ನಳಿನ್ ಕುಮಾರ್ ಓರ್ವ ಸೋಮಾರಿ ಸಂಸದ: ರಮಾನಾಥ ರೈ
ಮಂಗಳೂರು: ಸಂಸದ ನಳಿನ್ ಕುಮಾರ್ ಕಟೀಲ್ ಓರ್ವ ಸೋಮಾರಿ, ಇಂತಹ ಲೋಕಸಭಾ ಸದಸ್ಯರನ್ನು ನಾನು ನೋಡಿಲ್ಲ ಎಂದು ಮಾಜಿ ಅರಣ್ಯ ಸಚಿವ ರಮಾನಾಥ ರೈ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರೋ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ತಾವೇ ಮಾಡಿದ್ದಾಗಿ ನಳಿನ್ ಕುಮಾರ್ ಹೇಳುತ್ತಿದ್ದಾರೆ. ಸದಾ ಸಕ್ರ್ಯೂಟ್ ಹೌಸ್ನಲ್ಲಿಯೇ ಇರುವ ಅವರು ಹೇಗೆ ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯ. ಅಲ್ಲದೇ ಅವರಿಗೆ ಡಾಲರ್ ಎಂದರೇ ಏನು ಅಂತಾನೇ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ದ.ಕ. ಜಿಲ್ಲೆಯಲ್ಲಿ ಮರಳುಗಾರಿಕೆ ನಡೆಯುತ್ತಿದೆ ಎಂದು ಆರೋಪಿಸುತ್ತಾರೆ. ಆದರೆ ಮರಳುಗಾರಿಕೆ ಎರಡು ಮೂರು ವರ್ಷಗಳಿಂದ ನಡೆಯುತ್ತಿರುವುದಲ್ಲ. ಕಳೆದ 15 ವರ್ಷಗಳಿಂದ ಮರಳುಗಾರಿಕೆ ನಡೆಯುತ್ತಿದೆ. ಬಿಜೆಪಿ ಸರಕಾರ ಇದ್ದಾಗಲೂ ಇಲ್ಲಿ ಮರಳುಗಾರಿಕೆ ನಡೆಯುತ್ತಿತ್ತು. ಸಮಸ್ಯೆ ಎದುರಾದಾಗ ಯಾರೋ ಒಬ್ಬರ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ಮಾಜಿ ಸಚಿವ ರೈ ಹೇಳಿದರು.
ಬೊಂಡಂತಿಲ ಗ್ರಾಮದಲ್ಲಿ ಸೇತುವೆಯೊಂದು ಕುಸಿದಾಗ ನಾನು ಶಾಸಕನಾಗಿದ್ದೆ. 2 ದಿನಗಳಲ್ಲಿ ಆ ಸೇತುವೆಯನ್ನು ಪುನರ್ ನಿರ್ಮಾಣದ ಕಾಮಗಾರಿ ಆರಂಭಿಸಲಾಗಿತ್ತು. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಬಂಟ್ವಾಳದಲ್ಲಿ ಆದಂತೆ ಯಾವ ಕ್ಷೇತ್ರದಲ್ಲೂ ಆಗಿಲ್ಲ. ಸಿದ್ದರಾಮಯ್ಯ ನೇತೃತ್ವದಲ್ಲಿ ಕಳೆದ ಐದು ವರ್ಷಗಳ ಸರಕಾರ ಅಭಿವೃದ್ಧಿಯ ಸುವರ್ಣ ಯುಗ ಎಂದವರು ಬಣ್ಣಿಸಿದರು.
ಕಳೆದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ. ಆದರೆ ಸಂಸದ ನಳಿನ್ ಕುಮಾರ್ ಮಾತ್ರ ಚುನಾವಣೆ ಹತ್ತಿರ ಬಂದಾಗ ಇನ್ನೊಬ್ಬರನ್ನು ತಪ್ಪಿತಸ್ಥರನ್ನಾಗಿಸುವ ಕೆಲಸ ಮಾಡುತ್ತಿದ್ದಾರೆ. ಕಳೆದ ಅವಧಿಯಲ್ಲಿ ಹಲವು ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳು ಅನುಮೋದನೆಗೊಂಡಿವೆ. ಮಂಗಳೂರು- ಸೋಲಾಪುರ ರಸ್ತೆ ನಿಧಾನಗತಿಗೆ ನಾನು, ಆಗ ಶಾಸಕರಾಗಿದ್ದ ಮೊಯ್ದಿನ್ ಬಾವ, ಅಭಯಚಂದ್ರ ಜೈನ್ ಕಾರಣ ಎಂದು ಹೇಳಿದ್ದಾರೆ. ಅದು ಯಾವ ರೀತಿಯ ಹೇಳಿಕೆ ಎಂದು ಅರ್ಥವಾಗಿಲ್ಲ. ಆ ಕ್ಷೇತ್ರದ ಕಾರ್ಕಳ ಶಾಸಕರನ್ನು ಅವರು ಮರೆತಿದ್ದಾರೆ. ಈ ರಸ್ತೆಗಾಗಿ ನಾನು ಸಚಿವನಾಗಿದ್ದ ಸಂದರ್ಭ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿ ಉಪಸ್ಥಿತಿಯಲ್ಲಿ ಮೂರು ಸಭೆ ಮಾಡಿ ಸ್ವಾಧೀನ ಪ್ರಕ್ರಿಯೆ ಮುಗಿಸಲಾಗಿದೆ. ನಳಿನ್ ಕುಮಾರ್ ಆಗ ಮೂರು ಸಭೆಗೆ ಹಾಜರಾಗಿರಲಿಲ್ಲ. ಇದೀಗ ಭೂಸ್ವಾಧೀನ ಮಾಡಿಸಿದ ಮೇಲೆ ನಮ್ಮ ಮೇಲೆ ಆರೋಪ ಮಾಡುವುದು ಯಾತಕ್ಕೆ. ಇದು ಕುಣಿಯಲು ಬಾರದವ ರಂಗಸ್ಥಳ ಸರಿ ಇಲ್ಲ ಎಂದ ಹಾಗಾಯಿತು ಎಂದು ರೈ ವ್ಯಂಗ್ಯವಾಡಿದರು.
ಲೇಡಿಗೋಶನ್ ಆಸ್ಪತ್ರೆ ಎಂಆರ್ಪಿಎಲ್ನ ಸಿಎಸ್ಆರ್ ನಿಧಿಯಿಂದ ಆರಂಭವಾಗಿತ್ತು. ಕನಿಷ್ಠ 10 ಸಭೆಗಳು ಇದಕ್ಕಾಗಿ ನಡೆದಿವೆ. ಆರಂಭದಲ್ಲಿ ಗುತ್ತಿಗೆ ವಹಿಸಿದ್ದಾಗ ಬಿಟ್ಟುಹೋದ ಹಿನ್ನೆಲೆಯಲ್ಲಿ ಬೇರೆ ಗುತ್ತಿಗೆಯವರನ್ನು ನೇಮಿಸಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಶಿರಾಡಿ ಘಾಟಿಯ ಪ್ರಥಮ ಹಂತ ಕಾಮಗಾರಿ ರಾಜ್ಯ ಸರಕಾರದ ಅಧೀನದ ರಾಷ್ಟ್ರೀಯ ಹೆದ್ದಾರಿ ಮೂಲಕ ನಡೆಸಲಾಗಿದೆ. ಇದೀಗ ಅದನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿದೆ. ಪ್ರಥಮ ಹಂತದ ಕಾಮಗಾರಿ ನಿಗದಿತ ಅವಧಿಯೊಳಗೆ ಮುಗಿಸಲಾಗಿದೆ. ದ್ವಿತೀಯ ಹಂತದ ಕಾಮಗಾರಿಯನ್ನು ಹೈದರಾಬಾದ್ನ ಗುತ್ತಿಗೆದಾರರಿಗೆ ವಹಿಸಲಾಗಿತ್ತು. ಅರಣ್ಯ ಇಲಾಖೆಗೆ ಸಂಬಂಧಿಸಿದ ಒಪ್ಪಿಗೆಯನ್ನೂ ಹಿಂದೆಯೇ ನೀಡಲಾಗಿದೆ. 41 ಕೋಟಿ ರೂ.ಗಳ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ, ವಿಮಾನ ನಿಲ್ದಾಣದ ಸಂಪರ್ಕ ರಸ್ತೆ, ಅಂಬೇಡ್ಕರ್ ಭವನ, ಪಶು ವೈದ್ಯಕೀಯ ಕಾಲೇಜು, ಉಪ್ಪಿನಂಗಡಿ ಸಮುದಾಯ ಆಸ್ಪತ್ರೆ ಹೀಗೆ ಹಲವಾರು ಕಾಮಗಾರಿಗಳು ಹಿಂದಿನ ಸರಕಾರದ ಅವಧಿಯಲ್ಲಿ ನಡೆದಿದ್ದರೂ, ಏನೂ ಅಭಿವೃದ್ಧಿ ಆಗಿಲ್ಲ ಎಂಬಂತೆ ಸಂಸದರು ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವ ರೈ ಅಸಮಾಧಾನ ವ್ಯಕ್ತಪಡಿಸಿದರು.