂಬರ್ 23,24ರಂದು ಸಾಯಂಕಾಲ ನಡೆಯುವ ಅಳ್ವಾಸ್ ನ ವಿದ್ಯಾರ್ಥಿಗಳಿಂದ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾರ್ವಜನಿಕ ಮುಕ್ತ ಪ್ರವೇಶವಿದೆ.ಇನ್ನು ಹಿಂದು ಧರ್ಮದಲ್ಲಿರುವ ನೃತ್ಯವೈಭವ, ಗಾನವೈಭವ, ವೈದ್ಯಕೀಯ ವೈಭವದ ಬಗೆಗೆ ಪರಿಚಯ ಮೂಡಿಸುವ ಸಲುವಾಗಿ ಸುಮಾರು 30000 ಚದರ ಅಡಿಯಲ್ಲಿ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಪುಣ್ಯಕಾರ್ಯಕ್ಕೆ ಸಜ್ಜಾಗುತ್ತಿದೆ ಉಡುಪಿ.:
ಹಿಂದು ಭಾಂದವರಲ್ಲಿ ತಲೆದೊರಿರುವ ಜಾತಿ ಆಧಾರಿತ ತಾರತಮ್ಯ, ದೇಶದಲ್ಲಿನ ಗೋಹತ್ಯಾ ಸಮಸ್ಯೆ, ಕ್ಷೀಣಿಸುತ್ತಿರುವ ಭಾರತೀಯತೆ, ಸಾಂಸ್ಕೃತಿಕ ಅಧಃಪತನ, ಮೊದಲಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು,ಇದೇ ನವೆಂಬರ್ 24,25,26ರಂದು ದೇಶದ ಸಮಸ್ತ ಹಿಂದು ಭಾಂದವರನ್ನೊಳಗೊಂಡ ಧರ್ಮ ಸಂಸದ್ ಗೆ ಸಾಕ್ಷಿಯಾಗಲಿದೆ ಶ್ರೀ ಕೃಷ್ಣನ ನೆಲೆವೀಡು.ಸಾಮಾಜಿಕ ಪರಿಪರ್ತನೆಯ ಹರಿಕಾರ, ಹಲವು ವಿಶೇಷಗಳ ಮುನ್ನುಡಿಗಾರ ,ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರ ಐತಿಹಾಸಿಕ ಪಂಚಮ ಪರ್ಯಾಯದ ಶುಭ ಅವಸರದಲ್ಲಿ ಹಿಂದು ಸಮಾಜದ ಒಗ್ಗಟ್ಟಿನ ಮಂತ್ರವನ್ನು ಜಾಗತಿಕ ಮಟ್ಟಕ್ಕೆ ಸಾರಲು ವಿಶ್ವ ಹಿಂದು ಪರಿಷತ್ ಕಂಕಣತೊಟ್ಟಿದೆ. 2000ಕ್ಕೂ ಹೆಚ್ಚಿನ ಸಾದುಸಂತರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರಮಪೂಜನೀಯ ಸರಸಂಚಾಲಕ ಮಾನನೀಯ ಡಾ. ಮೋಹನ್ ಭಾಗವತ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಾಬ ರಾಮ್ ದೇವ್, ಮಾತ ಅಮೃತಾನಂದಮಯಿ,ರವಿಶಂಕರ ಗುರೂಜಿ, ಮಹಾಮಂಡಲೇಶ್ವರರು, ವೀರಶೈವ ಸ್ವಾಮೀಜಿಗಳು,ವಿಶ್ವ ಹಿಂದು ಪರಿಷತ್ ನ ಪ್ರಮುಖರು ಒಟ್ಟಾಗಿ ಭವ್ಯ ಭವಿಷತ್ತಿಗೆ ಐತಿಹಾಸಿಕ ಮುನ್ನುಡಿ ಬರೆಯಲಿದ್ದಾರೆ. ಈ ಪುಣ್ಯ ಕಾರ್ಯಕ್ಕೆ ಈಗಾಗಲೇ ಒಂದು ತಿಂಗಳು ಬಾಕಿಯಿದ್ದು ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರ ಗೌರವದ್ಯಕ್ಷತೆ, ಪೂಜನೀಯ ಧರ್ಮಧಿಕಾರಿ ವಿರೇಂದ್ರ ಹೆಗಡೆಯವರ ಕಾರ್ಯದ್ಯಕ್ಷತೆಯಲ್ಲಿ,ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಡಾ.ವಿನಯ್ ಹೆಗ್ಡೆ, ಡಾ. ವಿಜಯ್ ಸಂಕೇಶ್ವರ್, ಏರ್ಯ ಲಕ್ಷ್ಮೀ ನಾರಾಯಣ ಆಳ್ವ, ಡಾ.ಮೋಹನ್ ಆಳ್ವ,ಲೇಖಕಿ ಸಂಧ್ಯಾ ಪೈ ಇವರ ಮಾರ್ಗದರ್ಶನದಲ್ಲಿ ಸ್ವಾಗತ ಸಮಿತಿಯ ರಚನೆಯಾಗಿದೆ. ಈಗಾಗಲೇ ಉಡುಪಿಯ ರಥಬೀದಿಯ ಪಕ್ಕದಲ್ಲಿರುವ ವಿಜಯಧ್ವಜದಲ್ಲಿ ಕಾರ್ಯಲಯ ಸ್ಥಾಪನೆಯಾಗಿದ್ದು, ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಪ್ರತಿದಿನ ಹಿರಿಯರ ಸಮ್ಮುಖದಲ್ಲಿ ಬೈಠಕ್, ಸಭೆ ಸಮಾಲೋಚನೆ, ಮನೆ ಮನೆಗೆ ಭೇಟಿ, ಕಾರ್ಯಕರ್ತರ ಸಮಾವೇಶ, ಮಹಿಳಾ ಕಾರ್ಯಕರ್ತರ ಸಭೆ ಮೊದಲಾದ ಕಾರ್ಯಕ್ರಮಗಳ ಮೂಲಕ ಧರ್ಮ ಸಂಸದ್ ನ ಬಗ್ಗೆ ಪದಾಧಿಕಾರಿಗಳು ಪ್ರಚಾರ ನಡೆಸುತ್ತಿದ್ದಾರೆ. ಊಟ ನೀರು ಸ್ವಚ್ಚತೆ, ಪಾರ್ಕಿಂಗ್ ವಸತಿ ಸಹಿತ ಒಟ್ಟು 97 ವಿಭಾಗಗಳನ್ನು ಮಾಡಲಾಗಿದ್ದು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 2000ಕ್ಕೂ ಹೆಚ್ಚಿನ ಮಂದಿ ಪ್ರಭಂದಕರು ಭಾಗವಹಿಸಲಿದ್ದಾರೆ.ಇನ್ನು ಅಧಾರತಿತ್ಯಕ್ಕೆ ಹೆಸರುವಾಸಿಯಾಗಿರುವ ಕರಾವಳಿ ಬರುವಂತಹ ಸಾಧು ಸಂತರಿಗೆ, ಧರ್ಮದ ಪ್ರಮುಖರಿಗೆ ಊಟೋಪಚಾರ, ವಸತಿ, ನೀರಿನ ಸೌಲಭ್ಯ ಮೊದಲಾದ ಮೂಲಭೂತ ಸೌಕರ್ಯಗಳಿಗಾಗಿ ಗ್ರಾಮ ಮಟ್ಟದಲ್ಲಿ ಅಲ್ಲಲ್ಲಿ ಬೈಠಕ್, ದೇವಸ್ಥಾನದ ಧರ್ಮದರ್ಶಿಗಳ ಸಭೆಗಳನ್ನು ನಡೆಸಿ ದೇವಾಲಯ, ಮನೆ ಮನೆ ಭೇಟಿ ನೀಡಿ ಕ್ರಮಬದ್ಧವಾಗಿ ನಡೆಸಲಾಗಿದೆ. ಧರ್ಮ ಸಂಸದ್ ನ ಅಂಗವಾಗಿ ರಥವನ್ನು ತಯಾರಿಸಲಾಗಿದ್ದು ಇದು ಧರ್ಮ ಸಂಸದ್ ನ ಅವಶ್ಯಕತೆಗಳ ಬಗೆಗಿನ ಸಂಪೂರ್ಣ ಮಾಹಿತಿ ಹಾಗೂ ಹಿಂದು ಧರ್ಮದ ಜಾಗೃತಿಯ ಬಗೆಗಿನ ಮಾಹಿತಿಗಳನ್ನು ಹೊಂದಿದ್ದು ಗ್ರಾಮ ಮಟ್ಟದ ಮೂಲೆ ಮೂಲೆಗಳಿಗೆ ತೆರಳಿ ಉಡುಪಿ ಜಿಲ್ಲೆಯಾದ್ಯಂತ ಬಿತ್ತರಿಸಲಿದೆ. ಇನ್ನೂ ರಾಷ್ಟ್ರವ್ಯಾಪಿ ಧರ್ಮ ಸಂಸದ್ ಬಗೆಗೆ ಸಮಿತಿಗಳ ರಚನೆಯಾಗಿದ್ದು ಕಾರ್ಯಕ್ರಮದ ಯಶಸ್ವಿಗೆ ಅವಿರತವಾಗಿ ಕೆಲಸ ನಿರ್ವಹಿಸುತ್ತಿವೆ. ಉಡುಪಿ ಕ್ಷೇತ್ರದಲ್ಲಿರುವ ಎಲ್ಲಾ ವಿಧಾನ ಸಭಾಕ್ಷೇತ್ರದಲ್ಲಿ ಭಾರೀ ಸಮಾವೇಶಗಳು, ಬೈಕ್ ರಾಲಿಗಳು ನಡೆದಿದ್ದು ಧರ್ಮ ಸಂಸದ್ ನ ಅವಶ್ಯಕತೆಗಳ ಬಗ್ಗೆ ಬೂತ್ ಮಟ್ಟದಲ್ಲಿ ಎಲ್ಲರಿಗೂ ಸಂಪೂರ್ಣ ವಿವರಗಳನ್ನು ನೀಡಲಾಗುತ್ತಿದೆ. ಇಡೀ ರಾಷ್ಟ್ರವೇ ಈ ಐತಿಹಾಸಿಕ ವೈಭವವನ್ನು ಕಣ್ತುಂಬಿಕೊಳ್ಳುವತ್ತ ಕಾತುರರಾಗಿದ್ದಾರೆ.

ಬರಹ: ಭಾಗ್ಯಶ್ರೀ ಐತಾಳ್ ಕರಂಬಳ್ಳಿ


Spread the love

Exit mobile version