ನನಗೆ ಪೊಲೀಸ್ ಭದ್ರತೆ ಬೇಡ, ಕಾರ್ಯಕರ್ತರೆ ನನಗೆ ಶ್ರೀರಕ್ಷೆ – ಸಂಸದೆ ಶೋಭಾ ಕರಂದ್ಲಾಜೆ
ಕುಂದಾಪುರ : ಕರ್ನಾಟಕದಲ್ಲಿ ಪೊಲೀಸರ ಸಂಖ್ಯೆ ಕಡಿಮೆ ಇರುವುದರಿಂದಾಗಿ ನಾನು ವಯಕ್ತಿಕ ಭದ್ರತಾ ಸಿಬ್ಬಂದಿಯನ್ನು ತೆಗೆದುಕೊಂಡಿಲ್ಲ. ಈ ಹಿಂದೆ ನನ್ನ ಭದ್ರತೆಗಾಗಿ ನಿಯೋಜನೆಯಾಗಿದ್ದ ಇಬ್ಬರು ಗನ್ಮ್ಯಾನ್ಗಳನ್ನು ಮರಳಿ ಅವರ ಕರ್ತವ್ಯಕ್ಕೆ ಕಳುಹಿಸಿದ್ದೇನೆ. ನನಗೆ ಜನರು ಹಾಗೂ ಕಾರ್ಯಕರ್ತರು ಶ್ರೀರಕ್ಷೆಯಾಗಿರುವುದರಿಂದ ಯಾವ ಭದ್ರತೆಯೂ ಬೇಡ ಎಂದು ಉಡುಪಿ-ಚಿಕ್ಕಮಗಳೂರು ಸಂದೆ ಶೋಭಾ ಕರಂದ್ಲಾಜೆ ಹೇಳಿದರು.
ಬುಧವಾರ ಕುಂದಾಪುರದ ಪುರಸಭಾ ವ್ಯಾಪ್ತಿಯ ಕೆಲವು ಪ್ರದೇಶಗಳಿಗೆ ಭೇಟಿ ನೀಡಿ, ಅಗತ್ಯ ವಸ್ತುಗಳ ಕಿಟ್ ವಿತರಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ನನಗೆ ವಿದೇಶದಿಂದ ಬೆದರಿಕೆ ಕರೆ ಬರುತ್ತಿರುವ ಬಗ್ಗೆ ಈಗಾಗಲೇ ಪೊಲೀಸರಿಗೆ ದೂರು ನೀಡಿದ್ದೇನೆ ಹಾಗೂ ರಾಜ್ಯ ಪೊಲೀಸ್ ಮುಖ್ಯಸ್ಥರೊಂದಿಗೂ ಮಾತನಾಡಿದ್ದೇನೆ. ನನಗೆ ಬೆದರಿಕೆ ಕರೆ ಬಂದಿರುವ ಬಗ್ಗೆ ತನಿಖೆ ನಡೆಯಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.
ಈಗಾಗಲೇ ನನಗೆ ಕರೆ ಮಾಡಿರುವ ದೂರವಾಣಿ ಸಂಖ್ಯೆಯನ್ನು ಪೊಲೀಸರಿಗೆ ನೀಡಿದ್ದೇನೆ. ಕುಂದಾಪುರದಲ್ಲಿ ಕಿಟ್ ವಿತರಿಸುವ ಐದು ನಿಮಿಷದ ಮೊದಲು ನನಗೆ ಕರೆ ಬಂದಿತ್ತು. ಆದರೆ ನಾನು ಸ್ವೀಕರಿಸಲಿಲ್ಲ. 2 ವರ್ಷಗಳಿಂದಲೂ ಈ ರೀತಿ ಇಂಟರ್ನೆಟ್ ಕರೆಗಳು ಬರುತ್ತಿದೆ. ಈ ಹಿಂದೆ ಚಿಕ್ಕಮಗಳೂರು ಎಸ್ಪಿಯಾಗಿದ್ದ ಅಣ್ಣಾಮಲೈ ಅವರಿಗೂ ಈ ಕುರಿತು ತಿಳಿಸಿದ್ದೆ. ಪಿಎಫ್ಐ ಹಾಗೂ ಎಸ್ಡಿಪಿಐ ವಿರುದ್ಧ ಮಾತನಾಡಿದಾಗ, ತಬ್ಲಿಘಿಗಳ ಬಗ್ಗೆ ಮಾತನಾಡಿದಾಗ ಕರೆ ಬರುತ್ತಿರುತ್ತದೆ. ಜಿಹಾದಿಗಳಿಂದ ಕೇರಳದ ಯುವಕನೊರ್ವನಿಗೆ ವಿದೇಶದಲ್ಲಿ ಕಪಾಳ ಮೋಕ್ಷವಾಗಿರುವ ಕುರಿತು ಮಾತನಾಡಿದ್ದಲ್ಲದೆ, ಈ ಬಗ್ಗೆ ಅಮಿತ್ ಶಾ ಅವರಿಗೆ ಪತ್ರ ಬರೆದ ಮೇಲೆ ಇಂತಹ ಕರೆಗಳ ಸಂಖ್ಯೆ ಜಾಸ್ತಿಯಾಗಿದೆ ಎಂದರು.
ಕೊರೊನಾ ವೈರಸ್ ವಿಸ್ತರಣೆಯಾಗದಂತೆ ಜಿಲ್ಲಾಡಳಿತ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ಹಾಗೂ ಗಟ್ಟಿ ನಿರ್ಧಾರ ಮೆಚ್ಚುಗೆಗೆ ಅರ್ಹವಾಗಿದೆ ಎಂದ ಸಂಸದೆ ಶೋಭಾ ಕರಂದ್ಲಾಜೆ, ಕೊರೊನಾ ಕಾರಣದಿಂದ ಏರುಪೇರಾದ ದೇಶದ ಒಟ್ಟಾರೆ ಅಭಿವೃದ್ಧಿ ಹಾಗೂ ಆರ್ಥಿಕ ಸ್ಥಿತಿ-ಗತಿ ಯನ್ನು ಸರಿದೂಗಿಸಲು ಸರ್ಕಾರ ಕೈಗೊಳ್ಳುವ ನಿರ್ಧಾರದ ಜತೆಗಿರುವುದಾಗಿ ತಿಳಿಸಿದರು.