Home Mangalorean News Kannada News “ನನ್ನ ಆಶ್ರಯದಾತರು, ನನ್ನ ಮನೆ, ನನ್ನ ಕುಟುಂಬ”: ವಯನಾಡ್ ಮತದಾರರಿಗೆ ಭಾವನಾತ್ಮಕ ಪತ್ರ ಬರೆದ ರಾಹುಲ್...

“ನನ್ನ ಆಶ್ರಯದಾತರು, ನನ್ನ ಮನೆ, ನನ್ನ ಕುಟುಂಬ”: ವಯನಾಡ್ ಮತದಾರರಿಗೆ ಭಾವನಾತ್ಮಕ ಪತ್ರ ಬರೆದ ರಾಹುಲ್ ಗಾಂಧಿ

Spread the love

“ನನ್ನ ಆಶ್ರಯದಾತರು, ನನ್ನ ಮನೆ, ನನ್ನ ಕುಟುಂಬ”: ವಯನಾಡ್ ಮತದಾರರಿಗೆ ಭಾವನಾತ್ಮಕ ಪತ್ರ ಬರೆದ ರಾಹುಲ್ ಗಾಂಧಿ

ಹೊಸದಿಲ್ಲಿ: ಇತ್ತೀಚೆಗೆ ಮುಕ್ತಾಯಗೊಂಡ 18ನೇ ಲೋಕಸಭಾ ಚುನಾವಣೆಯಲ್ಲಿ ವಯನಾಡ್ ಮತ್ತು ರಾಯ್ ಬರೇಲಿ ಎರಡೂ ಲೋಕಸಭಾ ಕ್ಷೇತ್ರಗಳಿಂದ ಗೆಲುವು ಸಾಧಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ರಾಯ್ ಬರೇಲಿ ಲೋಕಸಭಾ ಕ್ಷೇತ್ರದ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಹೀಗಾಗಿ ವಯನಾಡ್ ಲೋಕಸಭಾ ಕ್ಷೇತ್ರವನ್ನು ತೆರವುಗೊಳಿಸಿರುವ ಅವರು, ವಯನಾಡ್ ಲೋಕಸಭಾ ಕ್ಷೇತ್ರದ ಮತದಾರರಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ. “ವಯನಾಡ್ ಲೋಕಸಭಾ ಕ್ಷೇತ್ರವು ನನ್ನ ಪಾಲಿಗೆ ಆಶ್ರಯ ತಾಣ, ಮನೆ ಹಾಗೂ ಕುಟುಂಬವಾಗಿತ್ತು” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಹಿಂದಿನ ಲೋಕಸಭೆಯಲ್ಲಿ ವಯನಾಡ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದು ನನ್ನ ಪಾಲಿಗೆ ಸಂತಸ ಮತ್ತು ಗೌರವದ ಅವಧಿಯಾಗಿತ್ತು ಎಂದು ಹೇಳಿಕೊಂಡಿರುವ ಅವರು, ಜೂನ್ 17ರಂದು ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿ, ರಾಯ್ ಬರೇಲಿ ಲೋಕಸಭಾ ಕ್ಷೇತ್ರವನ್ನು ಉಳಿಸಿಕೊಂಡಾಗ ನನ್ನ ಕಣ್ಣಿನಲ್ಲಿ ಬೇಸರ ಮನೆ ಮಾಡಿತ್ತು ಎಂದು ಹೇಳಿಕೊಂಡಿದ್ದಾರೆ.

ವಯನಾಡ್ ನ ಸಹೋದರಿ ಮತ್ತು ಸಹೋದರಿಯರೊಂದಿಗಿನ ಪ್ರಥಮ ಸಭೆಯನ್ನು ಸ್ಮರಿಸಿಕೊಂಡಿರುವ ರಾಹುಲ್ ಗಾಂಧಿ, 2019ರ ಚುನಾವಣೆಯಲ್ಲಿ ನಾನು ಅವರ ಬೆಂಬಲವನ್ನು ಕೋರಿ ವಯನಾಡ್ ಗೆ ಬಂದಿದ್ದೆ ಎಂದು ಹೇಳಿಕೊಂಡಿದ್ದಾರೆ.

“ನಾನು ನಿಮಗೆ ಅಪರಿಚಿತನಾಗಿದ್ದೆ. ಹೀಗಿದ್ದೂ ನೀವು ನನ್ನನ್ನು ನಂಬಿದಿರಿ. ನೀವು ನನಗೆ ಬೆಲೆ ಕಟ್ಟಲಾಗದ ಪ್ರೀತಿ ಮತ್ತು ಅಕ್ಕರೆಯನ್ನು ತೋರಿದಿರಿ. ನೀವು ಯಾವ ರಾಜಕೀಯ ಪಕ್ಷವನ್ನು ಬೆಂಬಲಿಸುತ್ತೀರಿ, ನೀವು ಯಾವ ಸಮುದಾಯಕ್ಕೆ ಸೇರಿದವರಾಗಿದ್ದಿರಿ, ನೀವು ಯಾವ ಧರ್ಮದಲ್ಲಿ ವಿಶ್ವಾಸ ಹೊಂದಿದ್ದಿರಿ ಅಥವಾ ನೀವು ಯಾವ ಭಾಷೆಯನ್ನು ಮಾತನಾಡುತ್ತೀರಿ ಎಂಬುದು ಈ ಸಂದರ್ಭದಲ್ಲಿ ವಿಷಯವೇ ಆಗಿರಲಿಲ್ಲ” ಎಂದು ರಾಹುಲ್ ಬರೆದುಕೊಂಡಿದ್ದಾರೆ.

“ನಾನು ಪ್ರತಿ ದಿನವೂ ಬೈಗುಳಗಳನ್ನು ಕೇಳತೊಡಗಿದಾಗ, ನಿಮ್ಮ ಬೇಷರತ್ ಪ್ರೀತಿ ನನ್ನನ್ನು ರಕ್ಷಿಸಿತು. ನೀವು ನನ್ನ ಆಶ್ರಯದಾತರು, ನೀವು ನನ್ನ ಮನೆ ಹಾಗೂ ನೀವು ನನ್ನ ಕುಟುಂಬ. ನೀವು ನನ್ನನ್ನು ಸಂಶಯಿಸುತ್ತೀರಿ ಎಂದು ನನಗೆ ಒಂದು ಕ್ಷಣವೂ ಅನಿಸಲಿಲ್ಲ” ಎಂದು ಅವರು ಹೇಳಿದ್ದಾರೆ.

ಕೇರಳದಲ್ಲಿನ ಪ್ರವಾಹವನ್ನೂ ನೆನಪಿಸಿಕೊಂಡಿರುವ ರಾಹುಲ್ ಗಾಂಧಿ, ಈ ಪ್ರವಾಹದಲ್ಲಿ ಜೀವ, ಆಸ್ತಿ, ಸ್ನೇಹಿತರು ಎಲ್ಲರೂ ಕಳೆದು ಹೋದರೂ, ನೀವು ಮಾತ್ರವಲ್ಲ, ಸಣ್ಣ ಮಗು ಕೂಡಾ ತನ್ನ ಘನತೆಯನ್ನು ಕಳೆದುಕೊಳ್ಳಲಿಲ್ಲ ಎಂದು ಸ್ಮರಿಸಿದ್ದಾರೆ.

“ನೀವು ನನಗೆ ನೀಡಿದ ಲೆಕ್ಕವಿಲ್ಲದಷ್ಟು ಹೂವು ಮತ್ತು ಆಲಿಂಗನವನ್ನು ನೆನಪಿಟ್ಟುಕೊಳ್ಳುತ್ತೇನೆ. ಪ್ರತಿಯೊಬ್ಬರೂ ಅಂತಹ ನೈಜ ಪ್ರೀತಿ ಮತ್ತು ಅಕ್ಕರೆಯನ್ನು ನೀಡಿದಿರಿ. ಸಾವಿರಾರು ಜನರ ಮುಂದೆ ನನ್ನ ಭಾಷಣವನ್ನು ತರ್ಜುಮೆ ಮಾಡಿದ ಧೈರ್ಯವಂತ, ಸುಂದರ ಮತ್ತು ಆತ್ಮವಿಶ್ವಾಸದ ಯುವತಿಯರನ್ನು ನಾನು ಹೇಗೆ ಮರೆಯಲಿ? ಸಂಸತ್ತಿನಲ್ಲಿ ನಿಮ್ಮ ಧ್ವನಿಯಾಗಿದ್ದು ನನ್ನ ಪಾಲಿಗೆ ನಿಜಕ್ಕೂ ಸಂತಸ ಮತ್ತು ಗೌರವವಾಗಿತ್ತು” ಎಂದು ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ನಾನು ವಯನಾಡ್ ತೊರೆಯುತ್ತಿರುವುದಕ್ಕೆ ಬೇಸರವಾಗಿದ್ದರೂ, ನನ್ನ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ನಿಮ್ಮನ್ನು ಪ್ರತಿನಿಧಿಸಲು ಇರಲಿದ್ದಾಳೆ ಎಂಬ ಕಾರಣಕ್ಕೆ ಸಮಾಧಾನಗೊಂಡಿದ್ದೇನೆ. ನೀವೇನಾದರೂ ಆಕೆಗೆ ಅವಕಾಶ ನೀಡಲು ನಿರ್ಧರಿಸಿದರೆ, ಖಂಡಿತ ಆಕೆ ನಿಮ್ಮ ಸಂಸದೆಯಾಗಿ ಅತ್ಯುತ್ತಮ ಕೆಲಸ ಮಾಡಲಿದ್ದಾಳೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

“ರಾಯ್ ಬರೇಲಿಯ ಜನರಲ್ಲಿ ನನ್ನ ಪ್ರೀತಿಪಾತ್ರ ಕುಟುಂಬವಿರುವುದರಿಂದ ಹಾಗೂ ನಾನು ಅವರೊಂದಿಗೆ ಆಳವಾದ ಸಂಬಂಧ ಹೊಂದಿರುವ ಕಾರಣಕ್ಕೂ ನಾನು ಸಮಾಧಾನಗೊಂಡಿದ್ದೇನೆ. ದೇಶದಲ್ಲಿ ಹರಡುತ್ತಿರುವ ದ್ವೇಷ ಮತ್ತು ಹಿಂಸಾಚಾರವನ್ನು ಮಣಿಸುವುದು ನೀವು ಮತ್ತು ರಾಯ್ ಬರೇಲಿ ಜನರೆಡೆಗಿನ ನನ್ನ ಪ್ರಮುಖ ಬದ್ಧತೆಯಾಗಿದೆ” ಎಂದು ಅವರು ವಾಗ್ದಾನ ನೀಡಿದ್ದಾರೆ.


Spread the love

Exit mobile version