ನಗರಸಭೆ ಕಸ ವಿಲೇವಾರಿಗಾಗಿ ಬಯೋ ಮಿಥನೇಷನ್ ಘಟಕ ಉದ್ಘಾಟನೆ
ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಹಸಿ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು, 39.57 ಲಕ್ಷ ವೆಚ್ಚದಲ್ಲಿ , ನಗರದ ಬೀಡಿನಗುಡ್ಡೆಯಲ್ಲಿ ನಿರ್ಮಿಸಲಾದ ಬಯೋ ಮಿಥನೇಷನ್ ಘಟಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಇಂದು ಉದ್ಘಾಟಿಸಿದರು.
ನಂತರ ಮಾತನಾಡಿದ ಸಚಿವರು, ರಾಜ್ಯದ ನಗರಸಭೆಗಳಲ್ಲಿ ಪ್ರಥಮವಾಗಿ ಉಡುಪಿ ನಗರಸಭೆಯಲ್ಲಿ ಈ ಮಿಥನೇಷನ್ ಘಟಕ ಸ್ಥಾಪಿಸಲಾಗಿದೆ, ಇಲ್ಲಿ ಸಂಗ್ರಹಿಸುವ ಹಸಿಕಸದಿಂದ ಮಿಥೇನ್ ಗ್ಯಾಸ್ ಉತ್ಪಾದನೆಯಾಗುತ್ತಿದ್ದು, ಇದನ್ನು ಇಲ್ಲಿನ ವಿದ್ಯುತ್ ಬಳಕೆಗೆ ಹಾಗೂ ಜನರೇಟರ್ ಗಳ ಕಾರ್ಯಕ್ಕೆ ಬಳಸಲಾಗುತ್ತಿದೆ, ಈ ರೀತಿಯ ಘಟಕಗಳನ್ನು ಖಾಸಗಿಯಾಗಿ ಅಪಾರ್ಟ್ ಮೆಂಟ್ ಗಳಲ್ಲಿ ಸಹ ಪ್ರಾರಂಭಿಸಬಹುದಾಗಿದ್ದು, ಇದರಿಂದ ವಿದ್ಯುತ್ ಉತ್ಪಾದನೆ ಸಾಧ್ಯವಿದೆ ಹಾಗೂ ಸಮರ್ಪಕ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಸಾಧ್ಯವಾಗಲಿದೆ ಎಂದು ಸಚಿವರು ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ, ಉಪಾಧ್ಯಕ್ಷೆ ಸಂಧ್ಯಾ, ನಗರಸಭೆಯ ಪೌರಯುಕ್ತ ಮಂಜುನಾಥಯ್ಯ, ಪರಿಸರ ಇಂಜಿನಿಯರ್ ರಾಘವೇಂದ್ರ, ಗುತ್ತಿಗೆದಾರ ಬಾಬು , ಮತ್ತಿತರರು ಉಪಸ್ಥಿತರಿದ್ದರು.