Home Mangalorean News Kannada News ನಕ್ಸಲ್ ಕೂಂಬಿಂಗ್ ಸಂದರ್ಭ ಎಎನ್‌ಎಫ್ ಸಿಬ್ಬಂದಿ ಸಾವು

ನಕ್ಸಲ್ ಕೂಂಬಿಂಗ್ ಸಂದರ್ಭ ಎಎನ್‌ಎಫ್ ಸಿಬ್ಬಂದಿ ಸಾವು

Spread the love

ನಕ್ಸಲ್ ಕೂಂಬಿಂಗ್ ಸಂದರ್ಭ ಎಎನ್‌ಎಫ್ ಸಿಬ್ಬಂದಿ ಸಾವು

ಸುಳ್ಯ: ತಾಲೂಕಿನ ಮಡಪ್ಪಾಡಿ ಗ್ರಾಮದ ಹಾಡಿಕಲ್ಲು ಎಂಬಲ್ಲಿಗೆ ನಕ್ಸಲರೆಂದು ಶಂಕಿಸಲಾಗಿರುವ ಮೂವರು ಅಪರಿಚಿತರು ಭೇಟಿ ನೀಡಿದ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ದಳ ಮತ್ತು ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸಿ, ಕೂಂಬಿಂಗ್ ಮುಂದುವರಿಸಿದ್ದಾರೆ.

ಕೂಂಬಿಂಗ್ ನಡೆಸುತ್ತಿದ್ದ ಸಂದರ್ಭ ಕುಸಿದು ಬಿದ್ದು ಎಎನ್‌ಎಫ್ ಸಿಬ್ಬಂದಿ, ಕಾರ್ಕಳ ಕೆರೆಕಟ್ಟೆ ಎಎನ್‌ಎಫ್ ಬೆಟಾಲಿಯನ್‌ನಲ್ಲಿ ಹೆಡ್ ಕಾನ್ಸೇಬಲ್ ಆಗಿದ್ದ ರಂಗಸ್ವಾಮಿ(48) ಮೃತಪಟ್ಟಿದ್ದಾರೆ. ಮಡಪ್ಪಾಡಿ ಸಮೀಪ ಕೋಟೆಗುಡ್ಡ ಎಂಬಲ್ಲಿ ನಡೆಯುತ್ತಿದ್ದ ಕಾರ್ಯಾಚರಣೆ ವೇಳೆ ರಂಗಸ್ವಾಮಿ ಅಸ್ವಸ್ಥರಾಗಿ ಕುಸಿದು ಬಿದ್ದರು. ಜತೆಯಲ್ಲಿದ್ದ ಎಎನ್‌ಎಫ್ ಸಿಬ್ಬಂದಿ ಆರೈಕೆ ಮಾಡಿದರೂ ಫಲಕಾರಿಯಾಗದೆ ಮೃತಪಟ್ಟರು. ದುರ್ಗಮ ಕಾಡಿನಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದ ಸ್ಥಳದಿಂದ ಮಡಪ್ಪಾಡಿಗೆ ತರಲಾಯಿತು. ಬಳಿಕ ಸುಳ್ಯದಿಂದ ಆಂಬುಲೆನ್ಸ್ ಮಡಪ್ಪಾಡಿಗೆ ತೆರಳಿ ಮೃತದೇಹವನ್ನು ರಾತ್ರಿ ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜಿಗೆ ತರಲಾಗಿದೆ.

ಶುಕ್ರವಾರ ಆರಂಭವಾದ ಕೂಂಬಿಂಗ್ ಶನಿವಾರ ದಿನ ಪೂರ್ತಿ ಮುಂದುವರಿಯಿತು. 60ಕ್ಕೂ ಹೆಚ್ಚು ಮಂದಿ ಎಎನ್‌ಎಫ್ ಸಿಬ್ಬಂದಿ ಮತ್ತು ಪೊಲೀಸರು ಮಡಪ್ಪಾಡಿ ಮತ್ತು ಸುತ್ತಲ ಅರಣ್ಯದಲ್ಲಿ ವಿವಿಧ ತಂಡಗಳಾಗಿ ಕೂಂಬಿಂಗ್ ನಡೆಸುತ್ತಿದ್ದಾರೆ. ಹೆಚ್ಚುವರಿ ಪೊಲೀಸರನ್ನೂ ಕರೆಸಿಕೊಳ್ಳಲಾಗಿದೆ. ಮಡಪ್ಪಾಡಿ ಮತ್ತು ಪರಿಸರದಲ್ಲಿಯೂ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಕಾರ್ಕಳದ ಎಎನ್‌ಎಫ್ ಅಧಿಕಾರಿಗಳು ಮಡಪ್ಪಾಡಿಗೆ ಬಂದು ಕೂಂಬಿಂಗ್‌ಗೆ ನೇತೃತ್ವ ವಹಿಸಿದ್ದಾರೆ.

ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಆರ್.ರವಿಕಾಂತೇ ಗೌಡ ಶನಿವಾರ ಮಡಪ್ಪಾಡಿಗೆ ಆಗಮಿಸಿ ಪರಿಶೀಲನೆ ನಡೆಸಿ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದರು. ಪುತ್ತೂರು ಉಪ ವಿಭಾಗದ ಡಿವೈಎಸ್‌ಪಿ ಶ್ರೀನಿವಾಸ್, ಸುಳ್ಯ ವೃತ್ತ ನಿರೀಕ್ಷಕ ಆರ್.ಸತೀಶ್ ಕುಮಾರ್, ಎಸ್‌ಐ ಮಂಜುನಾಥ್ ಮತ್ತಿತರರು ಭೇಟಿ ನೀಡಿದ್ದಾರೆ. ಗುರುವಾರ ರಾತ್ರಿ ಮೂರು ಜನರ ಸಶಸ್ತ್ರಧಾರಿಗಳ ತಂಡ ಮಡಪ್ಪಾಡಿಯ ಹಾಡಿಕಲ್ಲಿನಲ್ಲಿ ರಬ್ಬರ್ ಟ್ಯಾಪಿಂಗ್ ನಡೆಸುತ್ತಿರುವ ಕೇರಳ ಮೂಲದ ಎ.ಜೆ.ಥಾಮಸ್ ಎಂಬವರು ವಾಸಿಸುವ ಶೆಡ್‌ಗೆ ಬಂದು ಬಂದೂಕು ತೋರಿಸಿ ಬೆದರಿಸಿ ಆಹಾರವನ್ನು ಸೇವಿಸಿ ಹೋಗಿದ್ದರು.


Spread the love

Exit mobile version