ನಂಜನಗೂಡು ಆರೋಗ್ಯಾಧಿಕಾರಿ ಆತ್ಮಹತ್ಯೆ: ಕುಟುಂಬಕ್ಕೆ 50 ಲಕ್ಷ ರೂ ಪರಿಹಾರ, ಪ್ರಾದೇಶಿಕ ಆಯುಕ್ತರಿಂದ ತನಿಖೆ-ಸಿಎಂ ಘೋಷಣೆ
ಮೈಸೂರು: ಹಿರಿಯ ಅಧಿಕಾರಿಗಳ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದ ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ನಾಗೇಂದ್ರ ಅವರ ಕುಟುಂಬಕ್ಕೆ 50 ಲಕ್ಷ ರೂ ಪರಿಹಾರ ಹಾಗೂ ಅವಲಂಬಿತರಿಗೆ ಉದ್ಯೋಗ ನೇಮಕಾತಿ ಮತ್ತು ಇನ್ನಿತರ ಸೌಲಭ್ಯ ಒದಗಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್ಯಡಿಯೂರಪ್ಪ ಘೋಷಿಸಿದ್ದಾರೆ. ಇದಲ್ಲದೆ ಅಧಿಕಾರಿ ಆತ್ಮಹತ್ಯೆ ಪ್ರಕರಣವನ್ನು ತನಿಖೆಗಾಗಿ ಪ್ರಾದೇಶಿಕ ಆಯುಕ್ತರಿಗೆ ವಹಿಸಲಾಗಿದ್ದು ನಿಷ್ಪಕ್ಷಪಾತ ಹಾಗೂ ಸಮಗ್ರವಾಗಿ ತನಿಖೆ ನಡೆಸಲು ಆದೇಶಿದ್ದಾರೆ.
ಈ ಸಂಬಂಧ ಮಾತನಾಡಿರುವ ಸಿಎಂ ಯಡಿಯೂರಪ್ಪ “ನಾಂಗೇಂದ್ರ ಅವರ ಆತ್ಮಹತ್ಯೆಯನ್ನು ವಿಶೇಷ ಪ್ರಕರಣ ಎಂದು ಭಾವಿಸಿ ಸತ್ಯ ಸಂಗತಿ ಅರಿಯಲು ಸಮಗ್ರ ತನಿಖೆಗೆ ಆದೇಶಿಸಲಾಗಿದೆ. ಅಲ್ಲದೆ ಕುಟುಂಬ ಸದಸ್ಯರಿಗೆ 50 ಲಕ್ಷ ರೂ ಪರಿಹಾರ, ಅವರು ಕೇಳಿದ್ದಾದರೆ ಅವಲಂಬಿತರಿಗೆ ಉದ್ಯೋಗ ಸಹ ಒದಗಿಸಲು ತೀರ್ಮಾನಿಸಲಾಗಿದೆ, ” ಎಂದರು.
ಇನ್ನು ಈ ಕುರಿತು ಟ್ವೀಟ್ ಮಾಡಿರುವ ಸಿಎಂ “ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ನಂಜನಗೂಡು ತಾಲ್ಲೂಕಿನ ಪ್ರಭಾರ ತಾಲ್ಲೂಕು ಆರೋಗ್ಯ ಅಧಿಕಾರಿಯಾಗಿದ್ದ ಡಾ ಎಸ್.ಆರ್. ನಾಗೇಂದ್ರ ಅವರ ಕುಟುಂಬಕ್ಕೆ 50 ಲಕ್ಷ ರೂ ಪರಿಹಾರ, ಕುಟುಂಬದ ಒಬ್ಬರು ಅವಲಂಬಿತರಿಗೆ ಉದ್ಯೋಗ ನೇಮಕಾತಿ ಮತ್ತು ಇನ್ನಿತರ ಸೌಲಭ್ಯ ಪಾವತಿ ಹಾಗು ಘಟನೆ ಸಂಬಂಧ ನಿಷ್ಪಕ್ಷಪಾತ ಹಾಗೂ ಸಮಗ್ರವಾಗಿ ತನಿಖೆ ನಡೆಸಲು ಆದೇಶಿಸಲಾಗಿದೆ.” ಎಂದಿದ್ದಾರೆ