ನನ್ನ ಬಗ್ಗೆ ಟೀಕೆ ಮಾಡುವ ಶಾಸಕರು ಅವರ 10 ತಿಂಗಳ ಸಾಧನೆ ತಿಳಿಸಲಿ – ಜೆ ಆರ್ ಲೋಬೊ
ಮಂಗಳೂರು: ನನ್ನ ಬಗ್ಗೆ ಟೀಕೆ ಮಾಡುವ ಮಂಗಳೂರು ಶಾಸಕರು ಮೊದಲು ತನ್ನ 10 ತಿಂಗಳ ಅವಧಿಯಲ್ಲಿ ತನ್ನ ಕ್ಷೇತ್ರಕ್ಕೆ ನೀಡಿದ ಕೊಡುಗೆ ಏನು ಎನ್ನುವುದನ್ನು ಮೊದಲು ಬಹಿರಂಗಪಡಿಸಲಿ ಎಂದು ಮಾಜಿ ಶಾಸಕ ಜೆ ಆರ್ ಲೋಬೊ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಆಯೋಜಿಸಿದ ಸುದ್ದಿಗೋಷ್ಠೀಯಲ್ಲಿ ಮಾತನಾಡಿದ ಲೋಬೊ, ಜಿಪಂ ಸಾಮಾನ್ಯ ಸಭೆಯಲ್ಲಿ ಶಕ್ತಿನಗರ ಮನೆ ನಿವೇಶನ ಯೋಜನೆಯು ಸಂಪೂರ್ಣವಾಗದೆ ಇರಲು ಮಾಜಿ ಶಾಸಕರೇ ಕಾರಣ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರು ಹೇಳಿದ್ದಾರೆ. ಅಲ್ಲದೆ ನನ್ನ ವಿರುದ್ದ ಅನಾವಶ್ಯಕವಾದ ಸುಳ್ಳು ಆರೋಪಗಳನ್ನು ಅವರು ಹಾಕಿದ್ದಾರೆ. ನನ್ನ ವೈಫಲ್ಯ ಮಾತನಾಡುವ ಶಾಸಕರು ತಾವು ಶಾಸಕರಾಗಿ ಹತ್ತು ತಿಂಗಳಾಗಿವೆ ಏನು ಮಾಡುತ್ತಿದ್ದರು? ಅವರು ಯಾಕೆ ಯೋಜನೆಯನ್ನು ಮುಗಿಸುವದರ ಕುರಿತು ಚಿಂತಿಸುತ್ತಿಲ್ಲ. ಈ ಯೋಜನೆ ಪೂರ್ಣಗೊಂಡರೆ ಸುಮಾರು 930 ಬಡವರಿಗೆ ಅವರಿಗೆ ಅವಕಾಶ ಸಿಗಲಿದೆ. ಕೇವಲ ನನ್ನನ್ನು ಟಿಕೀಸುವ ಬದಲು ಯೋಜನೆಯನ್ನು ಪೂರ್ಣಗಳಿಸುವ ಕೆಲಸ ಶಾಸಕರು ಮಾಡಲಿ ಎಂದರು.
ನಾನು ಯೋಜನೆಯ ತಯಾರಿಯನ್ನು ಪೂರ್ಣಗೊಳಿಸಲು ಅಂದರೆ ಸ್ಥಳ ಗುರುತಿಸುವಿಕೆ, ಅರ್ಜಿ ಸ್ವೀಕಾರ, ಅರಣ್ಯ ಇಲಾಖೆಯ ಪರವಾನಿಗೆ, ಹಾಗೂ ಇನ್ನಿತರ ವಿಚಾರಗಳಿಗೆ ಸುಮಾರು 3 ವರ್ಷ ತೆಗೆದುಕೊಳ್ಳಬೇಕಾಯಿತು. ಯೋಜನೆಗೆ 61.50 ಕೋಟಿ ರೂ ವೆಚ್ಚವಾಗಲಿದ್ದು ಅದರಲ್ಲಿ 5.58 ಕೋಟಿ ರೂ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಬಿಡುಗಡೆ ಮಾಡಲಾಗಿದೆ. ತಾನು ತನ್ನ ಅವಧಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಬಡವರಿಗೆ ಮನೆ ಲಭಿಸುವತ್ತ ಪ್ರಯತ್ನ ಮಾಡಿದ್ದೇನೆ. ಐ ಪ್ಲಸ್ 3 ಯೋಜನೆಗೆ ಎಲ್ಲಾ ರೀತಿಯಲ್ಲೂ ಶ್ರಮವಹಿಸಿ ಕೆಲಸ ಮಾಡಿದ ನನ್ನ ಬಗ್ಗೆ ಸುಳ್ಳು ಆರೋಪಗಳನ್ನು ಮಾಡುತ್ತಿರುವ ಶಾಸಕರು ಈ ಯೋಜನೆಯನ್ನು ಪೂರ್ಣಗೊಳಿಸಬೇಕು ಇಲ್ಲದಿದ್ದರೆ ರಾಜೀನಾಮೆ ನೀಡಲಿ ಎಂದರು.
ಕುಡ್ಸೆಂಪ್ ಯೋಜನೆಯಲ್ಲಿ ನಾನು ಹಗರಣ ಮಾಡಿದ್ದೇಣೆ ಎಂದು ಶಾಸಕ ವೇದವ್ಯಾಸ ಕಾಮತ್ ಆರೋಪಿಸುತ್ತಿದ್ದಾರೆ. ಅವರು ಶಾಸಕರು ಎಂದು ನಾನು ಸುಮ್ಮನಿದ್ದೇನೆ, ಇಲ್ಲವಾದಲ್ಲಿ ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತಿದ್ದೆ. ಯೋಜನೆ ಕುರಿತಂತೆ ಸಂಶಯ ಇದ್ದರೆ ಕೇಳಿದರೆ ಎಲ್ಲಾ ದಾಖಲೆ ಸಲ್ಲಿಸುವೆ ಎಂದು ಹೇಳಿದರು.