ನಮೂನೆ 9 ಮತ್ತು 11ಎ ದಾಖಲೆಗಳನ್ನು ಪಡೆಯುವ ಸಮಸ್ಯೆಗೆ ಭಾಗಶಃ ಪರಿಹಾರ – ಪ್ರಮೋದ್ ಮಧ್ವರಾಜ್
ಉಡುಪಿ: ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಪರಿವರ್ತಿತ ಆಸ್ತಿಗಳಿಗೆ ಸಂಭಂಧಿಸಿದಂತೆ ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ 9 ಮತ್ತು 11 ಎ ಗಳನ್ನು ವಿತರಿಸುವುದರಲ್ಲಿ ಇರುವ ಸಮಸ್ಯೆಯು ಭಾಗಶಃವಾಗಿ ಪರಿಹಾರವಾಗಿದೆ.
ದಿನಾಂಕ 09-01-2017 ರಂದು ಸರಕಾರದ ಪ್ರಧಾನ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರು ಹೊರಡಿಸಿರುವ ಸುತ್ತೋಲೆಯಂತೆ ದಿನಾಂಕ 21-12-2016ರಿಂದ ಕಾವೇರಿ ತಂತ್ರಾಂಶ ಮತ್ತು ಇ-ಸ್ವತ್ತು ತಂತ್ರಾಂಶವು ಮತ್ತೊಮ್ಮೆ ಸಂಯೋಜನೆಗೊಳಿಸಿರುವುದರಿಂದ ನಂತರ ನೋಂದಾಯಿಸಿದ ದಸ್ತಾವೇಜುಗಳಿಗೆ ನಮೂನೆ 9 ಮತ್ತು 11ಎಗಳನ್ನು ತ್ವರಿತವಾಗಿ ವಿತರಿಸಲು ಸಾಧ್ಯವಾಗುತ್ತದೆ.
ಅದಲ್ಲದೆ ಕಾವೇರಿ ತಂತ್ರಾಂಶ ಮತ್ತು ಇ-ಸ್ವತ್ತು ತಂತ್ರಾಂಶವು ಡಿ ಲಿಂಕ್ ಆದಾಗಿನಿಂದ ಮತ್ತು ಲಿಂಕ್ ಆಗಿರುವ ಮಧ್ಯೆ ನೋಂದಾಣಿಯಾದ ಆಸ್ತಿಗಳಿಗೆ ನಮೂನೆ 9, 11ಎ ಮತ್ತು 11ಬಿ ನೀಡುವ ಬಗ್ಗೆ ಕೂಡಾ ಕ್ರಮ ಕೈಗೊಳ್ಳಲಾಗಿದ್ದು ಈ ಸಮಯದಲ್ಲಿ ನೋಂದಾವಣಿಯಾದ ಆಸ್ತಿಯ ಮಾಲಿಕರು ಸಂಬಂಧಪಟ್ಟ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಲ್ಲಿ ಸೂಕ್ತ ದಾಖಲೆಗಳನ್ನು ನೀಡಿ ನಮೂನೆ 9, 11ಎ ಅಥವಾ 11ಬಿ ಯನ್ನು ಪಡೆಯುವಂತೆ ಸೂಚಿಸಲಾಗಿದೆ. ಬಾಕಿ ಇರುವ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಸರ್ಕಾರವು ಗಂಭೀರವಾಗಿ ಪರಿಶೀಲಿಸುತ್ತಿದ್ದು, ಶೀಘ್ರದಲ್ಲಿಯೇ ಸಮಸ್ಯೆಗಳು ಬಗೆಹರಿಯಲಿದೆಯೆಂದು ಮನಗಾಣಲಾಗಿದೆ ಎಂದು ಮೀನುಗಾರಿಕೆ ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಪ್ರಮೋದ್ ಮಧ್ವರಾಜ್ ರವರು ಹೇಳಿಕೆಯಲ್ಲಿ ತಿಳಿಸಿರುತ್ತಾರೆ.