Home Mangalorean News Kannada News ನಮ್ಮ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಕ್ಕಳ ಚೆಸ್ ಪಂದ್ಯಾವಳಿ ಆಯೋಜಿಸುವ ಸಂಕಲ್ಪ

ನಮ್ಮ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಕ್ಕಳ ಚೆಸ್ ಪಂದ್ಯಾವಳಿ ಆಯೋಜಿಸುವ ಸಂಕಲ್ಪ

Spread the love

ನಮ್ಮ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಕ್ಕಳ ಚೆಸ್ ಪಂದ್ಯಾವಳಿ ಆಯೋಜಿಸುವ ಸಂಕಲ್ಪ

*ಬೆಂಗಳೂರು* : ಯುನಿವರ್ಸಲ್ ಫಸ್ಟ್‌ ಏಜ್ ರಾಜ್ಯ ಮಟ್ಟದ ಮಕ್ಕಳ ಚೆಸ್ ಪಂದ್ಯಾವಳಿ ಭಾನುವಾರ ಬೆಂಗಳೂರಿನಲ್ಲಿ ಯಶಸ್ವಿಯಾಗಿದ್ದು,ರಾಜ್ಯದ ನಾನಾ ಕಡೆಗಳಿಂದ ಬಂದ ಇನ್ನೂರಕ್ಕೂ ಅಧಿಕ ಪುಟಾಣಿ ವಿದ್ಯಾರ್ಥಿ ಚೆಸ್ ಆಟಗಾರರು ತಮ್ಮ ಚದುರಂಗದ ಚತುರತೆಯನ್ನು ಒರೆಗೆ ಹಚ್ಚಿದರು. ಮಂದಿನ ಹಂತದಲ್ಲಿ ನಮ್ಮ ಬೆಂಗಳೂರು ಜೂನ್- ಜುಲೈ ತಿಂಗಳಿನಲ್ಲಿ ವಿಶ್ವದ ವಂಡರ್ ಕಿಡ್ ಉದಯೋನ್ಮುಖ ಚೆಸ್ ಆಟಗಾರರ ರೋಚಕ ಪೈಪೋಟಿಗೆ ಸಾಕ್ಷಿಯಾಗಲಿದೆ. ವಿಶ್ವದ ನಾನಾ ದೇಶಗಳ ಪ್ರತಿಭಾನ್ವಿತ ಮಕ್ಕಳು ತಮ್ಮ ಚೆಸ್ ಪ್ರತಿಭೆಯನ್ನು ಯುನಿವರ್ಸಲ್ ಅಂತಾರಾಷ್ಟ್ರೀಯ ಮಕ್ಕಳ ಚೆಸ್ ಪಂದ್ಯಾವಳಿಯಲ್ಲಿ ಒರೆಗೆ ಹಚ್ಚಲಿದ್ದಾರೆ. ಈ ಪಂದ್ಯಾವಳಿಯ ಆಯೋಜನೆಯನ್ನು ಯೂನಿವರ್ಸಲ್ ಸ್ಕೂಲ್ ಆಫ್ ಅಡ್ಮಿನಿಸ್ಟ್ರೇಷನ್ ಅಧ್ಯಕ್ಷ ಶ್ರೀ ಆರ್ ಉಪೇಂದ್ರ ಶೆಟ್ಟಿ ಘೋಷಿಸಿದ್ದಾರೆ.

ಭಾನುವಾರ ನಗರದ ಯೂನಿವರ್ಸಲ್ ಸ್ಕೂಲ್ ಆಫ್ ಅಡ್ಮಿನಿಸ್ಟ್ರೇಷನ್ ಕಾಲೇಜು, ಗುರುರಾಯನಪುರ, ಕೋಳೂರು, ರಾಮೋಹಳ್ಳಿ ಇಲ್ಲಿ ನಡೆದ ಯುನಿವರ್ಸಲ್ ಫಸ್ಟ್ ಏಜ್ ಮಕ್ಕಳ ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಜೂನ್-ಜುಲೈ ತಿಂಗಳಲ್ಲಿ ನಡೆಯಲಿರುವ ಈ ಪಂದ್ಯಾವಳಿ ದೇಶಾದ್ಯಂತ ಚೆಸ್ ಪ್ರಿಯರಿಗೆ ಹೊಸ ಅನುಭವ ನೀಡಲಿದೆ. ಚೆಸ್ ಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಪಂದ್ಯಾವಳಿ ಆಯೋಜಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಚೆಸ್ ಪಂದ್ಯಾವಳಿ ಉದ್ಘಾಟಿಸಿದ ವಿಜಯ ಕರ್ನಾಟಕ ದಿನಪತ್ರಿಕೆ ಪ್ರಧಾನ ಸಂಪಾದಕ ಶ್ರೀ ಸುದರ್ಶನ ಚನ್ನಂಗಿಹಳ್ಳಿ
ಅವರು ಚೆಸ್ ಆಟ ಬುದ್ದಿವಂತರ ಆಟವಾಗಿದ್ದು, ಮಕ್ಕಳು ಇದರಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು. ಇದು ಅವರ ಬುದ್ದಿಮತ್ತೆಯನ್ನು ಇನ್ನಷ್ಟು ಚುರುಕಾಗಿಸುತ್ತದೆ ಎಂದು ತಿಳಿಸಿದರು.

“ಇಂದು ಹೆತ್ತವರು ನಾನಾ ಕಾರಣಗಳಿಂದ ಮಕ್ಕಳ ಜೊತೆಗೆ ಹೆಚ್ಚಿನ ಸಂವಹನ ನಡೆಸಲು ಸಾಧ್ಯವಾಗುತ್ತಿಲ್ಲ. ಹೆತ್ತವರಿಬ್ಬರೂ ಉದ್ಯೋಗಕ್ಕೆ ಹೋಗುತ್ತಿರುವುದು ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಏಕೆಂದರೆ ಅವರಿಗೆ ಮಕ್ಕಳ ಮೇಲೆ ಹೆಚ್ಚಿನ ಗಮನ ನೀಡಲು ಸಾಧ್ಯವಾಗುತ್ತಿಲ್ಲ. ಇದು ಭವಿಷ್ಯದಲ್ಲಿ ನಾನಾ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಬಗ್ಗೆ ನಾವೆಲ್ಲರೂ ಚಿಂತಿಸಬೇಕು,” ಎಂದು ಕಳವಳ ವ್ಯಕ್ತಪಡಿಸಿದರು.

“ಚೆಸ್ ಅಪ್ಪಟ ಭಾರತೀಯ ಆಟ. ಇದನ್ನು ಉಳಿಸಿ ಬೆಳೆಸಲು ನಾವೆಲ್ಲರೂ ಶ್ರಮಿಸಬೇಕು. ಈ ಆಟಕ್ಕೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ,” ಎಂದು ಅವರು ಕರೆ ನೀಡಿದರು.

ಈ ಸಂದರ್ಭದಲ್ಲಿ ಜನವರಿ ೧೮ರಿಂದ ೨೬ ರವರೆಗೆ ಬೆಂಗಳೂರಿನ ಕಂಠೀರವ ಒಳಾಂಗಣದಲ್ಲಿ ನಡೆಯಲಿರುವ ಚೊಚ್ಚಲ ಅಂತಾರಾಷ್ಟ್ರೀಯ ಗ್ರಾಂಡ್ ಮಾಸ್ಟರ್ಸ್ ಓಪನ್ ಚೆಸ್ ಪಂದ್ಯಾವಳಿಯ ‘ಮಾಸ್ಕಟ್’ ಅನಾವರಣಗೊಳಿಸಲಾಯಿತು.

ಅರವಿಂದ ಶಾಸ್ತ್ರಿ ಕಾರ್ಯದರ್ಶಿ ಕರ್ನಾಟಕ ರಾಜ್ಯ ಚೆಸ್ ಸಂಸ್ಥೆ, ಜಯಪಾಲ ಚಂದಾಡಿ ಸ್ಥಾಪಕ ಅಧ್ಯಕ್ಷರು ಕೆಡಿಸಿಎ, ಸೌಮ್ಯ ಎಂ ವಿ ಅಧ್ಯಕ್ಷರು ಬೆಂಗಳೂರು ನಗರ ಜಿಲ್ಲಾ ಚೆಸ್ ಅಸೋಸಿಯೇಷನ್ (ಬಿಯುಡಿಸಿಎ), ಲೋಕೇಶ್ ಎಂ ವ್ಯೂಹ್ಗಮ್ ಚೆಸ್ ಅಕಾಡಮಿ, ಶ್ರೀಪಾದ್ ಕೆವಿ ಮುಖ್ಯ ಮಧ್ಯಸ್ಥಿಕೆದಾರರು ಮತ್ತಿತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು


Spread the love

Exit mobile version