ಧ್ವಜಾರೋಹಣ, ಅನಾವರಣದಲ್ಲಿದೆ ವ್ಯತ್ಯಾಸ – ವಕೀಲ ಶ್ರೀನಿಧಿ ಹೆಗ್ಡೆ
ಉಡುಪಿ: ಸ್ವಾತಂತ್ರ್ಯ ಪಡೆದು ಬ್ರಿಟಿಷರ ಧ್ವಜ ಇಳಿಸಿ ಭಾರತದ ತ್ರಿವರ್ಣ ಧ್ವಜ ಏರಿಸಲಾಗುವ ಆಗಸ್ಟ್ 15ರಂದು ಧ್ವಜಾರೋಹಣ ನಡೆಯಲಿದೆ. ಸುಮಾರು 2 ವರ್ಷ 11 ತಿಂಗಳು 18 ದಿನದಲ್ಲಿ ರಚನೆಯಾದ ಸಂವಿಧಾನವನ್ನು ಅಂಗೀಕರಿಸಿ, ರಾಜತಂತ್ರದಿಂದ ಗಣತಂತ್ರ ವ್ಯವಸ್ಥೆಗೆ ಬದಲಾಗಿದೆ ಪ್ರತಿಕವಾಗಿ ಜನವರಿ 26 ರಂದು ಧ್ವಜ ಅನಾವರಣಗೊಳಿಸಿ ಗಣರಾಜ್ಯೋತ್ಸವ ಆಚರಿಸುತ್ತೇವೆ. ಹೀಗಾಗಿ ಮಕ್ಕಳು ಧ್ವಜ ಆರೋಹಣ ಹಾಗೂ ಅನಾವರಣದ ಮಾಹಿತಿಯನ್ನೂ ಅರಿತುಕೊಳ್ಳಬೇಕು ಎಂದು ವಕೀಲ ಶ್ರೀನಿಧಿ ಹೆಗ್ಡೆ ತಿಳಿಸಿದರು.
ಉಡುಪಿಯ ಇಂದ್ರಾಳಿ ಆಂಗ್ಲ ಮಾಧ್ಯಮ ಸಂಸ್ಥೆಯಲ್ಲಿ ಇತ್ತೀಚೆಗೆ ನಡೆದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದ ವ್ಯತ್ಯಾಸ, ವಿಶೇಷತೆ ಮತ್ತು ರಾಷ್ಟ್ರಕ್ಕೆ ಸಂಬಂಧಿಸಿದ ಅನೇಕ ವಿಚಾರಗಳನ್ನು ಹಾಗು ಭಾರತೀಯರ ಪಾಲಿನ ಅತೀ ಮುಖ್ಯ ದಿನವಾದ ರಾಷ್ಟ್ರದ ಪ್ರಜೆಗಳು ರಾಷ್ಟ್ರೀಯ ಹಬ್ಬವಾಗಿ ಆಚರಿಸುವ ಪ್ರಜಾಪ್ರಭುತ್ವದ ಮಹತ್ವವನ್ನು ಮತ್ತು ಸಂವಿಧಾನ ರಚನೆ ಆದ ಕುರಿತು, ಹಾಗೂ ಮೂಲಭೂತ ಹಕ್ಕು ಕರ್ತವ್ಯದ ಕುರಿತ ಜವಾಬ್ದಾರಿಯನ್ನು ತಿಳಿಸಿದರು. ಮಕ್ಕಳು ತಮ್ಮ ಗುರು ಹಿರಿಯರಿಗೆ ಗೌರವ ನೀಡುವುದು ರಾಷ್ಟ್ರ ಧ್ವಜ, ರಾಷ್ಟ್ರ ಗೀತೆಗೆ ಗೌರವ ನೀಡುವುದು, ಪರಿಸರವನ್ನು ಸ್ವಚ್ಚವಾಗಿಡುವುದು, ರಾಷ್ಟ್ರೀಯ ಚಿಂತನೆ ಬೆಳಸಿಕೊಳ್ಳಬೇಕು ಎಂದು ತಿಳಿಸಿದರು.
ಆಗಸ್ಟ್ 15 ನಮಗೆ ಬ್ರಿಟಿಷರಿಂದ ಸ್ವಾತಂತ್ರ್ಯ ದೊರಕಿದ ದಿನ, ಮೊದಲ ಬಾರಿಗೆ ರಾಷ್ಟ್ರಧ್ವಜ ಹಾರಿಸಿದ ಕ್ಷಣ. ಬ್ರಿಟಿಷರ ಧ್ವಜ ಇಳಿಸಿ ಭಾರತದ ಹೊಸ ಬಾವುಟ ಹಾರಿಸಿದ ದಿನ. ಹೀಗಾಗಿ, ಆ ದಿನದಂದು ಧ್ವಜವನ್ನು ಹಗ್ಗದಿಂದ ಕೆಳಗಿನಿಂದ ಮೇಲಕ್ಕೆ ಎಳೆಯಲಾಗುತ್ತದೆ, ನಂತರ ಅದನ್ನು ಬಿಚ್ಚಲಾಗುತ್ತದೆ ಮತ್ತು ಹಾರಿಸಲಾಗುತ್ತದೆ ಇದನ್ನು ಧ್ವಜಾರೋಹಣ ಎಂದು ಕರೆಯಲಾಗುತ್ತದೆ. ಇಂಗ್ಲಿಷಿನಲ್ಲಿ ಫ್ಲಾಗ್ ಹೋಸ್ಟಿಂಗ್ ಎನ್ನುತ್ತಾರೆ. ಆದರೆ ಜನವರಿ 26 ಗಣರಾಜ್ಯೋತ್ಸವ ದಿನದಂದು ಭಾರತಕ್ಕೆ ಅದಾಗಲೇ ಸ್ವಾತಂತ್ರ್ಯ ಬಂದಾಗಿತ್ತು. ಹೀಗಾಗಿ, ತಳದಿಂದ ಮೇಲಕ್ಕೆ ಬಾವುಟ ಹಾರಿಸಬೇಕಿಲ್ಲ. ಧ್ವಜವನ್ನು ಮೇಲ್ಭಾಗದಲ್ಲಿ ಕಟ್ಟಲಾಗುತ್ತದೆ, ನಂತರ ಅದನ್ನು ಬಿಚ್ಚಲಾಗುತ್ತದೆ ಮತ್ತು ಹಾರಿಸಲಾಗುತ್ತದೆ. ಸಂವಿಧಾನದಲ್ಲಿ ಇದನ್ನು ಧ್ವಜ ಅನಾವರಣ ಎಂದು ಕರೆಯಲಾಗುತ್ತದೆ. ಇಂಗ್ಲಿಷಿನಲ್ಲಿ ಫ್ಲ್ಯಾಗ್ ಆನ್ ಫರ್ಲಿಂಗ್ ಎಂದು ಕರೆಯಲಾಗುತ್ತದೆ.
ಆಗಸ್ಟ್ 15 ರಂದು, ಕೇಂದ್ರ ಸರ್ಕಾರದ ಮುಖ್ಯಸ್ಥರಾದ ಪ್ರಧಾನ ಮಂತ್ರಿಗಳು ಧ್ವಜಾರೋಹಣ ಮಾಡುತ್ತಾರೆ. ಆದರೆ ದೇಶದಲ್ಲಿ ಸಂವಿಧಾನದ ಅನುಷ್ಠಾನದ ಸ್ಮರಣಾರ್ಥವಾಗಿ ಆಚರಿಸಲಾಗುವ ಜನವರಿ 26 ಗಣರಾಜೋತ್ಸವ, ಈ ದಿನದಂದು ಸಂವಿಧಾನದ ಮುಖ್ಯಸ್ಥರು ರಾಷ್ಟ್ರಪತಿ ಧ್ವಜ ಅನಾವರಣ ಮಾಡುತ್ತಾರೆ, ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಪ್ರಧಾನಿ ಕೆಂಪು ಕೋಟೆಯಿಂದ ಧ್ವಜಾರೋಹಣವನ್ನು ಮಾಡುತ್ತಾರೆ ಅಂದು ನವದೆಹಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ ನಿಂತು ದೇಶವನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ.
ಜನವರಿ 26, ಗಣರಾಜ್ಯೊತ್ಸವ ದಿನದಂದು ದೇಶದ ಮೊದಲ ಪ್ರಜೆಯಾಗಿ ಹಾಗೂ ಸಂವಿಧಾನ ಮುಖ್ಯಸ್ಥರಾಗಿ ರಾಷ್ಟ್ರಪತಿಗಳು ಧ್ವಜ ಅನಾವರಣಗೊಳಿಸುತ್ತಾರೆ. ಇದು ಆಗುವುದು ನವದೆಹಲಿಯ ಕರ್ತವ್ಯ ಪತ್ ನಲ್ಲಿ. ಗಣರಾಜ್ಯೋತ್ಸವದ ಒಂದು ದಿನ ಮುಂಚಿತವಾಗಿ ಭಾರತದ ರಾಷ್ಟ್ರಪತಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಾರೆ.
ಗಣರಾಜ್ಯೋತ್ಸವದ ದಿನ ಭಾರತದ ಮೂರು ಸೇನೆಗಳಿಂದ, ಪೊಲೀಸ್ ಇಲಾಖೆಗಳಿಂದಲೂ ಪಥ ಸಂಚಲನ ನಡೆಯುತ್ತದೆ. ದೇಶದ ವಿವಿಧ ರಾಜ್ಯಗಳಿಂದ ಸ್ಥಬ್ದ ಚಿತ್ರ ಹಾಗೂ ದೇಶದ ವೈವಿಧ್ಯತೆ ತೋರಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ ಎಂದು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀನಿಧಿ ಹೆಗ್ಡೆ ಅವರು ಪ್ರಜಾಪ್ರಭುತ್ವದ ಮಹತ್ವ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆ ವ್ಯತ್ಯಾಸ ಮತ್ತು ಪ್ರಜಾಪ್ರಭುತ್ವ ಅಸ್ತಿತ್ವದವಾದ ಸಂವಿದಾನದ ಕುರಿತ ಮಹತ್ವದ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಕೆ. ಅಣ್ಣಪ್ಪ ಶೆಣೈ ವಹಿಸಿದ್ದರು, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಶಶಿರಾಜ್ ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕ ಕೆ.ವಿನಾಯಕ ಕಿಣಿ, ಪ್ರಾಥಮಿಕ ಶಾಲಾ ವಿಭಾಗ ಮುಖ್ಯಶಿಕ್ಷಕಿ ರೇಷ್ಮಾ ಪ್ರಭು, ಶಾಲಾ ಶಿಕ್ಷಕರು ಮತ್ತು ಶಿಕ್ಷಕೇತರ ವರ್ಗ, ವಿದ್ಯಾರ್ಥಿಗಳು, ಪಾಲಕರು, ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿದ್ಯಾರ್ಥಿನಿ ದಿಶಾ ಸಾಲ್ವಂಕರ್ ಸ್ವಾಗತಿಸಿದರು. ಅಭಿರಾಮ್ ಪಲಿಮಾರು ಪ್ರಶಸ್ತಿ. ಲಿಖಿತಾ ಕಿದಿಯೂರು ಕಾರ್ಯಕ್ರಮ ನಿರೂಪಿಸಿದರು.