Home Mangalorean News Kannada News ನಳಿನ್ ಕುಮಾರ್ ಕಟೀಲ್ ಸೋಲಿಸಿ, ಅಕ್ರಮ ಟೋಲ್ ಗೇಟ್ ಮುಚ್ಚುವ ಹೋರಾಟಕ್ಕೆ ಬಲ ತುಂಬಿ

ನಳಿನ್ ಕುಮಾರ್ ಕಟೀಲ್ ಸೋಲಿಸಿ, ಅಕ್ರಮ ಟೋಲ್ ಗೇಟ್ ಮುಚ್ಚುವ ಹೋರಾಟಕ್ಕೆ ಬಲ ತುಂಬಿ

Spread the love

ನಳಿನ್ ಕುಮಾರ್ ಕಟೀಲ್ ಸೋಲಿಸಿ, ಅಕ್ರಮ ಟೋಲ್ ಗೇಟ್ ಮುಚ್ಚುವ ಹೋರಾಟಕ್ಕೆ ಬಲ ತುಂಬಿ

ತಾತ್ಕಾಲಿಕ ನೆಲೆಯಲ್ಲಿ ಮೂರು ತಿಂಗಳ ಅವಧಿಗೆ ಟೋಲ್ ಸಂಗ್ರಹಿಸಲು ಅನುಮತಿ ಪಡೆದಿದ್ದ ಸುರತ್ಕಲ್ ಟೋಲ್ ಗೇಟ್ ಮೂರು ವರ್ಷಗಳ ನಂತರವೂ ಅಕ್ರಮವಾಗಿ ಮುಂದುವರಿಯಲು‌ ಸಂಸದ ನಳಿನ್ ಕುಮಾರ್ ಕಟೀಲ್ ನೇರ ಹೊಣೆಯಾಗಿದ್ದಾರೆ. ಜನತೆಯ ಸತತ ಹೋರಾಟದ ನಂತರವೂ ಅಕ್ರಮ ಟೋಲ್ ಗೇಟ್ ಪರ ನಿಂತ ನಳಿನ್ ಕುಮಾರ್ ಕಟೀಲ್ ರನ್ನು ಚುನಾವಣೆಯಲ್ಲಿ ಸೋಲಿಸುವ ಮೂಲಕ ಅಕ್ರಮ ಟೋಲ್ ಗೇಟ್ ಮುಚ್ಚುವ ಬೇಡಿಕೆಗೆ ಬಲ ತುಂಬಬೇಕು ಎಂದು “ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸುರತ್ಕಲ್” ಜಿಲ್ಲೆಯ ಮತದಾರರಲ್ಲಿ ಮನವಿ ಮಾಡಿದೆ.

2015 ರಲ್ಲಿ ಜನತೆಯ ತೀವ್ರ ವಿರೋಧದ ನಡುವೆ ಸುರತ್ಕಲ್ ನಲ್ಲಿ‌ ಟೋಲ್ ಸಂಗ್ರಹ ಆರಂಭಿಸಲಾಗಿತ್ತು. ಹೆಜಮಾಡಿ ಟೋಲ್ ಗೇಟ್ ಆರಂಭಗೊಂಡ ತಕ್ಷಣ ಸುರತ್ಕಲ್ ಟೋಲ್ ಕೇಂದ್ರವನ್ನು ಅದರಲ್ಲಿ ವಿಲೀನಗೊಳಿಸುವ ಭರವಸೆಯನ್ನು ಜನತೆಗೆ ನೀಡಿ ಮೂರು ತಿಂಗಳ ಅವಧಿಗೆ ತಾತ್ಕಾಲಿಕ ನೆಲೆಯಲ್ಲಿ ರಾಜ್ಯ ಸರಕಾರದಿಂದ ಅನುಮತಿ ಪಡೆದು ಟೋಲ್ ಸಂಗ್ರಹ ಆರಂಭಿಸಲಾಗಿತ್ತು. ಮೂರು ತಿಂಗಳ ನಂತರ ಒಂಬತ್ತು ಕಿ ಮೀ ದೂರದ ಹೆಜಮಾಡಿ ಟೋಲ್ ಕೇಂದ್ರ ಆರಂಭಗೊಂಡರೂ ತಾತ್ಕಾಲಿಕ ನೆಲೆಯಲ್ಲಿ ಅನುಮತಿಯನ್ನು ನವೀಕರಿಸುತ್ತಾ ಮೂರು ವರ್ಷಗಳಿಂದಲೂ ವಾಹನ ಸವಾರರಿದ ಸುರತ್ಕಲ್ ನಲ್ಲಿ ಅಕ್ರಮವಾಗಿ ಟೋಲ್ ಹೆಸರಿನಲ್ಲಿ ಸುಲಿಗೆ ನಡೆಸಲಾಗುತ್ತಿದೆ. ಈ ಕುರಿತು “ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್” ಕಳೆದ ಎರಡು ವರ್ಷಗಳಿಂದ ಸತತ ಹೋರಾಟ ನಡೆಸುತ್ತಿದೆ. ಹೋರಾಟದ ತೀವ್ರತೆಗೆ ಮಣಿದು “ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ” ಸುರತ್ಕಲ್ ಟೋಲ್ ಕೇಂದ್ರವನ್ನು ಹೆಜಮಾಡಿ ಟೋಲ್ ಕೇಂದ್ರದಲ್ಲಿ ವಿಲೀನಗೊಳಿಸುವ ನಿರ್ಣಯನ್ನು 2018 ಜನವರಿಯಲ್ಲಿ ಕೈಗೊಂಡಿದೆ. ಈ ನಿರ್ಣಯದ ಹೊರತಾಗಿಯೂ ಕಳೆದ ಒಂದೂವರೆ ವರ್ಷಗಳಿಂದ ಅಕ್ರಮ ಟೋಲ್ ಸಂಗ್ರಹ ಯಾವುದೇ ತಡೆಯಿಲ್ಲದೆ ಮುಂದುವರಿದಿದೆ. ಈ ಕುರಿತು ಪಾದಯಾತ್ರೆ, ಮೆರವಣಿಗೆ, ಹನ್ನೊಂದು ದಿನಗಳ ಹಗಲು ರಾತ್ರಿ ಧರಣಿಯಂತಹ ತೀವ್ರ ತರದ ಪ್ರತಿಭಟನೆಗಳನ್ನು ಜನತೆ ನಿರಂತರವಾಗಿ ನಡೆಸುತ್ತಿದ್ದಾರೆ. ಆದರೆ ಈ ಯಾವ ಹಂತದಲ್ಲೂ ನೇರ ಜವಾಬ್ದಾರಿ ಹೊತ್ತಿದ್ದ ಸಂಸದ ನಳಿನ್ ಕುಮಾರರು ಜನರ ಪರವಾಗಿ ನಿಲ್ಲಲಿಲ್ಲ. ಬದಲಾಗಿ ಸತತವಾಗಿ ಸುಳ್ಳು ಭರವಸೆಗಳನ್ನು ನೀಡುತ್ತಾ ಅಕ್ರಮ ಟೋಲ್ ಗೇಟ್ ಲಾಬಿಯ ಪರವಹಿಸಿದ್ದರು. ಅಷ್ಟಲ್ಲದೆ ಸುರತ್ಕಲ್ , ನಂತೂರು ಹೆದ್ದಾರಿ ಅವ್ಯವಸ್ಥೆಯ ಆಗರವಾಗಿದ್ದು, ಟೋಲ್ ಪಾವತಿ ರಸ್ತೆಯಾದರೂ ಹೊಂಡ ಗುಂಡಿ ಮುಚ್ಚಲೂ ದೊಡ್ಡ ಮಟ್ಟದ ಹೋರಾಟ ನಡೆಸಬೇಕಾದ ಸ್ಥಿತಿ ಸಂಸದರ ಬೇಜವಾಬ್ದಾರಿತನದಿಂದ ನಿರ್ಮಾಣಗೊಂಡಿದೆ. “ಕೂಳೂರು ಹಳೆಯ ಸೇತುವೆ ದುರ್ಬಲಗೊಂಡು ಸಂಚಾರಕ್ಕೆ ಅಯೋಗ್ಯವಾಗಿದೆ, ಯಾವುದೇ ಕ್ಷಣದಲ್ಲಿ ಕುಸಿಯಬಹುದು” ಎಂದು ತಜ್ಞರು ವರದಿ ನೀಡಿ ಒಂದು ವರ್ಷ ದಾಟಿದೆ. ಆದರೆ ಬದಲಿ ಸೇತುವೆ ನಿರ್ಮಾಣದ ಪ್ರಾಥಮಿಕ ಕೆಲಸವನ್ನು ಆರಂಭಿಸಲೂ ಸಂಸದ ನಳಿನ್ ರಿಗೆ ಸಾಧ್ಯವಾಗಿಲ್ಲ. ಇದು ಸಂಸದರ ದುರ್ಬಲ ಕಾರ್ಯವೈಖರಿಯನ್ನು ಎತ್ತಿ ತೋರಿಸುತ್ತದೆ.

ಸಂಸದ ನಳಿನ್ ಕುಮಾರ್ ಕಟೀಲ್ ತನ್ನ ಕರ್ತವ್ಯ ನಿರ್ವಹಿಸಿದ್ದರೆ ಸುರತ್ಕಲ್ ಟೋಲ್ ಗೇಟ್ ಮುಚ್ವಿಸಲು ಒಂದು ವಾರದ ಅವಧಿ ಸಾಕಿತ್ತು. ಆದರೆ ಜನತೆಯ ಹೋರಾಟವನ್ನು ಕೇವಲವಾಗಿ ಕಂಡು ಒಂಬತ್ತು ಕಿ ಮೀ ಅಂತರದಲ್ಲಿ ಎರಡೆರಡು ಕಡೆ ವಾಹನ ಸವಾರರು ಟೋಲ್ ಪಾವತಿಸುವ ಸ್ಥಿತಿ ನಿರ್ಮಿಸಿದರು. ಈ ಚುನಾವಣೆಯಲ್ಲಿ ಮತಚಲಾಯಿಸುವಾಗ ಜನತೆ ಇದನ್ನೆಲ್ಲ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ನಳಿನ್ ಕುಮಾರ್ ಕಟೀಲ್ ರನ್ನು ಸೋಲಿಸುವ ಮೂಲಕ ಸರಿಯಾದ ಪಾಠ ಕಲಿಸಬೇಕು. ಆ ಮೂಲಕ ಟೋಲ್ ಗೇಟ್ ಮುಚ್ಚುವ ಹೋರಾಟಕ್ಕೆ ಬಲತುಂಬಬೇಕು ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಮತದಾರರಲ್ಲಿ ಮನವಿ ಮಾಡಿದ್ದಾರೆ.


Spread the love
1 Comment
Inline Feedbacks
View all comments
5 years ago

It is good decision to defeat the people who works against people who get % from rich people.

wpDiscuz
Exit mobile version