Home Mangalorean News Kannada News ನಮ್ಮ ಗ್ಯಾರಂಟಿಗಳಿಗೆ ಐದು ವರ್ಷ ವಾರಂಟಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

ನಮ್ಮ ಗ್ಯಾರಂಟಿಗಳಿಗೆ ಐದು ವರ್ಷ ವಾರಂಟಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

Spread the love

ನಮ್ಮ ಗ್ಯಾರಂಟಿಗಳಿಗೆ ಐದು ವರ್ಷ ವಾರಂಟಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ
 
ಮುಳಬಾಗಿಲು (ಕೋಲಾರ): ‘ಕೇಂದ್ರ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೆಳಗಿಳಿಸಿ ರಾಹುಲ್‌ ಗಾಂಧಿ ಅವರನ್ನು ದೇಶದ ಪ್ರಧಾನಿ ಮಾಡೋಣ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕುರುಡುಮಲೆ ವಿನಾಯಕನ ದೇವಸ್ಥಾನದಲ್ಲಿ ಶನಿವಾರ ವಿಶೇಷ ಪೂಜೆ ಸಲ್ಲಿಸಿ ಲೋಕಸಭೆ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ಬಳಿಕ ರೋಡ್ ಶೋನಲ್ಲಿ ಮಾತನಾಡಿದರು.

‘ಬಿಜೆಪಿಯವರು ಮೊದಲಿಗೆ ಗ್ಯಾರಂಟಿ ಜಾರಿ ಸಾಧ್ಯವೇ ಇಲ್ಲ, ರಾಜ್ಯ ದಿವಾಳಿ ಆಗಲಿದೆ ಎನ್ನುವ ಸುಳ್ಳು ಸೃಷ್ಟಿಸಿದರು. ಜಾರಿ ಮಾಡಿದ ಬಳಿಕ ಹೊಸ ಸುಳ್ಳು ಸೃಷ್ಟಿಸಿ ಲೋಕಸಭೆ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆಗಳು ನಿಂತು ಹೋಗುತ್ತವೆ ಎನ್ನುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಮ್ಮ ಗ್ಯಾರಂಟಿಗಳು ನಿಲ್ಲುವುದಿಲ್ಲ. ಕಾಂಗ್ರೆಸ್ ಗ್ಯಾರಂಟಿಗಳಿಗೆ ಐದು ವರ್ಷಗಳ ವಾರಂಟಿ ಇದೆ’ ಎಂದರು.

‘ಸೋಲುವ ಭೀತಿಯಿಂದ ಬಿಜೆಪಿ ಸೃಷ್ಟಿಸುವ ಸುಳ್ಳುಗಳಿಗೆ ಸೊಪ್ಪು ಹಾಕಬೇಡಿ. ಬಿಜೆಪಿ ಸುಳ್ಳಿನ ಕಾರ್ಖಾನೆ. ನಾವು ಕೊಟ್ಟ ಮಾತಿನಂತೆ ನಡೆದುಕೊಂಡು ತಮ್ಮ ಮತಕ್ಕೆ ಘನತೆ ತಂದಿದ್ದೇವೆ. ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ. ಆಗ ತಮ್ಮ ಮತಕ್ಕೆ ಮೌಲ್ಯ ತಂದು ಕೊಡುವ ರೀತಿಯಲ್ಲಿ ಸರ್ಕಾರ ಕೆಲಸ ಮಾಡುತ್ತದೆ’ ಎಂದು ಭರವಸೆ ನೀಡಿದರು.

‘ಮೋದಿ ಸರ್ಕಾರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ರಸಗೊಬ್ಬರ, ಅಡುಗೆ ಎಣ್ಣೆ, ಬೇಳೆ-ಕಾಳು, ತರಕಾರಿ ಸೇರಿ ಪ್ರತಿಯೊಂದರ ಬೆಲೆಯನ್ನು ವಿಪರೀತವಾಗಿ ಏರಿಸಿತು. ಇದರಿಂದ ನಾಡಿನ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದವು. ಈ ಸಂಕಷ್ಟಕ್ಕೆ ಸ್ಪಂದಿಸಿ ಕಷ್ಟ ಕಡಿಮೆ ಮಾಡುವ ಉದ್ದೇಶದಿಂದ ನಾವು ಐದು ಗ್ಯಾರಂಟಿ ಘೋಷಿಸಿದೆವು. ಅಧಿಕಾರಕ್ಕೆ ಬಂದು ಐದಕ್ಕೆ ಐದನ್ನೂ ಜಾರಿ ಮಾಡಿದೆವು’ ಎಂದರು.

‘ಈ ಬಾರಿ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಗೆಲುವು ಖಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ನಮ್ಮ ಅಭ್ಯರ್ಥಿ ಗೌತಮ್ ಸಜ್ಜನ. ಸಾಮಾನ್ಯ ಕಾರ್ಯಕರ್ತರಾಗಿ ತಳಮಟ್ಟದಿಂದ ಬೆಳೆದು ಈಗ ಅಭ್ಯರ್ಥಿ ಆಗಿದ್ದಾರೆ. ಇವರು ಬಹುಮತದಿಂದ ಗೆಲ್ಲುತ್ತಾರೆ. ತಮ್ಮೆಲ್ಲರ ಸಹಕಾರ, ಆಶೀರ್ವಾದ ಗೌತಮ್ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಇರಲಿ’ ಎಂದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಎಂ.ಸಿ. ಸುಧಾಕರ್, ಬೈರತಿ ಸುರೇಶ್, ಮಾಜಿ ಸಚಿವ ರಮೇಶ್ ಕುಮಾರ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಗಳಾದ ಕೆ. ಗೋವಿಂದರಾಜು, ನಸೀರ್‌ ಅಹ್ಮದ್‌, ಶಾಸಕರಾದ ಕೊತ್ತೂರು ಮಂಜುನಾಥ್‌, ಕೆ.ವೈ. ನಂಜೇಗೌಡ, ಎಸ್‌.ಎನ್‌. ನಾರಾಯಣಸ್ವಾಮಿ, ಅಭ್ಯರ್ಥಿ ಕೆ.ವಿ. ಗೌತಮ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಿ. ಲಕ್ಷ್ಮಿನಾರಾಯಣ, ಮುಖಂಡರಾದ ರಾಜೀವ್‌ ಗೌಡ, ಆದಿನಾರಾಯಣ ಇದ್ದರು.


Spread the love

Exit mobile version