ನಗರ ಸ್ಥಳೀಯ ಸಂಸ್ಥೆ ಚುನಾವಣೆ : ಉಡುಪಿ ಜಿಲ್ಲೆಯಲ್ಲಿ ಶಾಂತಿಯುತ ಮತದಾನ
ಉಡುಪಿ: ನಗರ ಸ್ಥಳೀಯ ಸಂಸ್ಥೆ ಚುನಾವಣೆ-2018 ಕ್ಕೆ ಸಂಬಂದಪಟ್ಟಂತೆ, ಉಡುಪಿ ನಗರಸಭೆ, ಕುಂದಾಪುರ ಪುರಸಭೆ, ಕಾರ್ಕಳ ಪುರಸಭೆ, ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಶುಕ್ರವಾರ ಶಾಂತಿಯುತ ಮತದಾನವಾಗಿದೆ.
ಉಡುಪಿ ನಗರಸಭೆಗೆ 68% , ಸಾಲಿಗ್ರಾಮ ಪಟ್ಟಣ ಪಂಚಾಯತ್ ಗೆ 75%, ಕುಂದಾಪುರ ಪುರಸಭೆಗೆ 68%, ಕಾರ್ಕಳ ಪುರಸಭೆಗೆ 71% ಮತದಾನವಾಗಿದ್ದು, ಒಟ್ಟು ಜಿಲ್ಲೆಯಲ್ಲಿ 70.5% ಮತದಾನವಾಗಿದೆ.
ಬೆಳಗ್ಗೆಯಿಂದಲೇ ಮತಗಟ್ಟೆಗಳಿಗೆ ಆಗಮಿಸಿದ ಜನತೆ ಉತ್ಸಾಹದಿಂದ ಮತ ಚಲಾಯಿಸಿದರು. ಬೆಳಗ್ಗೆ 9 ಗಂಟೆಯ ವೇಳೆಗೆ ಜಿಲ್ಲೆಯಲ್ಲಿ 14.25% ಮತದಾನವಾಗಿದ್ದು, 11 ಗಂಟೆಯ ವೇಳೆಗೆ 31.14 %, 1 ಗಂಟೆಗೆ 45.40 % , 3 ಗಂಟೆಗೆ 56.43% ಮತದಾನ ನಡೆದಿತ್ತು.
ವೃದ್ದರು, ವಿಶೇಷ ಚೇತನರು, ಅನಾರೋಗ್ಯ ಪೀಡಿತರು ಸಹಾಯಕರ ನೆರವಿನಿಂದ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.
ಕುಂದಾಪುರದ ಸರಕಾರಿ ಆಸ್ಪತ್ರೆ ವಾರ್ಡ್ನ ಬಂಟ್ವಾಳ ರಘುನಾಥ ರಾವ್ಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆಗೆ ಅನಾರೋಗ್ಯ ಪೀಡಿತ 80 ವರ್ಷದ ಸಿದು ಮೊಗೇರ್ತಿ ವಾಕರ್ ನೆರವಿನಿಂದ ಬಂದು ಮತ ಚಲಾಯಿಸಿದರು. ಸಾಲಿಗ್ರಾಮದ ಯಕ್ಷಮಠ ವಾರ್ಡ್ ನ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಗುಂಡ್ಮಿಯಲ್ಲಿ 50 ವರ್ಷದ ವಿಶೇಷಚೇತನ ವ್ಯಕ್ತಿ ವಾಸು ಮತ ಚಲಾಯಿಸಿದರು.
ಉಡುಪಿ ನಗರ ಸಭೆಯ ಕರಂಬಳ್ಳಿ ವಾರ್ಡ್ ಸಂಖ್ಯೆ 12ರ ನಿಟ್ಟೂರು ಶಾಲೆಯ ಮತಗಟ್ಟೆಗೆ ಉಡುಪಿ ಶಾಸಕ ಕೆ.ರಘುಪತಿ ಭಟ್ ಕುಟುಂಬ ಸಮೇತರಾಗಿ ಆಗಮಿಸಿ ಮತದಾನ ಮಾಡಿದರು. ಇವರೊಂದಿಗೆ ತಾಯಿ ಸರಸ್ವತಿ ಬಡಿತ್ತಾಯ, ಪತ್ನಿ ಶಿಲ್ಪಾ ಮತದಾನ ಮಾಡಿದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ತನ್ನ ತಾಯಿ ಮಾಜಿ ಸಂಸದೆ ಹಾಗೂ ಮಾಜಿ ಸಚಿವೆ ಮನೋರಮಾ ಮಧ್ವರಾಜ್ ಜೊತೆಯಲ್ಲಿ ಆಗಮಿಸಿ ಮಲ್ಪೆಯ ಗಾಂಧಿ ಶತಾಬ್ದಿ ಶಾಲೆಯಲ್ಲಿ ಮತದಾನ ಮಾಡಿದರೆ ಇನ್ನೋರ್ವ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಪತ್ನಿಯ ಜೊತೆ ಆಗಮಿಸಿ ಅಜ್ಜರಕಾಡಿನ ಸರಕಾರಿ ಮಹಿಳಾ ಕಾಲೇಜಿನಲ್ಲಿ ಮತದಾನ ಮಾಡಿದರು.
ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ|ಜೆರಾಲ್ಡ್ ಐಸಾಕ್ ಲೋಬೊ ಅವರು ಕಾಡಬೆಟ್ಟು ಟಿ ಎಂ ಪೈ ಮೋಡರ್ನ್ ಶಾಲೆಗೆ ಆಗಮಿಸಿ ಮತದಾನ ಮಾಡಿದರು.