ನನ್ನ ಸರ್ಕಾರದಲ್ಲಿ ಯಾವ ಭ್ರಷ್ಟಾಚಾರವೂ ನಡೆದಿಲ್ಲ ; ಮುಖ್ಯಮಂತ್ರಿ ಸಿದ್ದರಾಮಯ್ಯ
ಮಂಗಳೂರು: ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರದ ಆರೋಪದಡಿ ಹತ್ತಾರು ಎಫ್ಐಆರ್ ದಾಖಲಾಗಿವೆ. ನನ್ನ ವಿರುದ್ಧ ಎಲ್ಲಿ ಎಫ್ಐಆರ್ ದಾಖಲಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಖಾಸಗಿ ಭೇಟಿಗಾಗಿ ಭಾನುವಾರ ಸಂಜೆ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಬಳಿಕ ಪತ್ರಕರ್ತರ ಜೊತೆ ಅವರು ಮಾತನಾಡಿದರು.
ಸಿದ್ದರಾಮಯ್ಯ ಅವರ ಭ್ರಷ್ಟಾಚಾರದ ದಾಖಲೆಗಳನ್ನು ವಿಧಾನಮಂಡಲದಲ್ಲಿ ಬಿಜೆಪಿ ಬಹಿರಂಗಪಡಿಸುವುದಾಗಿ ಯಡಿಯೂರಪ್ಪ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ ಭ್ರಷ್ಟಾಚಾರ ಆರೋಪದಲ್ಲಿ ಜೈಲಿಗೆ ಹೋಗಿ ಬಂದವರು ಅವರು. ನನ್ನ ಸರ್ಕಾರದಲ್ಲಿ ಯಾವ ಭ್ರಷ್ಟಾಚಾರವೂ ನಡೆದಿಲ್ಲ. ಅವರು ತನ್ನ ವಿರುದ್ಧ ಬಾಕಿ ಇರುವ ಎಫ್ಐಆರ್‌ಗಳ ಬಗ್ಗೆ ಯೋಚನೆ ಮಾಡಲಿ’ ಎಂದರು.
ರಾಜ್ಯದಲ್ಲಿ ಎಸಿಬಿ, ಲೊಕಾಯುಕ್ತ ಎರಡೂ ಇವೆ. ಅವು ತಮ್ಮ ಕೆಲಸ ಮಾಡುತ್ತಿವೆ. ನಾನು ಭ್ರಷ್ಟಾಚಾರ ಮಾಡಿಲ್ಲ. ಸಾಕ್ಷ್ಯಗಳೂ ಇಲ್ಲ. ಆದ್ದರಿಂದ ಯಾವ ಪ್ರಕರಣವೂ ದಾಖಲಾಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮುಖ್ಯಮಂತ್ರಿ ಪಿಎಫ್ಐ ಸಂಘಟನೆಗೆ ಬೆಂಬಲ ನೀಡುತ್ತಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ ಹಿಂದೂ ಇರಲಿ, ಅಥವಾ ಮುಸ್ಲಿಂ ಇರಲಿ. ಯಾವುದೇ ಕೋಮುವಾದಿ ಸಂಘಟನೆಗಳಿಗೆ ನಾವು ಬೆಂಬಲ ನೀಡುವುದಿಲ್ಲ. ನಾವು ಕೋಮುವಾದಿಗಳ ವಿರುದ್ಧ ಇದ್ದೇವೆ’ ಎಂದರು.