ನಕ್ಸಲರು ಗೌರಿ ಲಂಕೇಶ್‌ ಹತ್ಯೆ ಮಾಡಿರುವ ಸಾಧ್ಯತೆ ಇಲ್ಲ : ಎಸ್ಪಿ ಅಣ್ಣಾಮಲೈ

Spread the love

ನಕ್ಸಲರು ಗೌರಿ ಲಂಕೇಶ್‌ ಹತ್ಯೆ ಮಾಡಿರುವ ಸಾಧ್ಯತೆ ಇಲ್ಲ : ಎಸ್ಪಿ ಅಣ್ಣಾಮಲೈ

ಚಿಕ್ಕಮಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಅವರ ಹತ್ಯೆಗೂ ನಕ್ಸಲ್‌ಗೂ ಮೇಲ್ನೋಟಕ್ಕೆ ಯಾವುದೇ ಸಂಬಂಧ ಇಲ್ಲ ಎಂದು ಚಿಕ್ಕಮಗಳೂರಿನಲ್ಲಿ ಎಸ್ಪಿ ಅಣ್ಣಾಮಲೈ ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಣ್ಣಾಮಲೈ ಅವರು ನಕ್ಸಲರ ಶರಣಾಗತಿಯನ್ನು ಕಟ್ಟರ್ ನಕ್ಸಲರು ವಿರೋಧಿಸುತ್ತಾರೆ ಎಂಬುದು ಸರಿಯಲ್ಲ. ಜಿಲ್ಲೆಯಲ್ಲಿ ಇದುವರೆಗೂ ಬಹಳಷ್ಟೂ ನಕ್ಸರಲು ಶರಣಾಗಿದ್ದು, ಅವರ ಮೇಲಿದ್ದ ಪ್ರಕರಣವನ್ನು ಪರಿಹರಿಸಿಕೊಂಡು ಸಹಜ ಜೀವನ ನಡೆಸುತ್ತಿದ್ದಾರೆ. ನಕ್ಸಲರ ಶರಣಾಗತಿಗೆ ಗೌರಿ ಲಂಕೇಶ್ ಆಳವಾದ ಪ್ರಯತ್ನ ನಡೆಸುತ್ತಿದ್ದು, 2014 ರಲ್ಲಿ ನಕ್ಸಲರಿಗಾಗಿ ಜಾರಿಗೆ ತಂದ ನೂತನ ಪ್ಯಾಕೇಜ್ ಪರಿಣಾಮದಿಂದ ಹಲವರು ಶರಣಾಗಿದ್ದಾರೆ. ಇತ್ತೀಚಿನ ತಿಂಗಳಲ್ಲಿ 7 ಮಂದಿ ಶರಣಾಗಿದ್ದಾರೆ ಮತ್ತು ಎಲ್ಲರೂ ಜಾಮೀನಿನಿಂದ ಹೊರ ಬಂದಿದ್ದಾರೆ. ರಾಜ್ಯದಲ್ಲಿ ಇನ್ನೂ ನಾಲ್ಕೈದು ನಕ್ಸಲರಿದ್ದು ಅವರನ್ನು ಶರಣಾಗಿಸುವ ಪ್ರಯತ್ನ ನಡೆಯುತ್ತಿದೆ ಎಂದರು

ನಕ್ಸಲ್ ಶರಣಾಗತಿಗೆ ಗೌರಿ ಲಂಕೇಶ್ ಸಾಕಷ್ಟು ಶ್ರಮ ಪಟ್ಟಿದ್ದರು. ನಕ್ಸಲ್ ಶರಣಾಗತಿಗೆ ಸಂಬಂಧಪಟ್ಟಂತೆ ವಿರೋಧಿ ನಕ್ಸಲ್ ಗುಂಪು ಈ ಕೃತ್ಯ ಮಾಡಲು ಸಾಧ್ಯ ಇಲ್ಲ. ಈವರೆಗೂ ಯಾವುದೇ ಪೊಲೀಸ್ ತಂಡಗಳು ಚಿಕ್ಕಮಗಳೂರಿಗೆ ಬಂದಿಲ್ಲ. ತನಿಖೆಯ ವಿಚಾರ ಎಸ್ ಐ ಟಿ ತಂಡಕ್ಕೆ ಬಿಟ್ಟಿದ್ದು, ಇಲ್ಲಿವರೆಗೂ ಚಿಕ್ಕಮಗಳೂರಿನಲ್ಲಿ ಯಾವುದೇ ವ್ಯಕ್ತಿಯ ಬಂಧನವಾಗಿಲ್ಲ.

ಗೌರಿ ಅವರನ್ನು ಬಲಪಂಥೀಯರು ಹತ್ಯೆ ಮಾಡಿರಬಹುದು, ನಕ್ಸಲರು ಹತ್ಯೆ ಮಾಡಿರಬಹುದು ಎಂಬ ಮಾತುಗಳು ಕೇಳಿ ಬರುತ್ತಿದ್ದು, ಸರಕಾರವು ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಿದೆ.


Spread the love