ಧಾರ್ಮಿಕ ವಿಚಾರದಲ್ಲಿ ರಾಜಕಾರಣ ಮಾಡುವವರು ನಿಜವಾದ ಹಿಂದೂಗಳಲ್ಲ: ಪ್ರಕಾಶ್ ರಾಜ್

Spread the love

ಧಾರ್ಮಿಕ ವಿಚಾರದಲ್ಲಿ ರಾಜಕಾರಣ ಮಾಡುವವರು ನಿಜವಾದ ಹಿಂದೂಗಳಲ್ಲ: ಪ್ರಕಾಶ್ ರಾಜ್

ಮಂಗಳೂರು: ನಾನು ಕುಂಭ ಮೇಳಕ್ಕೆ ಹೋಗದಿರುವುದು ನನ್ನ ನಂಬಿಕೆಯ ವಿಚಾರ. ನಾನು ಧರ್ಮ ವಿರೋಧಿಯಲ್ಲ. ಆದರೆ ನನ್ನ ನಂಬಿಕೆಯನ್ನು ಎಐ ತಂತ್ರಜ್ಞಾನ ಬಳಸಿಕೊಂಡು ಧಾರ್ಮಿಕ ವಿಚಾರದಲ್ಲೂ ರಾಜಕಾರಣ ಮಾಡುವವರು ನಿಜವಾದ ಹಿಂದೂಗಳಲ್ಲ ಎಂದು ನಟ ಪ್ರಕಾಶ್ ರಾಜ್ ಪ್ರತಿಕ್ರಿಯಿಸಿದ್ದಾರೆ.

ಮಂಗಳೂರಿನಲ್ಲಿ ಶನಿವಾರ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಕುಂಭ ಮೇಳಕ್ಕೆ ಹೋಗುವುದು ಅವರವರ ನಂಬಿಕೆ. ಆದರೆ ನಾನು ಹೋಗದ್ದನ್ನೇ ವಿಚಾರವಾಗಿಸಿ, ಒಬ್ಬ ವ್ಯಕ್ತಿಯ ಇಚ್ಛೆಗೆ ವಿರುದ್ಧವಾಗಿ ಆತನ ಫೋಟೋವನ್ನು ದುರ್ಬಳಕೆ ಮಾಡಿಕೊಂಡು ಎಐ ನಂತಹ ತಂತ್ರಜ್ಞಾನವನ್ನು ದುರ್ಬಳಕೆ ಮಾಡುವುದು ಅಕ್ಷಮ್ಯ ಅಪರಾಧ. ಈ ರೀತಿ ತಪ್ಪು ಕಲ್ಪನೆ ಹರಡುವ ಕೆಲಸವನ್ನು ಪ್ರಶಾಂತ್ ಸಂಬರ್ಗಿಅಂಥವರು ಮಾಡುತ್ತಿದ್ದಾರೆ. ಅದನ್ನು ಪ್ರಶ್ನಿಸುವುದಕ್ಕಾಗಿ ಕೇಸ್ ದಾಖಲಿಸಲಾಗಿದೆ ಎಂದವರು ಹೇಳಿದರು.

ವಿಜ್ಞಾನ ಅಥವಾ ತಂತ್ರಜ್ಞಾನವನ್ನು ವಿಕಾಸಕ್ಕಾಗಿ ಉಪಯೋಗಿಸಬೇಕೇ ಹೊರತು, ಧಾರ್ಮಿಕ ಆಚರಣೆಯಲ್ಲೂ ರಾಜಕೀಯ ಮಾಡುವುದು ಅಸಹ್ಯ ಎಂದು ಪ್ರಕಾಶ್ ರಾಜ್ ಹೇಳಿದರು.

ರಾಜ್ಯ ರಾಜಕಾರಣದ ಬೆಳವಣಿಗೆ ಕುರಿತಂತೆ ಪ್ರಶ್ನೆಗೆ, ನಷ್ಟ ಇದೆ ಹಣ ಹೊಂದಿಸಲು ಆಗುತ್ತಿಲ್ಲ ಅಂದರೆ ಸರಕಾರ ಬಿಸ್ನೆಸ್ ಮಾಡುತ್ತಿದೆಯೇ, ಎಲ್ಲಿ ತಪ್ಪುತ್ತಿದೆ ಎಂದು ಯೋಚಿಸಬೇಕು. ಒಂದು ಸರ್ಕಾರ ಒಂದು ದೇಶ ನಡೆಯೋದು ಪ್ರಜೆಗಳ ದುಡ್ಡಿಂದ. ಒಂದು ದೇವಸ್ಥಾನ ನಡೆಯುವುದು ಪ್ರಜೆಗಳು ಹಾಕಿದ ಹುಂಡಿಯ ಹಣದಿಂದ. ಹಾಗಾಗಿ ಸರಕಾರ ಆಡಳಿತದಲ್ಲಿ ಎಲ್ಲಿ ಸೋಲುತ್ತಿದೆ ಎಂದು ಅರ್ಥ ಮಾಡಿಕೊಳ್ಳುವ ಜತೆಗೆ ಅದನ್ನು ಪ್ರಶ್ನಿಸುವ ಜವಾಬ್ಧಾರಿಯೂ ನಾಗರಿಕರದ್ದು ಎಂದು ಅವರು ಹೇಳಿದರು.

ಸುಪ್ರೀಂ ಕೋರ್ಟ್ ಫ್ರೀ ಬೀಸ್ ಪ್ಯಾರಸೈಟ್ ಅನ್ನುತ್ತೆ. ಆದರೆ, ಬಡವರಿಗೆ ಫ್ರೀ ಬೀಸ್ ನೀಡೋದು ಪ್ಯಾರಸೈಟ್ ಹೇಗಾಗುತ್ತೆ? ಹಾಗಾದರೆ ಕಾರ್ಪೊರೇಟ್ ಕಂಪನಿಗಳ ಸಾಲ ಮನ್ನಾ ಮಾಡೋದು ಯಾವ ಪ್ಯಾರಸೈಟ್ ಎಂದವರು ಪ್ರಶ್ನಿಸಿದರು.

ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಚರ್ಚೆ ವಿಚಾರದ ಕುರಿತಂತೆ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಂಬೇಡ್ಕರ್ ಅವರನ್ನ ಹೇಗೆ ಕೊಲ್ಲಬೇಕು ಅಂತ ಬಿಜೆಪಿ ಯೋಚನೆ ಮಾಡುತ್ತದೆ. ಅತ್ತ ಕಾಂಗ್ರೆಸ್ ಅಂಬೇಡ್ಕರ್ ಅವರನ್ನ ಹೇಗೆ ಉಪಯೋಗಿಸಬೇಕು ಅಂತ ಯೋಚನೆ ಮಾಡುತ್ತದೆ.

ಇವರಿಬ್ಬರ ಮಾತಿನ ನಡುವಿನ ಮೌನವನ್ನು ನಾವು ಪ್ರಜೆಗಳಾಗಿ ಅರ್ಥ ಮಾಡಿಕೊಳ್ಳಬೇಕು. ಜನರಿಗೆ ಈಗ ಅರ್ಥವಾಗುತ್ತಿದೆ. ಆಶ್ವಾಸನೆಗಳು ಎಷ್ಟು ಸುಳ್ಳು ಮಾತುಗಳು ಎಷ್ಟು ಸುಳ್ಳು ಅನ್ನೋದು ಜನರಿಗೆ ಅರ್ಥವಾಗುತ್ತದೆ. ಯಾರದೋ ಮಾತು ಕೇಳಿ ಮತ ಮಾಡುವುದರಿಂದ ಏನಾಗುತ್ತಿದೆ ಅನ್ನೋದು ಗೊತ್ತಾಗುತ್ತಿದೆ ಎಂದರು.

ಅಕ್ರಮ ವಲಸಿಗರು ಅಂದರೆ ಅಕ್ರಮವೇ ತಾನೇ, ಪ್ರತಿಯೊಂದು ದೇಶಕ್ಕೂ ಅವರದ್ದೇ ನೀತಿ ನಿಯಮ ಇರುತ್ತವೆ. ಸಕ್ರಮವಾಗಿ ಹೋದ್ರೆ ಯಾರೂ ಬೇಡ ಅನ್ನಲ್ಲ. ನಮ್ಮ ದೇಶದಿಂದ ಯಾಕೆ ಹೋದ್ರು ಅನ್ನೋ ಪ್ರಶ್ನೆ ಪ್ರಮುಖವಾಗಿರುವುದು. ನಮ್ಮದು ಮದರ್ ಆಫ್ ಡೆಮಾಕ್ರಸಿ ಅಂತೇವೆ. ಹಾಗಾದರೆ ಯಾಕೆ ಲಕ್ಷಾಂತರ ಜನರ ದೇಶ ಬಿಟ್ಟು ಹೋಗುತ್ತಿದ್ದಾರೆ ಎಂಬುದನ್ನು ನಾವು ಆಲೋಚನೆ ಮಾಡಬೇಕು.

ಇದೀಗ ಪ್ರಧಾನಿ ಮೋದಿ ಮೋದಿ ಹೋಗಿ ಟ್ರಂಪ್ ಜೊತೆ ಮಾತಾಡಿ ಅದನ್ನೆಲ್ಲ ಸರಿ ಮಾಡುತ್ತಾರೆ ಅನ್ನೋದು ಮುಖ್ಯವಲ್ಲ ಎಂದು ಅಮೆರಿಕಾ ದಿಂದ ಅಕ್ರಮ ವಲಸಿಗರ ನಿರ್ಗಮನ ಹಿನ್ನೆಲೆಯಲ್ಲಿ ಪ್ರಧಾನಿ ಮೋಧಿ ಭೇಟಿ ವಿಚಾರ ಕುರಿತ ಪ್ರಶ್ನೆಗೆ ಪ್ರಕಾಶ್ ರಾಜ ಈ ಉತ್ತರ ನೀಡಿದರು.

ದೆಹಲಿಯಲ್ಲಿ ಆಪ್‌ಗೆ ಗೆಲ್ಲಲು ಅವಕಾಶ ಇತ್ತಾದರೂ, ಜನ ಸೋಲಿಸಿದ್ದಾರೆ ಅಂದ್ರೆ ಜನ ಬೇಸತ್ತಿದ್ಧಾರೆ ಎಂದರ್ಥ. ಅದನ್ನ ಒಪ್ಪಿಕೊಳ್ಳಲೇ ಬೇಕು. ಒಳ್ಳೆಯ ಕೆಲಸ ಮಾಡಿದ ತಕ್ಷಣ ದೇಶದಲ್ಲಿ ಅವರೇ ಗೆಲ್ಲುತ್ತಾರೆ ಎಂಬ ಖಾತರಿ ಇಲ್ಲ. ಕಳೆದ ಮೂರು ವರ್ಷಗಳ ಕಾಲ ಅವರಿಗೆ ಸರಿಯಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿಲ್ಲ ಎಂಬ ಆಪ್‌ನ ಮಾತುಗಳಲ್ಲೂ ಸತ್ಯವಿದೆ. ಮುಖ್ಯಮಂತ್ರಿಯನ್ನು ಜೈಲಿನಲ್ಲಿರಿಸಲಾಯಿತು. ಈ ಬಗ್ಗೆ ಪ್ರಜೆಗಳು ಯೋಚನೆ ಮಾಡಬೇಕು ಎಂದು ಹೇಳಿದರು.


Spread the love
Subscribe
Notify of

0 Comments
Inline Feedbacks
View all comments