ನಗರಸಭಾ ಚುನಾವಣೆಯಲ್ಲಿ ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿದ ಅಭ್ಯರ್ಥಿಗಳಿಗೆ ಪ್ರಾಶಸ್ತ್ಯ; ಪ್ರಮೋದ್ ಮಧ್ವರಾಜ್
ಉಡುಪಿ: ಕಳೆದ 5 ವರ್ಷಗಳ ಕಾಂಗ್ರೆಸ್ ನೇತೃತ್ವದ ಉಡುಪಿ ನಗರ ಸಭೆಯ ಆಡಳಿತ ಯಾವುದೇ ಕಪ್ಪುಚುಕ್ಕಿ ಇಲ್ಲದೆ ಕಾರ್ಯನಿರ್ವಹಿಸಿದೆ. ಹಲವಾರು ಕೋಟಿ ಅಭಿವೃದ್ಧಿ ಕಾಮಗಾರಿಯೊಂದಿಗೆ ನಗರಸಭಾ ವ್ಯಾಪ್ತಿಯ ಪ್ರದೇಶಗಳ ಅಭಿವೃದ್ಧಿಗೊಂಡಿದೆ. ಸಂಪೂರ್ಣ ಕನಸಿನ ಉಡುಪಿ ನಿರ್ಮಾಣ ನಿರ್ಮಾಣಕ್ಕಾಗಿ ಜನಪರ ಕಾಳಜಿಯೊಂದಿಗೆ ಸ್ವಚ್ಚ ಆಡಳಿತ ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮುಂಬರುವ ನಗರಸಭಾ ಚುನಾವಣೆಯಲ್ಲಿ ಜನತೆ ಮತ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ನಿಕಟಪೂರ್ವ ಸಚಿವರಾದ ಪ್ರಮೋದ್ ಮಧ್ವರಾಜ್‍ರವರು ಬ್ರಹ್ಮಗಿರಿ ಕಾಂಗ್ರೆಸ್ ಭವನದಲ್ಲಿ ಬ್ಲಾಕ್ ಕಾಂಗ್ರೆಸ್ ಹಮ್ಮಿಕೊಂಡ ನಗರಸಭಾ ವ್ಯಾಪ್ತಿಯ ಸರ್ವ ಕಾರ್ಯಕರ್ತರ ಹಾಗೂ 35 ವಾರ್ಡ್‍ಗಳ ಬೂತ್, ಘಟಕಗಳ ಅಧ್ಯಕ್ಷರ ಸಭೆಯನ್ನು ಉದ್ದೇಶಿಸಿ ಹೇಳಿದರು.
ಸುಳ್ಳು ಆರೋಪಗಳಿಂದ ಆಕಸ್ಮಿಕವಾಗಿ ನನಗೆ ಸೋಲು ಬಂತದರೂ ಕಳೆದ 5 ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ಧಿಯೊಂದಿಗೆ ಜನರ ಸಂಕಷ್ಟಗಳಿಗೆ ಸ್ಪಂದಿಸಿದ ಸಂತೃಪ್ತಿಯಿದೆ. ಕಾಂಗ್ರೆಸ್ ಪಕ್ಷವನ್ನು ಹಿಂದೂ ವಿರೋಧಿ ಎಂದು ಬಿಂಬಿಸಿ ಬಿಜೆಪಿ ಕರಾವಳಿ ಪ್ರದೇಶದ ಉದ್ದಕ್ಕೂ ಮತಗಳಿಸಿರಬಹುದು ಆದರೆ ಇದು ತಾತ್ಕಾಲಿಕ. ಜನಸಮಾನ್ಯರಿಗೆ ಸತ್ಯದ ಅರಿವಾಗಿದೆ ಮುಂಬರುವ ದಿನಗಳಲ್ಲಿ ಜನತೆ ಪಕ್ಷವನ್ನು ಬೆಂಬಲಿಸುವುದರಲ್ಲಿ ಸಂಶಯವಿಲ್ಲ. ನಗರಸಭಾ ಚುನಾವಣೆಯಲ್ಲಿ ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಅಭ್ಯರ್ಥಿಗಳಿಗೆ ಪ್ರಾಶಸ್ತ್ಯ ನೀಡುವುದರೊಂದಿಗೆ ಕಾರ್ಯಕರ್ತರು ಶ್ರದ್ಧೆ ಮತ್ತು ಛಲದಿಂದ ಕಾರ್ಯ ನಿರ್ವಹಿಸಿದರೆ ಪಕ್ಷಕ್ಕೆ ಜನತೆ ಬೆಂಬಲ ನೀಡುವುದರಲ್ಲಿ ಸಂಶಯವಿಲ್ಲ ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ವ್ಯವಸ್ಥಿತವಾಗಿ ಬಿತ್ತರಿಸುವ ಬಿಜೆಪಿ ಷಡ್ಯಂತ್ರವನ್ನು ಕಾರ್ಯಕರ್ತರು ಜನತೆಗೆ ಮನವರಿಕೆ ಮಾಡಿಕೊಡಬೇಕಾಗಿದೆ. ಸತ್ಯ, ಧರ್ಮದಿಂದ ನಡೆದಾಗ ಮಾತ್ರ ಆ ಗೆಲುವು ಶಾಶ್ವತವಾಗುವುದು. ಜನತೆಗೆ ಸುಳ್ಳು ಸುದ್ದಿ ಹರಡಿಸುವುದೇ ಬಿಜೆಪಿಯ ದೊಡ್ಡ ಸಾಧನೆಯಾಗಿದೆ. ಪ್ರಮೋದ್ ಮಧ್ವರಾಜರು ಶಾಸಕರಾಗಿದ್ದಾಗ ನಗರಸಭೆಯ 35 ವಾರ್ಡ್‍ಗಳಲ್ಲಿಯೂ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಿ ಜನರ ಸಮಸ್ಯೆಗಳಿಗೆ ಪರಿಹಾರ ಸೂಚಿಸಿರುವುದು ಅವರ ಜನಪರ ಕಾಳಜಿಗೆ ಸಾಕ್ಷಿ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜನಾರ್ದನ ತೋನ್ಸೆಯವರು ಹೇಳಿದರು.
ಬ್ಲಾಕ್ ಅಧ್ಯಕ್ಷರಾದ ಸತೀಶ್ ಅಮೀನ್ ಪಡುಕರೆಯವರು ಮಾತನಾಡುತ್ತಾ ನಗರಸಭೆ ಚುನಾವಣೆಗೆ ಮೀಸಲಾತಿ ಪಟ್ಟಿ ಕರಡು ಪ್ರತಿಯಾಗಿದ್ದು ಸಾರ್ವಜನಿಕವಾಗಿ ತಕರಾರು ಸಲ್ಲಿಸುವ ಅವಕಾಶಗಳಿದ್ದು, ಆಕ್ಷೇಪಗಳಿದ್ದರೆ ಕೂಡಲೇ ಜಿಲ್ಲಾಧಿಕಾರಿಗಳಿಗೆ ಲಿಖಿತವಾಗಿ ಸಲ್ಲಿಸಬಹುದಾಗಿದೆ ಎಂದರು. ಚುನಾವಣೆ ಪ್ರಯುಕ್ತ ಶೀಘ್ರ ಪ್ರಣಾಲಿಕೆ ಸಮಿತಿ ಹಾಗೂ ಆರ್ಥಿಕ ಸಮಿತಿಗಳನ್ನು ರಚಿಸಲಾಗುವುದು ಎಂದರು.
ಸಭೆಯಲ್ಲಿ ಮೀನಾಕ್ಷಿ ಮಾಧವ ಬನ್ನಂಜೆ, ಸಂಧ್ಯಾ ತಿಲಕ್‍ರಾಜ್, ಹಾರ್ಮಿಸ್ ನೊರೋಹ್ನ, ಪ್ರಖ್ಯಾತ್ ಶೆಟ್ಟಿ, ಭಾಸ್ಕರ್ ರಾವ್ ಕಿದಿಯೂರು, ದಿನೇಶ್ ಪುತ್ರನ್, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಸದಾಶಿವ ಕಟ್ಟೆಗುಡ್ಡೆ, ಕೆ. ಕೃಷ್ಣಮೂರ್ತಿ, ಅಣ್ಣಯ್ಯ ಸೇರಿಗಾರ್, ಜ್ಯೋತಿ ಹೆಬ್ಬಾರ್, ರಫೀಕ್ ಕರಂಬಳ್ಳಿ, ಯಜ್ಞೇಶ್ ಆಚಾರ್ಯ, ಶಶಿರಾಜ್ ಕುಂದರ್, ಗಣಪತಿ ಶೆಟ್ಟಿಗಾರ್, ರಮೇಶ್ ಕಾಂಚನ್, ಶೋಭಾ ಪೂಜಾರಿ, ಸಲಿನ್ ಕರ್ಕಡ, ಸುಜಯ ಪೂಜಾರಿ, ವಿಜಯ ಪೂಜಾರಿ, ಮೊದಲಾದವರು ಉಪಸ್ಥಿತರಿದ್ದರು. ಬ್ಲಾಕ್ ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾರ್ಕಾರ್ ಕಾರ್ಯಕ್ರಮ ನಿರ್ವಹಿಸಿದರು.