ನಮ್ಮದು ನುಡಿದಂತೆ ನಡೆಯುವ ಸರಕಾರ- ಬಂಟ್ವಾಳ 252 ಕೋಟಿ ಕಾಮಗಾರಿ ಲೋಕಾರ್ಪಣೆ ಮಾಡಿದ ಸಿದ್ದರಾಮಯ್ಯ

Spread the love

ನಮ್ಮದು ನುಡಿದಂತೆ ನಡೆಯುವ ಸರಕಾರ- ಬಂಟ್ವಾಳ 252 ಕೋಟಿ ಕಾಮಗಾರಿ ಲೋಕಾರ್ಪಣೆ ಮಾಡಿದ ಸಿದ್ದರಾಮಯ್ಯ

ಮಂಗಳೂರು: ದೇಶದಲ್ಲಿ ಪ್ರಧಾನಿ ಮೋದಿ ಮನ್ ಕೀ ಬಾತ್ ಹೇಳುತ್ತಾ ಬರಿ ಮಾತಿನಲ್ಲಿ ಸಮಯ ಕಳೆಯುತ್ತಾರೆ. ಅದು ಈಗ ಅವರಿಗೆ ತಿರುಗು ಬಾಣವಾಗಿದೆ. ಆದರೆ ರಾಜ್ಯ ಸರಕಾರ ಪಕ್ಷದ ನೇತೃತ್ವದ ಚುನಾವಣೆಯ ಸಂದರ್ಭದಲ್ಲಿ ನೀಡಿರುವ 165 ಭರವಸೆಗಳಲ್ಲಿ 155 ನ್ನು ಈಗಾಗಲೇ ಈಡೇರಿಸಿದ್ದೇವೆ. ಅಲ್ಲದೆ ಪ್ರಣಾಳಿಕೆಯಲ್ಲಿ ಹೇಳದೆ ಇದ್ದ ಕೆಲಸವನ್ನು ಮಾಡಿ ತೋರಿಸಿದ್ದೇವೆ. ನಮ್ಮದು ಸುಳ್ಳು ಹೇಳುವ ಮನ್ ಕೀ ಬಾತ್ ಅಲ್ಲ ಆದರೆ ಕಾಮ್ ಕೀ ಬಾತ್ ಸರಕಾರ್ ನುಡಿದಂತೆ ನಡೆಯುವ ಸರಕಾರ. ನಾವು ಜನರ ಕೆಲಸ ಮಾಡಿ ತೋರಿಸುತ್ತಿದ್ದೇವೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ನೀಡಿದ್ದ ಭರವಸೆಯಲ್ಲಿ ಶೇ 25ರಷ್ಟು ಮಾತ್ರ ಈಡೇರಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಅವರು ಭಾನುವಾರ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ 252 ಕೋಟಿ ರೂ. ವೆಚ್ಚದ ವಿವಿಧ ಇಲಾಖೆಗಳ ವತಿಯಿಂದ ಅಭಿವೃದ್ಧಿಪಡಿಸಲಾದ ಕಾಮಗಾರಿಗಳನ್ನು ಉದ್ಘಾಟಿಸಿ ವಿವಿಧ ನೂತನ ಯೋಜನೆಗಳ ಶಿಲನ್ಯಾಸ ಕಾರ್ಯಕ್ರಮಗಳನ್ನು ನೆರವೇರಿಸ ಮಾತನಾಡುತ್ತಿದ್ದರು.

ಇಂದು ಬಂಟ್ವಾಳದಲ್ಲಿ ಕೋಟಿ ರೂ. ವೆಚ್ಚದ ವಿವಿಧ ಇಲಾಖೆಗಳ ವತಿಯಿಂದ ಅಭಿವೃದ್ಧಿಪಡಿಸಲಾದ ಕಾಮಗಾರಿಗಳನ್ನು ಉದ್ಘಾಟಿಸಿ ವಿವಿಧ ನೂತನ ಯೋಜನೆಗಳ ಶಿಲನ್ಯಾಸ ಕಾರ್ಯಕ್ರಮಗಳನ್ನು ನೆರವೇರಿಸಲಾಗಿದೆ. ಈ ಎಲ್ಲಾ ಅಭಿವೃದ್ದಿ ಕಾಮಗಾರಿಗಳ ಹಿಂದೆ ಜಿಲ್ಲಾ ಉಸ್ತುವಾರಿ ರಮಾನಾಥ ರೈ ಅವರಾಗಿದ್ದಾರೆ.  ಮಾನವೀಯತೆಗೆ  ಇನ್ನೊಂದು ಹೆಸರಿದ್ದರೆ ಅದು ಅವರು ರಮಾನಾಥ ರೈ ಎಂದ ಸಿದ್ದರಾಮಯ್ಯ ರೈ ಅವರು ಸದಾ ತನ್ನ ಕೈಗಳನ್ನು ಭ್ರಷ್ಠಾಚಾರ ಮಾಡದೆ ಶುದ್ದವಾಗಿರಿಸಿಕೊಂಡಿದ್ದಾರೆ. ಇಂತಹ ಒರ್ವ ಜಾತ್ಯಾತೀತ ನಿಲುವಿನ ನಾಯಕನ್ನು ಪಡೆದಿರುವ ಬಂಟ್ವಾಳ ಕ್ಷೇತ್ರ ನಿಜಕ್ಕೂ ಧನ್ಯವಾಗಿದೆ, ಪ್ರತಿಯೊಬ್ಬರನ್ನು ಸಮಾನವಾಗಿ ಕಾಣುವ ವಿಶೇಷ ವ್ಯಕ್ತಿತ್ವ ರೈ ಅವರದ್ದು. ಹಲವಾರು ವಿರೋಧ ಪಕ್ಷದವರು ರೈ ಅವರನ್ನು ಟೀಕಿಸುತ್ತಾರೆ ಆದರೆ ಅವರು ಎಂದೂ ಕೂಡ ಜಾತಿ ರಾಜಕಾರಣದಲ್ಲಿ ತೊಡಗಿದವರಲ್ಲ ಮುಂದೆಯೂ ಅಂತಹ ವಿಚಾರಗಳಲ್ಲಿ ಕೈ ಹಾಕುವವರಲ್ಲ ಆದರೆ ಕೆಲವರು ತಮ್ಮ ರಾಜಕೀಯ ಲಾಭಕ್ಕಾಗಿ ಕೋಮು ಘರ್ಷಣೆಗಳನ್ನು ಉಂಟು ಮಾಡುವ ಕೆಲಸದಲ್ಲಿ ಮಗ್ನರಾಗಿದ್ದಾರೆ. ರಮಾನಾಥ ರೈ ಒರ್ವ ಮಾದರಿ ರಾಜಕಾರಿಣಿಯಾಗಿದ್ದು ಸದಾ ಸಂವಿಧಾನವನ್ನು ಗೌರವಿಸುವವರಾಗಿದ್ದಾರೆ. ರೈ ಯಾವಾಗಲೂ ಹೆಚ್ಚು ಮಾತನಾಡುವವರಲ್ಲ ಆದರೆ ಒಂದು ವೇಳೆ ಅವರು ಮಾತನಾಡಲು ಆರಂಭಿಸಿದರೆ ವಿರೋಧಿಗಳು ಬೆವರುತ್ತಾರೆ. ವಿಧಾನಸೌಧದಲ್ಲಿ ರೈ ಗುಡುಗಿದರೆ ಕೋಮುವಾದಿಗಳು ಮಾತೇ ಆಡುವುದಿಲ್ಲ. ಅದೇ ರೀತಿ ಅಭಯಚಂದ್ರ ಜೈನ್ ಕೂಡ ಕೋಮುವಾದಿಗಳ ಬಾಯಿ ಮುಚ್ಚಿಸುವಲ್ಲಿ ನಿಸ್ಸೀಮರು ಎಂದರು.

ಸಿದ್ದರಾಮಯ್ಯ ಮುಂದುವರೆದು ಮಾತನಾಡಿ ಕೋಮುವಾದಿಗಳು ದಕ್ಷಿಣ ಕನ್ನಡ ಜಿಲ್ಲೆಯನ್ನು ತಮ್ಮ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡಿದ್ದಾರೆ. 2013 ರಲ್ಲಿ ನಾವು ಉಳ್ಳಾಲದಿಂದ ಉಡುಪಿಯ ತನಕ ಕೋಮುಸೌಹಾರ್ದತೆ, ಶಾಂತಿ ಸಹಬಾಳ್ವೆಯನ್ನು ಬೆಳೆಸುವ ನಿಟ್ಟಿನಲ್ಲಿ ಪಾದಯಾತ್ರೆಯನ್ನು ನಡೆಸಿದ್ದೇವು.  ದಕ್ಷಿಣಕನ್ನಡದ ಜನತೆ ನಮ್ಮ ಪಾದಯಾತ್ರೆಯನ್ನು ಮುಕ್ತ ಮನಸ್ಸಿನಿಂದ ಬೆಂಬಲಿಸದ್ದರ ಪರಿಣಾಮ 8 ವಿಧಾನಸಭಾ ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರು. ದಕ್ಷಿಣ ಕನ್ನಡದ ಜನತೆ ಸೌಹಾರ್ದತೆಯಲ್ಲಿ ನಂಬಿಕೆ ಇರಿಸಿದ್ದು, ಕೋಮುವಾದಿಗಳು ತಮ್ಮ ಪ್ರಯತ್ನದಲ್ಲಿ ಎಂದಿಗೂ ಕೂಡ ಸಫಲರಾಗುವುದಿಲ್ಲ ಎಂದರು.

2018 ರ ಚುನಾವಣೆಯಲ್ಲಿ ದಕ್ಷಿಣಕನ್ನಡದ 8 ಕ್ಷೇತ್ರಗಳನ್ನು ಕಾಂಗ್ರೆಸ್ ಗೆಲ್ಲುವ ವಿಶ್ವಾಸವಿದೆ. ಬಿ.ಎಸ್.ಯಡ್ಯೂರಪ್ಪ ಮಿಶನ್ 150 ಕುರಿತು ಮಾತನಾಡುತ್ತಾರೆ ಆದರೆ ಅದು ಈಗ ಅವರ ಮಿಶನ್ 50 ಕ್ಕೆ ಇಳಿದಿದೆ. 50 ಸೀಟುಗಳನ್ನು ಗೆಲ್ಲಲು ಯಡ್ಯೂರಪ್ಪ ಹಾಗೂ ಬಿಜೆಪಿ ಪಕ್ಷ ಜನರಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನ ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂದು ಬಿಜೆಪಿಯವರು ಹೇಳಿಕೊಂಡು ತಿರುಗುತ್ತಿದ್ದಾರೆ ಆದರೆ ಯಾರು ಜಾತ್ಯಾತೀತೆಯಲ್ಲಿ ನಂಬಿಕೆ ಇರಿಸಿದ್ದಾರೆ ಅಂತಹ ಜನತೆ ಕೋಮುವಾದಿ ಪಕ್ಷವನ್ನು ಬೆಂಬಲಿಸದಂತೆ ಸಿದ್ದರಾಮಯ್ಯ ಮನವಿ ಮಾಡಿಕೊಂಡರು. ದಕ್ಷಿಣ ಕನ್ನಡ ಜಿಲ್ಲೆಯ ಜನರು ಬುದ್ದಿವಂತರಾಗಿದ್ದಾರೆ ಆದ್ದರಿಂದ ಅವರು ಮತ ಚಲಾಯಿಸುವ ಮೊದಲು ಚಿಂತಿಸಿ ಮತಚಲಾಯಿಸಬೇಕು ಎಂದರು.

ಬಂಟ್ವಾಳದ ಚರಿತ್ರೆಯಲ್ಲಿ ಇಂದು ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನವಾಗಿದೆ. ಇಂದು ಒಟ್ಟು ತಾಲೂಕಿನ 252 ಕೋಟಿ ರೂ. ವೆಚ್ಚದ ವಿವಿಧ ಇಲಾಖೆಗಳ ವತಿಯಿಂದ ಅಭಿವೃದ್ಧಿಪಡಿಸಲಾದ ಕಾಮಗಾರಿಗಳನ್ನು ಉದ್ಘಾಟಿಸಿ ವಿವಿಧ ನೂತನ ಯೋಜನೆಗಳ ಶಿಲನ್ಯಾಸ ಕಾರ್ಯಕ್ರಮಗಳನ್ನು ನೆರವೇರಿಸಲಾಗಿದೆ. ಅಲ್ಲದೆ ಕಳೆದ 4.5 ವರ್ಷದ ಅವಧಿಯಲ್ಲಿ ಸುಮಾರು 1000 ರೂ. ಕೋಟಿಯ ಅಭಿವೃದ್ದಿಯ ಕಾಮಗಾರಿಗಳನ್ನು ಜಿಲ್ಲೆಯಲ್ಲಿ ಕೈಗೊಳ್ಳಲಾಗಿದೆ. ಇತರ ಜಿಲ್ಲೆಗಳಲ್ಲಿ ಕೂಡ ಹಲವಾರು ರೀತಿಯ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದ ಸಿದ್ದರಾಮಯ್ಯ, ಕಾಂಗ್ರೆಸ್ ಸರಕಾರ 2013 ರಚುನಾವಣೆಯ ಸಂದರ್ಭದಲ್ಲಿ 165 ಭರವಸೆಗಳನ್ನು ನೀಡಿದ್ದ ಅದರಲ್ಲಿ 158 ಪೋರೈಸಲಾಗಿದೆ. ಆದರೆ ನಾವು ಇಂದಿರಾ ಕ್ಯಾಂಟಿನ್, ಅನಿಲ ಭಾಗ್ಯ, ರೈತರ ಸಾಲ ಮನ್ನಾ ಹಾಗೂ ಮಾತೃಪೂರ್ಣ ಯೋಜನೆಯ ಭರವಸೆಯನ್ನು ನೀಡಿಲ್ಲ ಆದರೂ ಅದನ್ನು ನಾವು ಈಡೇರಿಸಿದ್ದೇವೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ನೀಡಿದ್ದ ಭರವಸೆಯಲ್ಲಿ ಶೇ 25ರಷ್ಟು ಮಾತ್ರ ಈಡೇರಿಸಿದ್ದಾರೆ. ಯಡ್ಯೂರಪ್ಪ ತಾನು ಸೀರೆ, ಸೈಕಲ್ ವಿತರಿಸಿ ಮತ್ತೆ ಜೈಲಿಗೆ ಹೋದರು. ಕಳೆದ 15 ದಿನಗಳಿಂದ ನನ್ನ ಮತ್ತು ಸಚಿವ ಡಿಕೆ ಶಿವಕುಮಾರ್ ಮೇಲೆ ಹಲವಾರು ರೀತಿಯ ಆರೋಪಗಳನ್ನು ಹೊರಿಸುತ್ತಿದ್ದಾರೆ ಆದರೆ ಅದೆಲ್ಲವೂ ಕೂಡ ಸುಳ್ಳು ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಯಾರಿಗಾದರೂ ಮರ್ಯಾದೆ ಇದ್ದರೆ ಅಂತಹ ರೀತಿಯ ಆರೋಪಗಳನ್ನು ಹೇಳಿಕೆಗಳನ್ನು ನೀಡುವುದಿಲ್ಲ. ಯಡ್ಯೂರಪ್ಪ ಅನಾಗರಿಕ ರೀತಿಯ ಹೇಳಿಕೆಯನ್ನು ನೀಡುತ್ತಿದ್ದು, ಅವರಿಗೆ ಅವರ ಮೇಲೆಯೇ ನಂಬಿಕೆ ಹೊರಟು ಹೋಗಿದ್ದು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಬಿಜೆಪಿ ಆಡಳಿತದ ಸಮಯದಲ್ಲಿ ಹಲವಾರು ಮಂತ್ರಿಗಳು ಜೈಲಿಗೆ ಹೋದರು, ಹಲವಾರು ಹಗರಣಗಳು ಬೆಳಕಿಗೆ ಬಂದವು ಆದರೆ ಯಾವುದೇ ರೀತಿಯ ಹಗರಣಗಳಿರದ ಸರಕಾರವಿದ್ದರೆ ಅದರ ಕಾಂಗ್ರೆಸ್ ಸರಕಾರವಾಗಿದೆ. ಬಿಜೆಪಿ ಸುಳ್ಳುಗಳನ್ನು ಹೇಳಿ ಜನರನ್ನು ಮರಳು ಮಾಡಲು ಸಾಧ್ಯವಿಲ್ಲ ಎಂದರು.

ಮೋದಿಯವರು ಅಚ್ಚೆ ದಿನ್ ತರುವುದಾಗಿ ಹೇಳಿದರು ಆದರೆ ಅಚ್ಚೆ ದಿನ್ ಬಂದಿರುವುದು ಅಂಬಾನಿ, ಅದಾನಿ, ಬಾಬಾ ರಾಮ್ ದೇವ್, ಹಾಗೂ ಅಮಿತ್ ಶಾ ಅವರ ಮಗನಿಗೆ ಮಾತ್ರ. ಆದರೆ ಬಡವರು ಮತ್ತು ಸಾಮಾನ್ಯ ಜನರಿಗೆ ಯಾವುದೇ ರೀತಿಯ ಅಚ್ಚೆ ದಿನ್ ಬಂದಿಲ್ಲ. ನಷ್ಟದಲ್ಲಿ ನಡೆಯುತ್ತಿದ್ದ ಅಮಿತ್ ಶಾರ ಮಗನ ಕಂಪೆನಿ ಮೂರು ವರ್ಷದೊಳಗೆ ರೂ 80 ಕೋಟಿ ಲಾಭವನ್ನು ಮಾಡಿಕೊಂಡಿದೆ ಈ ಬಗ್ಗೆ ಯಡ್ಯೂರಪ್ಪ ಯಾಕೆ ಮೌನಾಗಿದ್ದಾರೆ. ಮೋದಿ ಕಪ್ಪು ಹಣವನ್ನು ವಾಪಾಸು ತರುವುದಾಗಿ ಹೇಳಿದ್ದರು ಅಲ್ಲದೆ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಠೇವಣಿ ಇಡುವುದಾಗಿ ಕೂಡ ಆಶ್ವಾಸನೆ ನೀಡಿದ್ದರು ಆದರೆ ಇದುವರೆಗೆ ಅವರು ಈ ಕೆಲಸ ಮಾಡಿಲ್ಲ.

ಬಿಜೆಪಿ ಪಕ್ಷ ಎಂದಿಗೂ ಕೂಡ ಅಲ್ಪಸಂಖ್ಯಾತರಿಗೆ ಯಾವುದೆ ಹುದ್ದೆಗಳನ್ನು ನೀಡುವುದಿಲ್ಲ, ಅವರು ಸಬಕಾ ಸಾಥ್, ಸಬ್ ಕಾ ವಿಕಾಸ್ ಎನ್ನುತ್ತಾರೆ ಆದರೆ ಅವರು ಎಲ್ಲಿಯೂ ಅಲ್ಪಸಂಖ್ಯಾತರಿಗೆ ಶಾಸಕ, ಸಂಸದ ಸ್ಥಾನಕ್ಕೆ ಟಿಕೇಟ್ ನೀಡಿಲ್ಲ. ಬಿಜೆಪಿ ಪಕ್ಷ ಸಂಪೂರ್ಣ ಡೋಂಗಿ ಪಾರ್ಟಿಯಾಗಿದ್ದು, 2010ರಲ್ಲಿ ಯಡ್ಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡಲು ನಾನು ಕೇಳಿಕೊಂಡಾಗ ನನ್ನಲ್ಲಿ ನೋಟು ಮುದ್ರಣದ ಯಂತ್ರ ಇಲ್ಲ ಎಂದಿದ್ದರು. ಕಳೆದ ವರ್ಷ ನೋಟು ಅಮಾನ್ಯಿಕರಣ ಮಾಡಿದಾಗ ಮೋದಿಯವರು ಕಪ್ಪು ಹಣವನ್ನು ಹೊಂದಿದವರನ್ನು ನಿಯಂತ್ರಣಕ್ಕೆ ತರಲು ಹಾಗೂ ಭೃಷ್ಟಾಚಾರ ನಿಗ್ರಹಿಸಲು ಮಾಡಿರುವುದಾಗಿ ಹೇಳಿಕೊಂಡಿದ್ದಾರೆ ಆದರೆ ಅವರ ಪ್ರಯತ್ನದಲ್ಲಿ ಮೋದಿ ವಿಫಲಾಗಿದ್ದಾರೆ. ನಮ್ಮ ಸರಕಾರ ರೂ 8165 ಕೋಟಿ ರೈತರ ಸಾಲವನ್ನು ಮನ್ನಾ ಮಾಡಿ ನುಡಿದಂತೆ ನಡೆದಿದ್ದೇವೆ ಎಂದರು.

ಎಲ್ಲಾ ಸಮುದಾಯವನ್ನು ಜಾತಿಗಳನ್ನು ಜೊತೆಯಾಗಿ ಕೊಂಡೊಯ್ಯುವ ಪಕ್ಷವೊಂದಿದ್ದರೆ ಅದು ಕೇವಲ ಕಾಂಗ್ರೆಸ್ ಮಾತ್ರ. ಬಿಜೆಪಿ ನಾಯಕರು ದಲಿತರು ಮನೆಗಗಳಿಗೆ ಹೋಗಿ ಹೋಟೆಲಿನಿಂದ ತಂದ ಆಹಾರವನ್ನು ಸೇವಿಸಿ ದಲಿತರ ಮನೆಯಲ್ಲಿ ಹೋಗಿ ಊಟ ಮಾಡಿದ್ದೇವೆ ಎಂದು ಹೇಳಿಕೊಂಡರು. ಯಡ್ಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕೂಡ ದಲಿತರ ಮನೆಗೆ ಭೇಟಿ ನೀಡಿಲ್ಲ. ನಿಜವಾಗಿಯೂ ಯಡ್ಯರಪ್ಪ ಅವರಿಗೆ ದಲಿತರ ಉದ್ದಾರ ಮಾಡಬೇಕಿಂದರೆ ಅಂತರ್ ಜಾತಿ ಮದುವೆಗೆ ಪ್ರೋತ್ಸಾಹ ನೀಡಿ ಎಂದು ನಾನು ಕೇಳಿಕೊಂಡಿದ್ದೆ. ನಿಜವಾಗಿಯೂ ಜಾತಿವ್ಯವಸ್ಥೆಯನ್ನು ತೊರೆದು ಹಾಕಲು ಮನಸ್ಸಿದ್ದರೆ ಅಂತರ್ ಜಾತಿ ಮದುವೆಗೆ ಪ್ರೋತ್ಸಾಹ ನೀಡಲಿ ಎಂದರು.

ಕಾಂಗ್ರೆಸ್ ಸರಕಾರ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ರೂ 2500 ಕೋಟಿ ಅನುದಾನವನ್ನು ಮೀಸಲಿರಿಸಿದ್ದು, 10 ಲಕ್ಷ ಮಹಿಳೆಯರು ಮತ್ತು ಹುಡುಗಿಯರು ಪೌಷ್ಟಿಕಾಂಶಯುಕ್ತ ಆಹಾರವನ್ನು ಮಾತೃಪೂರ್ಣ ಯೋಜನೆಯ ಮೂಲಕ ಪಡೆಯುತ್ತಿದ್ದಾರೆ ಇಂತಹ ಯೋಜನೆ ದೇಶದಲ್ಲೇ ಪ್ರಥಮವಾಗಿ ಜಾರಿಗೆ ತಂದ ರಾಜ್ಯ ಕರ್ನಾಟಕವಾಗಿದೆ. ಬೆಂಗಳೂರಿನಲ್ಲಿ ಈಗಾಗಲೇ 200 ಇಂದಿರಾ ಕ್ಯಾಂಟಿನ್ ಗಳನ್ನು ಆರಂಭಿಸಲಾಗಿದ್ದು ಇಂತಹ ಇಂದಿರಾ ಕ್ಯಾಂಟಿನ್ ಗಳು ದಕ್ಷಿಣಕನ್ನಡದಲ್ಲೂ ಶೀಘ್ರವೆ ಆರಂಭವಾಗಲಿದೆ. ಕರ್ನಾಟಕವನ್ನು ಹಸಿವು ಮುಕ್ತರಾಜ್ಯವನ್ನಾಗಿ ಮಾಡಬೇಕೆನ್ನುವುದು ನಮ್ಮ ಸರ್ಕಾರದ ಉದ್ದೇಶವಾಗಿದ್ದು, ಅದಕ್ಕಾಗಿಯೇ ಅನ್ನಭಾಗ್ಯವನ್ನು ರಾಜ್ಯದಲ್ಲಿ ಜಾರಿಗೆ ತರಲಾಗಿದೆ. ಜನರು ಆಹಾರ, ಶಿಕ್ಷಣ ಹಾಗೂ ಉದ್ಯೋಗವನ್ನು ಪಡೆಯಬೇಕು ಎನ್ನುವ ಕನಸು ನಮ್ಮದು. ದ್ವಿತೀಯ ಪಿಯುಸಿ ಮುಗಿಸಿದ 1.86 ಲಕ್ಷ ವಿದ್ಯಾರ್ಥಿಗಳು ಉಚಿತ ಲ್ಯಾಪ್ ಟಾಪ್ ಪಡೆಯಲಿದ್ದಾರೆ. ಬಿಜೆಪಿ ಹೇಳಿಕೊಳ್ಳುವ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ಸ್ಲೋಗನ್ ಪ್ರಕಾರ ಯಾರ ವಿಕಾಸ ಆಗಿದೆ ಎನ್ನುವುದು ಜನರಿಗೆ ತಿಳಿದಿದೆ. ಜನರು ಕೋಮು ಘರ್ಷಣೆಗೆ ಬಲಿಯಾಗದಂತೆ ಮನವಿ ಮಾಡಿದ ಮುಖ್ಯಮಂತ್ರಿಗಳು ನಾವು ಪರಸ್ಪರ ಸೌಹಾರ್ದತೆಯಿಂದ ಬದುಕಬೇಕಾಗಿದೆ ಎಂದರು.

ಸಮಾಜದಲ್ಲಿ ಕೋಮು ಸೌಹಾರ್ದತೆ ಮತ್ತು ಸಹಬಾಳ್ವೆಯ ಜೀವನ ನಡೆಸಲು ಪ್ರತಿಯೊಬ್ಬರು ಕೈಜೋಡಿಸಬೇಕಾಗಿದ್ದು, ಕಾಂಗ್ರೆಸ್ ಪಕ್ಷ ಎಂದು ಕೋಮುವಾದಿಗಳೊಂದಿಗೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಕೋಮುವಾದವನ್ನು ನಿರ್ನಾಮ ಮಾಡುವುದೇ ನಮ್ಮ ಉದ್ದೇಶವಾಗಿದ್ದು, ಸೌಹಾರ್ದಯುತ, ಜಾತ್ಯಾತೀತ, ಹಸಿವು ಮುಕ್ತ ರಾಜ್ಯದ ಕನಸಿಗೆ ಕೈಜೋಡಿಸಿ ಎಂದು ಸಿದ್ದರಾಮಯ್ಯ ಮನವಿ ಮಾಡಿಕೊಂಡರು.

ಸಮಾರಂಭದಲ್ಲಿ ಲೋಕೋಪಯೋಗಿ ಸಚಿವ ಡಾ.ಎಚ್.ಸಿ ಮಹದೇವಪ್ಪ, ಆಹಾರ ಮತ್ತು ನಾಗರಿಕ ಪೋರೈಕೆ ಸಚಿವ ಯುಟಿ ಖಾದರ್, ಹಜ್ ಸಚಿವ ರೋಶನ್ ಬೇಗ್, ಪೌರಾಡಳಿತ ಸಚಿವ ಈಶ್ವರ ಖಂಡ್ರೆ, ಕಾನೂನು ಸಚಿವ ಟಿ.ಬಿ.ಜಯಚಂದ್ರ, ಯುವಜನ ಮತ್ತು ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್, ಕೆಎಸ್ಸಾರ್ಟಿಸಿ ನಿಗಮದ ಅಧ್ಯಕ್ಷ ಗೋಪಾಲ ಪೂಜಾರಿ, ದಕ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಶಾಸಕರಾದ ಜೆ ಆರ್ ಲೋಬೊ, ಮಾಜಿ ಸಚಿವ ಅಭಯಚಂದ್ರ ಜೈನ್, ಮುಖ್ಯ ಸಚೇತಕ ಐವನ್ ಡಿಸೋಜಾ, ಶಾಸಕ ಮೊಯ್ದಿನ್ ಭಾವಾ ಹಾಗೂ ಇತರರು ಉಪಸ್ಥಿತರಿದ್ದರು.


Spread the love