ನರೇಂದ್ರ ಮೋದಿ ಸ್ವಾರ್ಥ, ಹೃದಯಹೀನ ರಾಜಕಾರಣಿ: ಎಚ್​.ಡಿ. ಕುಮಾರಸ್ವಾಮಿ

Spread the love

ನರೇಂದ್ರ ಮೋದಿ ಸ್ವಾರ್ಥ, ಹೃದಯಹೀನ ರಾಜಕಾರಣಿ: ಎಚ್​.ಡಿ. ಕುಮಾರಸ್ವಾಮಿ

ಚಿಕ್ಕಮಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸ್ವಾರ್ಥ, ಹೃದಯಹೀನ ರಾಜಕಾರಣಿ. ಅವರು ತಮ್ಮ ಸ್ವಾರ್ಥಕ್ಕಾಗಿ ಯಾರನ್ನು ಬಲಿಕೊಡುತ್ತಾರೆ ಎಂಬುದನ್ನು ಊಹಿಸಲೂ ಆಗುವುದಿಲ್ಲ ಎಂದು ಸಿಎಂ ಎಚ್​.ಡಿ. ಕುಮಾರಸ್ವಾಮಿ ಪ್ರಧಾನಿ ವಿರುದ್ಧ ಕಿಡಿ ಕಾರಿದ್ದಾರೆ.

ಚಿಕ್ಕಮಗಳೂರಿನ ಕೊಪ್ಪದಲ್ಲಿ ಆಯೋಜಿಸಿದ್ದ ಜೆಡಿಎಸ್​ ಪರಿವರ್ತನಾ ಸಮಾವೇಶದಲ್ಲಿ ಮಾತನಾಡಿದ ಸಿಎಂ ಮಂಡ್ಯದಲ್ಲಿ ಹೆಸರಿಗಷ್ಟೇ ಪಕ್ಷೇತರ ಅಭ್ಯರ್ಥಿ ಇದ್ದಾರೆ. ಅವರಿಗೆ ಕಾಂಗ್ರೆಸ್, ಬಿಜೆಪಿ, ರೈತ ಸಂಘದ ಬೆಂಬಲ ನೀಡಿದ್ದು, ಇವರೆಲ್ಲಾ ಸೇರಿ ಜೆಡಿಎಸ್ ಮಣಿಸಲು ಹೊರಟಿದ್ದಾರೆ. ಸ್ಥಳೀಯವಾಗಿ ಅಲ್ಲಿಯ ಪರಿಸ್ಥಿತಿ ಬೇರೆಯೇ ಇದೆ, ಮಂಡ್ಯ ಬಿಟ್ಟು ಬೇರೆ ಕಡೆ ಚುನಾವಣೆ ನಡೆಯುತ್ತಿಲ್ಲವಾ? ಮಂಡ್ಯದಲ್ಲಿ ಎಲ್ಲ ರೀತಿಯ ಚಕ್ರವ್ಯೂಹ ರಚಿಸಿದ್ದಾರೆ. ಮಂಡ್ಯ ಜನರು ಎಲ್ಲವನ್ನೂ ಮೆಟ್ಟಿ ನಿಲ್ಲುತ್ತಾರೆ. ಮೇ 23ರ ಬಳಿಕ ನಾನು ಅದಕ್ಕೆ ಉತ್ತರಿಸುತ್ತೇನೆ ಎಂದು ತಿಳಿಸಿದರು.

‘ಚುನಾವಣೆಗೂ ಮುನ್ನ ಪ್ರಧಾನಿ ಮೋದಿ ಅವರು ಭಾರತ ಮತ್ತು ಪಾಕ್ ನಡುವೆ ಸಂಘರ್ಷ ನಡೆಯುವಂತೆ ಮಾಡುತ್ತಾರೆ. ಇಂತಹ ಕಥೆ ಸೃಷ್ಟಿಸಿ ಮೋದಿ ಮತ ಕೇಳಲು ಬರುತ್ತಾರೆ’ ಎಂದು ಅವರು ಹೇಳಿದ್ದರು. ಅವರು ಅಂದು ಹೇಳಿದ್ದು ಇಂದು ನಿಜವಾಗಿದೆ. ಅದೇ ರೀತಿಯಲ್ಲಿ ಪುಲ್ವಾಮ ದಾಳಿಯಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.

ಕಳೆದ ಐದು ವರ್ಷಗಳಲ್ಲಿ ಅಧಿಕಾರದ ಗದ್ದುಗೆಯಲ್ಲಿದ್ದ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಸಮ್ಮಿಶ್ರ ಸರಕಾರದ ಸಾಲ ಮನ್ನಾ ಯೋಜನೆಯನ್ನು ಟೀಕಿಸುತ್ತಿದ್ದಾರೆ. ಆದರೆ ಪ್ರತೀ ರೈತನ ಖಾತೆಗೆ 6 ಸಾವಿರ ಜಮಾ ಮಾಡುವುದಾಗಿ ಕೇಂದ್ರದ ಬಜೆಟ್‍ನಲ್ಲಿ ಘೋಷಣೆ ಮಾಡಿಸಿದ ಮೋದಿ ಅವರು ರೈತರನ್ನು ಭಿಕ್ಷುಕರಂತೆ ಚಿತ್ರಿಸಿದ್ದಾರೆಂದ ಸಿಎಂ, ಈ ಯೋಜನೆಯಡಿ ರಾಜ್ಯಕ್ಕೆ ಬರುವ ಹಣ ಎರಡು ಸಾವಿರ ಕೋಟಿ ಮಾತ್ರ, ಆದರೆ ರಾಜ್ಯ ಸರಕಾರ ರೈತರಿಗೆ ನೀಡುವ ಹಾಲಿನ ಪ್ರೋತ್ಸಾಹ ಧನವೇ ಎರಡೂವರೇ ಸಾವಿರ ಕೋಟಿಗೂ ಹೆಚ್ಚು ಎಂದು ವಿವರಿಸಿದರು.

ಬಿಜೆಪಿಯವರು ತಾನು ಕಮಿಷನ್ ತಿನ್ನುವ ಸಿಎಂ ಎನ್ನುತ್ತಿದ್ದಾರೆ, ನಾನು ಯಾವ ಕಮಿಷನ್ ಹಣವನ್ನೂ ಮುಟ್ಟಿಲ್ಲ. ಕಮಿಷನ್ ಹಣ ತಿಂದಿರುವುದನ್ನು ಬಿಜೆಪಿಯವರು ದಾಖಲೆ ಸಮೇತ ಸಾಬೀತು ಮಾಡಲಿ ಎಂದು ಸವಾಲು ಹಾಕಿದ ಸಿಎಂ ಕುಮಾರಸ್ವಾಮಿ, ದೇಶವನ್ನು ಸುಭದ್ರವಾಗಿ ಮುನ್ನಡೆಸಲು ಮೋದಿ ಪ್ರಧಾನಿಯಾಗಬೇಕೆಂದು ಬಿಜೆಪಿಯವರು ಹೇಳುತ್ತಿದ್ದಾರೆ, ಹಾಗಾದರೆ ಕಳೆದ 70 ವರ್ಷಗಳಿಂದ ದೇಶ ಅಭದ್ರತೆಯಲ್ಲಿ ನಲುಗುತ್ತಿತ್ತಾ? ಬರೀ ಸುಳ್ಳು ಹೇಳುವ ಬಿಜೆಪಿಯವರನ್ನು ಮತದಾರರು ನಂಬಬೇಡಿ, ಕೈಮುಗಿದು ಬೇಡಿಕೊಳ್ಳುತ್ತೇನೆ ಎಂದು ಮನವಿ ಮಾಡಿದರು.

ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರ ಮೈತ್ರಿ ಅಭ್ಯರ್ಥಿ ಈ ಹಿಂದೆ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಸಚಿವರಾಗಿ ಉತ್ತಮವಾಗಿ ಕಾರ್ಯನಿರ್ವಹಿಸದ ಹೆಗ್ಗಳಿಕೆ ಹೊಂದಿದ್ದಾರೆ. ಸಂಸದರಾಗಿ ಅವರು ಈ ಭಾಗದ ಅಭಿವೃದ್ಧಿಗೆ ಒತ್ತು ನೀಡುತ್ತಾರೆ. ಮೈತ್ರಿ ಪಕ್ಷಗಳ ಅಭ್ಯರ್ಥಿ ಪ್ರಮೋದ್ ಮಧ್ವರಾಜ್‍ರನ್ನು ಗೆಲ್ಲಿಸಿ ಸಂಸತ್‍ಗೆ ಕಳುಹಿಸಿದಲ್ಲಿ ಕೇಂದ್ರದಲ್ಲಿ ಘಟಬಂಧನ್ ಸರಕಾರ ರಚನೆಯಾಗುತ್ತದೆ. ಈ ಸರಕಾರ ರಚನೆಯಾದಲ್ಲಿ ಈ ಭಾಗದ ಕಸ್ತೂರಿ ರಂಗನ್ ವರದಿ ಸಮಸ್ಯೆ, ಅರಣ್ಯವಾಸಿಗಳ ಸಮಸ್ಯೆ ಸೇರಿದಂತೆ ಎಲ್ಲ ಸಮಸ್ಯೆಗಳೂ ಬಗೆಹರಿಯಲಿವೆ ಎಂದು ಸಿಎಂ ಕುಮಾರಸ್ವಾಮಿ ಇದೇ ವೇಳೆ ಭರವಸೆ ನಿಡಿದರು.

ಸಮಾವೇಶದಲ್ಲಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್, ಸಚಿವೆ ಜಯಮಾಲ, ಸ್ಥಳೀಯ ಶಾಸಕ ಟಿ.ಡಿ.ರಾಜೇಗೌಡ, ಜೆಡಿಎಸ್ ವಿಪ ಸದಸ್ಯ ಭೋಜೇಗೌಡ ಮಾತನಾಡಿದರು.

ಶಾಸಕ ಧರ್ಮೇಗೌಡ, ಕಾಂಗ್ರೆಸ್ ಚುನಾವಣಾ ವೀಕ್ಷಕ ಮಂಜುನಾಥ್ ಭಂಡಾರಿ ಮತ್ತಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಜಯ್‍ ಕುಮಾರ್, ಶಿವಕುಮಾರ್, ಕೆಪಿಸಿಸಿ ಸದಸ್ಯ ಸಂದೀಪ್, ಸ್ಥಳೀಯ ಕಾಂಗ್ರೆಸ್ ಮುಖಂಡರಾದ, ಸಚಿನ್ ಮೀಗಾ, ಸುಧೀರ್ ಕುಮಾರ್ ಮುರೋಳ್ಳಿ, ಜೆಡಿಎಸ್ ಮುಖಂಡರಾದ ವೆಂಕಟೇಶ್, ರಾಜೇಂದ್ರ ಮತ್ತಿತರರು ಉಪಸ್ಥಿತರಿದ್ದರು. ಸಮಾವೇಶಕ್ಕೂ ಮುನ್ನ ಪಟ್ಟಣದ ಪ್ರಮುಖರಸ್ತೆಗಳಲ್ಲಿ ಸಾವಿರಾರು ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಬೃಹತ್ ಮೆರವಣಿಗೆ ನಡೆಸಿದರು.


Spread the love