Home Mangalorean News Kannada News ನಗ-ನಗದು ಸುಲಿಗೆ ಪ್ರಕರಣ: ಏಳು ಮಂದಿ ಆರೋಪಿಗಳು ಸೆರೆ

ನಗ-ನಗದು ಸುಲಿಗೆ ಪ್ರಕರಣ: ಏಳು ಮಂದಿ ಆರೋಪಿಗಳು ಸೆರೆ

Spread the love

ನಗ-ನಗದು ಸುಲಿಗೆ ಪ್ರಕರಣ: ಏಳು ಮಂದಿ ಆರೋಪಿಗಳು ಸೆರೆ

ಮಂಗಳೂರು: ಕಾರ್‌ಸ್ಟ್ರೀಟ್‌ನ ಚಿನ್ನಾಭರಣ ಅಂಗಡಿಗಳ ಗ್ರಾಹಕರು ಹಾಗೂ ಅಂಗಡಿ ಮಾಲಕರನ್ನು ಹೆದರಿಸಿ ನಗ-ನಗದು ಸುಲಿಗೆ ಮಾಡುತ್ತಿದ್ದ ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪುತ್ತೂರು ತಾಲೂಕಿನ ಉಪ್ಪಿನಂಗಡಿ ನಿವಾಸಿ ಅಬ್ದುಲ್ ಮಜೀದ್ ಎಚ್. (32), ಬಂಟ್ವಾಳ ತಾಲೂಕಿನ ಪೆರಮೊಗರು ಕೆದಿಲ ನಿವಾಸಿ ಮುಹಮ್ಮದ್ ಶಾಫಿ ಯಾನೆ ಶಾಫಿ (24), ಕೋಲ್ನಾಡು ನಿವಾಸಿ ಆಸಿಫ್ ಕೆ. (25), ಬುಡೋಳಿ ಪೆರಾಜೆ ನಿವಾಸಿ ಮುಹಮ್ಮದ್ ನಾಸಿರ್ (20), ಪುದು ನಿವಾಸಿ ಮನ್ಸೂರ್ ಅಲಿ (30), ಫರಂಗಿಪೇಟೆ ನಿವಾಸಿಗಳಾದ ಮುಹಮ್ಮದ್ ಸೈಯದ್ (31) ಹಾಗೂ ಅಹ್ಮದ್ ಬಶೀರ್ (29) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಆ.13ರಂದು ಮಂಗಳೂರು ನಗರದ ಕಾರ್‌ಸ್ಟ್ರೀಟ್‌ನ ಖಾಸಗಿ ಶಾಲೆಯೊಂದರ ಸಮೀಪ ಆರೋಪಿಗಳು ಕಾರು ಮತ್ತು ಬೈಕ್‌ನಲ್ಲಿ ಬಂದು ಚಿನ್ನಾಭರಣ ಅಂಗಡಿಗಳ ಗ್ರಾಹಕರನ್ನು ಗುರಿಯಾಗಿಸಿಕೊಂಡು ಸುಲಿಗೆ ಮಾಡಲು ಹೊಂಚು ಹಾಕಿದ್ದರು. ಅಲ್ಲದೆ, ವ್ಯಾಪಾರ ಮುಗಿಸಿ ಹೋಗುವ ಅಂಗಡಿ ಮಾಲಕರನ್ನೂ ಅಡ್ಡಗಟ್ಟಿ ಹೆದರಿಸಿ, ಅವರಲ್ಲಿದ್ದ ಹಣ ಮತ್ತು ಚಿನ್ನವನ್ನು ಸುಲಿಗೆ ಮಾಡಲು ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಬಳಿಕ ಎಲ್ಲ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸಲಾಗಿದ್ದು, ವಿಚಾರಣೆಯಲ್ಲಿ ಆರೋಪಿಗಳು ಸುಲಿಗೆ ನಡೆಸುತ್ತಿದ್ದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಮಂಗಳೂರು ಉತ್ತರ ಪೊಲೀಸ್ ಠಾಣೆ, ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ಮತ್ತು ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಗಳಲ್ಲಿ ನಾಲ್ಕು ಪ್ರಕರಣಗಳಲ್ಲಿ ಚಿನ್ನದ ವ್ಯಾಪಾರಿಗಳ ನಗದು ಮತ್ತು ಚಿನ್ನವನ್ನು ಸುಲಿಗೆ ಮಾಡಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಮಾರುತಿ ಸ್ವಿಪ್ಟ್, ಮಾರುತಿ ಸೆಲೆರಿಯೋ, ಮಾರುತಿ ರಿಡ್ಝ್, ಟೋಯೋಟಾ ಗ್ಲಾಂಜಾ ಕಾರುಗಳು, ಬಜಾಜ್ ಕಂಪೆನಿಯ ಬೈಕ್, ಸುಮಾರು 140 ಗ್ರಾಂ ಚಿನ್ನ, 5.12 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಸ್ವಾಧೀನಪಡಿಸಿಕೊಂಡ ಸೊತ್ತುಗಳ ಮೌಲ್ಯ 25 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಈ ಕುರಿತು ಮಂಗಳೂರು ಉತ್ತರ (ಬಂದರ್) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಇನ್ನು ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ನಿರ್ದೇಶನದಂತೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅರುಣಾಶು ಗಿರಿ, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಲಕ್ಷ್ಮೀಗಣೇಶ್, ಕೇಂದ್ರ ಉಪ ವಿಭಾಗದ ಎಸಿಪಿ ಭಾಸ್ಕರ ಒಕ್ಕಲಿಗ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಂಗಳೂರು ನಗರ ಉತ್ತರ ಪೊಲೀಸ್ ಠಾಣಾ ನಿರೀಕ್ಷಕ ಗೋವಿಂದರಾಜು ಬಿ., ಪಿಎಸ್ಸೈ ಸುಂದರ್ ಮತ್ತು ಕೇಂದ್ರ ಉಪ ವಿಭಾಗದ ರೌಡಿ ನಿಗ್ರಹ ದಳದ ಪೊಲೀಸ್ ಉಪ ನಿರೀಕ್ಷಕ ಪ್ರದೀಪ್ ಟಿ.ಆರ್. ಮತ್ತು ಸಿಬ್ಬಂದಿ ಗಂಗಾಧರ್ ಎನ್., ವೆಲೆಸ್ಟೀನ್ ಜಾರ್ಜ್ ಡಿಸೋಜ, ವಿಶ್ವನಾಥ, ಸಂತೋಷ ಸಸಿಹಿತ್ಲು, ಕಿಶೋರ್ ಕೋಟ್ಯಾನ್, ನಾಗರಾಜ ಚಂದರಗಿ, ಭೀಮಪ್ಪ ಉಪ್ಪಾರ, ರಮೇಶ ಲಮಾಣಿ, ಅಂಜನಪ್ಪ ಹಾಗೂ ಮಂಗಳೂರು ಉತ್ತರ ಠಾಣಾ ಎಎಸ್ಸೈ ಪದ್ಮನಾಭ ಮತ್ತು ಜಗದೀಶ್ ಹಾಗೂ ಸಿಬ್ಬಂದಿ ಸುಜನ್ ಶೆಟ್ಟಿ, ಚಿದಾನಂದ, ತಿಪ್ಪಾರೆಡ್ಡಿ, ಬಸವರಾಜ, ಮಹಾದೇವ ಹಾಗೂ ಮಂಗಳೂರು ನಗರ ಪೊಲೀಸ್ ಕಂಪ್ಯೂಟರ್ ಘಟಕದ ಮನೋಜ್‌ಕುಮಾರ್ ಭಾಗವಹಿಸಿದ್ದರು.


Spread the love

Exit mobile version