ನದಿಗೆ ಹಾರಿ 25 ವರ್ಷದ ಯುವಕ ಆತ್ಮಹತ್ಯೆ
ಮಂಗಳೂರು: ನದಿಗೆ ಹಾರಿ 25 ವರ್ಷದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಮುಳಿಹಿತ್ಲು ಐಸ್ ಫ್ಯಾಕ್ಟರಿ ಬಳಿ ನಡೆದಿದೆ.
ಮೃತ ವ್ಯಕ್ತಿಯನ್ನು ಪಾವೂರು ಮಲಾರ್ ನಿವಾಸಿ ಮೊಹ್ಮದ್ ಅನ್ಸಾರ್ (25) ಎಂದು ಗುರುತಿಸಲಾಗಿದೆ.
ಮಧ್ಯಾಹ್ನ 2.30 ರ ಸುಮಾರಿಗೆ ಮ್ಯಾಂಗಲೋರಿಯನ್ ತಂಡಕ್ಕೆ ನದಿಯಲ್ಲಿ ಶವವೊಂದು ತೇಲುತ್ತಿರುವ ಮಾಹಿತಿ ಬಂದಿದ್ದು, ಕೂಡಲೇ ಮಾಹಿತಿಯನ್ನು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅವರಿಗೆ ನೀಡಲಾಗಿದ್ದು, ಕೂಡಲೇ ಸ್ಥಳಕ್ಕೆ ಡಿಸಿಪಿ ಧಾವಿಸಿ ಪರಿಶೀಲನೆ ನಡೆಸಿದರು.
ಮೃತದೇಹವನ್ನು ಪಾಂಡೇಶ್ವರ ಪೋಲಿಸರ ಸಹಾಯದಿಂದ ಮೇಲಕ್ಕೆತ್ತಿದ್ದು, ಮೃತದೇಹ ಮಹಮ್ಮದ್ ಅನ್ಸಾರ್ ಅವರದ್ದು ಎಂದು ಖಚಿತಪಡಿಸಲಾಯಿತು.
ಮಹಮ್ಮದ್ ಅನ್ಸಾರ್ ಮನೆಯವರು ಆತ ನಾಪತ್ತೆಯಾಗಿರುವ ಕುರಿತು ಕಂಕನಾಡಿ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕುಟುಂಬವರ್ಗದವರು ಸ್ಥಳಕ್ಕೆ ಬಂದು ಮೃತದೇಹದ ಗುರುತು ಪತ್ತೆ ಮಾಡಿದರು.
ಅಕ್ಟೋಬರ್ 24 ರಂದು ಬೆಳಿಗ್ಗೆ 3 ಗಂಟೆಯ ಹೊತ್ತಿಗೆ ತನ್ನ ಸಹೋದರನ್ನಲ್ಲಿ ಮುಳಿಹಿತ್ಲುವಿಗೆ ಬಿಡುವಂತೆ ಕೇಳಿದ್ದು ಅಲ್ಲಿ ಕೆಲಸ ಇದೆ ಎಂದು ಹೇಳಿದ್ದ ಎನ್ನಲಾಗಿದೆ ಅಲ್ಲದೆ ಈ ಮಾಹಿತಿಯನ್ನು ಮನೆಯವರಿಗೆ ತಿಳಿಸದಂತೆ ಹೇಳಿದ್ದನು, ಸಂಜೆ ವಾಪಾಸು ಬರುವುದಾಗಿ ತಿಳಿಸಿದ್ದ ಎನ್ನಲಾಗಿದೆ. ಅನ್ಸಾರ್ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಏನು ಎಂದು ತಿಳಿದು ಬಂದಿಲ್ಲ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಲಾಗಿದೆ.