Home Mangalorean News Kannada News ನಂದ ರಾಯನ ಕೋಟೆ ಬಾರ್ಕೂರಿನಲ್ಲಿ ಪ್ರೇಕ್ಷಕರ ಮನಸೂರೆಗೊಂಡ ಜನಪದ ಜಾತ್ರೆ

ನಂದ ರಾಯನ ಕೋಟೆ ಬಾರ್ಕೂರಿನಲ್ಲಿ ಪ್ರೇಕ್ಷಕರ ಮನಸೂರೆಗೊಂಡ ಜನಪದ ಜಾತ್ರೆ

Spread the love

ನಂದ ರಾಯನ ಕೋಟೆ ಬಾರ್ಕೂರಿನಲ್ಲಿ ಪ್ರೇಕ್ಷಕರ ಮನಸೂರೆಗೊಂಡ ಜನಪದ ಜಾತ್ರೆ

ಉಡುಪಿ: ಬಾರ್ಕೂರಿನ ನಂದರಾಯನ ಕೋಟೆಯಲ್ಲಿ ಶನಿವಾರ ಸುಮಾರು 500 ಕ್ಕೂ ಅಧಿಕ ಮಂದಿ ಕಲಾವಿದರಿಂದ ಪ್ರದರ್ಶನಗೊಂದ ಜನಪದ ಗಾನ ನೃತ್ಯ ಕಾರ್ಯಕ್ರಮ ಜನಪದ ಲೋಕವನ್ನೇ ಅನಾವರಣಗೊಳಿಸಿತು.

ಬಾರ್ಕೂರಿನಲ್ಲಿ ನಡೆಯುತ್ತಿರುವ ಮೂರು ದಿನಗಳ ಆಳುಪೊತ್ಸವದ ಅಂಗವಾಗಿ ಆಯೋಜಿಸಿದ ಪಿಚ್ಚಳ್ಳಿ ಶ್ರೀನಿವಾಸ ನೇತೃತ್ವದಲ್ಲಿ ರಾಜ್ಯ 28 ಜಿಲ್ಲೆಗಳ ಸುಮಾರು 500 ಮಂದಿ ಕಲಾವಿದರು ತಮ್ಮ ಜಿಲ್ಲೆಗಳ ಜಾನಪದ ಸೊಗಡನ್ನು ಪ್ರಸ್ತುತ ಪಡಿಸಿದರು. ಈ ಅಭೂತಪೂರ್ವ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವೆ ಡಾ|ಜಯಮಾಲಾ ಸೇರಿದಂತೆ ಕಿಕ್ಕಿರಿದು ಸೇರಿದ ಪ್ರೇಕ್ಷಕ ವರ್ಗ ಸಾಕ್ಷಿಯಾಯಿತು.

ಉಡುಪಿ ಜಿಲ್ಲೆಯ ಸ್ಥಳೀಯ ಜನಪದ ಕಲಾಪ್ರಕಾರಗಳಾದ ಪಾಡ್ದಾನ, ಕೊರಗರ ಡೋಲು ವಾದನ, ಮಾತ್ರವಲ್ಲದೆ ನಾಡಿನ ನಾನಾ ಪ್ರಕಾರದ ಜನಪದ ನೃತ್ಯ ವೈಭವವು ಒಂದೇ ವೇದಿಕೆಯಲ್ಲಿ ಮೂಡಿಬಂದು ನೋಡುಗರನ್ನು ಮೂಕ ವಿಸ್ಮಿತರನ್ನಾಗಿ ಮಾಡಿಸಿತು.

ಬೆಳಗಾವಿ, ಚಿಕ್ಕಮಂಗಳೂರ, ಧಾರವಾಡ, ದಾವಣಗೆರೆ ಇನ್ನಿತರ ಜಿಲ್ಲೆಗಳಿಂದ ಬಂದಿದ್ದ ಕಲಾವಿದರು ತಮ್ಮ ನೃತ್ಯ ಹಾಗೂ ಹಾಡುಗಾರಿಕೆಯ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

ವಿವಿಧ ಕಲಾತಂಡಗಳು ನಡೆಸಿಕೊಟ್ಟ ನೃತ್ಯ ಗಾನ ಪ್ರದರ್ಶನಗಳು ರಾಜ್ಯದ ಜನಪದ ಸಂಸ್ಕೃತಿಯನ್ನು ಬಿಂಬಿಸಿದವು. ಪೂಜಾಕುಣಿತ, ಕಂಸಾಳೆ, ಚಿಟ್ಟಿಮೇಳ, ವೀರಗಾಸೆ, ಕಂಗೀಲು ನೃತ್ಯ, ತಮಟೆ ನಗಾರಿ ವಾದನ, ಸಿದ್ದಿ ಸಮುದಾಯದ ನೃತ್ಯ, ವೀರಗಾಸೆ, ಡೊಳ್ಳು ಕುಣಿತದ ಸದ್ದು ಪ್ರೇಕ್ಷಕರಲ್ಲಿ ದೂಳೆಬ್ಬಿಸಿತು.

ಕಾರ್ಯಕ್ರಮದ ಆರಂಭದಲ್ಲಿ ಜನಪದ ಜಾತ್ರೆಗೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವೆ ಡಾ|ಜಯಮಾಲಾ ಅವರು ಸಂಗೀತ ಇರುವಲ್ಲಿ ಶಿವ ಇರುತ್ತಾನೆ ಎಂಬ ನಂಬಿಕೆ ನಮ್ಮದು. ಯಾವದೇ ದೇಶದ ಅಥವಾ ರಾಜ್ಯ ಸಂಸ್ಕೃತಿ ಎಂದರೆ ಅದರ ಕಲಾವಿದರು. ಕಲಾವಿದರನ್ನು ಬೆಳಿಸಿದಾಗ ಆಯಾ ದೇಶ ಅಥವಾ ರಾಜ್ಯದ ಸಂಸ್ಕೃತಿ ಸಂಪತ್ಭರಿತವಾಗಿರುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ಕಲಾವಿದರನ್ನು ಸೇರಿಸಿಕೊಂಡು ಇಂದು ಇಲ್ಲಿ ಅತ್ಯುತ್ತಮವಾದ ಜನಪದ ಜಾತ್ರೆಯನ್ನು ಮಾಡಲಾಗಿದೆ. ಈ ಮೂಲಕ ಕಲಾವಿದರಿಗೆ ಬೆಂಬಲ ನೀಡುವ ಕೆಲಸವನ್ನು ರಾಜ್ಯ ಸರಕಾರ ಮಾಡುತ್ತಿದ್ದು, ಸುಮಾರು 11500 ಕಲಾವಿದರು ಪ್ರೋತ್ಸಾಹ ಧನವನ್ನು ರಾಜ್ಯಸರಕಾರದಿಂದ ಪಡೆಯುತ್ತಿದ್ದು ಅವರಿಗೂ ಕೂಡ ಗೌರವದ ಬದುಕು ಜೀವಿಸಲು ಸಹಕಾರ ನೀಡುತ್ತಿದೆ. ಜಾನಪದವನ್ನು ಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ಜಾತ್ರೆಗಳು ಅರ್ಥಪೂರ್ಣ. ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಕಲಾ ಪ್ರದರ್ಶನ ನೀಡಲು 500ಕ್ಕೂ ಹೆಚ್ಚು ಕಲಾವಿದರನ್ನು ಒಂದೇ ವೇದಿಕೆಯಡಿ ತರುವ ಜಾನಪದ ಜಾತ್ರೆ ಆಯೋಜಿಸಲಾಗಿದೆ. ಜಾನಪದ ಕಲಾವಿದರಿಗೆ ಅವಕಾಶ ಮಾಡಿಕೊಡಲಾಗಿದೆ ಎಂದರು.


Spread the love

Exit mobile version