Home Mangalorean News Kannada News ನವಂಬರ್ 27- ಪಣಂಬೂರು ಬೀಚಿನಲ್ಲಿ ಎಂಪಿಎಲ್ ಹಬ್ಬ–ಟ್ರೋಪಿ ಅನಾವರಣ

ನವಂಬರ್ 27- ಪಣಂಬೂರು ಬೀಚಿನಲ್ಲಿ ಎಂಪಿಎಲ್ ಹಬ್ಬ–ಟ್ರೋಪಿ ಅನಾವರಣ

Spread the love

ನವಂಬರ್ 27- ಪಣಂಬೂರು ಬೀಚಿನಲ್ಲಿ ಎಂಪಿಎಲ್ ಹಬ್ಬ–ಟ್ರೋಪಿ ಅನಾವರಣ

ಮಂಗಳೂರು:  ನವಮಂಗಳೂರಿನ ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣವು ಹಸಿರು ಹುಲ್ಲನ್ನು ಹೊದ್ದುಕೊಂಡು, ಅಸ್ಟ್ರೋಟರ್ಫ್ ಕ್ರಿಕೆಟ್ ಪಿಚ್ಚಿನ ಹೊದಿಕೆಗಾಗಿ ಕಾಯುತ್ತಾ, ಸುತ್ತಲೂ ಅರುವತ್ತು ಅಡಿಗಳೆತ್ತರದ ಟವರ್‍ಗಳಲ್ಲಿ ದೀಪಗಳನ್ನು ಹೊಂದಿ ಕರ್ನಾಟಕ ರೀಜಿನಲ್ ಕ್ರಿಕೆಟ್ ಅಕಾಡಮಿ, ಮಂಗಳೂರು ಇದರ ಆಸರೆಯಲ್ಲಿ ಡಿಸೆಂಬರ್ ತಿಂಗಳ ದಿನಾಂಕ 17ರಿಂದ 30ರವರೆಗೆ 14 ದಿನಗಳ ಕಾಲ  ಜರಗಲಿರುವ  ಮಂಗಳೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟಕ್ಕೆ ಸಿದ್ಧ ಗೊಳ್ಳುತ್ತಿದೆ.

ದಿನಾಂಕ 27.11.2016ರ ಭಾನುವಾರ ಸಂಜೆಗಂಟೆ 4.00 ರಿಂದ ಪಣಂಬೂರು ಸಮುದ್ರ ತೀರದಲ್ಲಿ ಎಂಪಿಎಲ್ ಹಬ್ಬವು ನಡೆಯಲಿದೆ.  ಎಂಪಿಎಲ್ ಕ್ರಿಕೆಟ್ ಕೂಟದಲ್ಲಿ ಉಡುಪಿ – ಕೊಡಗು- ದಕ್ಷಿಣಕನ್ನಡ ಜಿಲ್ಲೆಯ ಕ್ರೀಡಾ ಪ್ರೇಮಿಗಳು ಜಾತಿ- ಧರ್ಮ -ಪಕ್ಷ ಭೇದಗಳೆಲ್ಲವನ್ನು ಮರೆತು ಕ್ರೀಡೆಯ ಕೊಡೆಯಡಿಯಲ್ಲಿ ಸೌಹಾರ್ದತೆಯೊಂದಿಗೆ ಒಂದಾಗಿ ಬೆರೆಯಬೇಕು ಎಂಬ ನಿಟ್ಟಿನಲ್ಲಿ ಎಂಪಿಎಲ್ ಹಬ್ಬವನ್ನು ಹಮ್ಮಿಕೊಳ್ಳಲಾಗಿದೆ.

win-i-phone-mpl-trophy-launch-2

ಎಂಪಿಎಲ್ ಹಬ್ಬವು ಪುಟ್ಟ ಮಕ್ಕಳಿಂದ ಹಿಡಿದು ಕುಟುಂಬದ ಎಲ್ಲರೂ ಮನೋರಂಜನೆಯನ್ನು ಹೊಂದಬೇಕು ಎಂಬ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದು, ಈ ಹಬ್ಬದಲ್ಲಿ ಗಾಳಿಪಟ ಹಾರಿಸುವ ಸ್ಪರ್ಧೆ, ವಿಕೇಟಿಗೆ ಗುರಿಯೆಸೆತ, ಕೌಟುಂಬಿಕ ಕ್ರಿಕೆಟ್,  ಓಡು ಬದಲಾಯಿಸು ಮುಂತಾದ ಸ್ಪರ್ಧೆಗಳಲ್ಲದೆ ಮನರಂಜಿಸುವ ನಿಮಿಷ ಮಾತ್ರದ ಸ್ಫರ್ಧೆಗಳನ್ನು ಏರ್ಪಡಿಸಲಾಗಿದೆ. ಈ ಸ್ಫರ್ಧೆಗಳಲ್ಲಿ ಉಚಿತವಾಗಿ ಭಾಗವಹಿಸಬಹುದಾಗಿದ್ದು,  ಗೆದ್ದವರ ಮಡಿಲನ್ನು ಸೇರಲು ಐ-ಫೋನ್ ಸೇರಿದಂತೆ ವಿವಿಧ ಆಕರ್ಷಕ ಬಹುಮಾನಗಳು ಕಾಯುತ್ತಲಿವೆ. ರಾಫ್ಲ್‍ಡ್ರಾವನ್ನು ಹಮ್ಮಿಕೊಳ್ಳಲಾಗಿದ್ದು, ಪ್ರತಿಯೊಬ್ಬರಿಗೂ ಬಹುಮಾನವನ್ನು ಗೆಲ್ಲುವ ಅವಕಾಶವನ್ನು ಕಲ್ಪಿಸಲಾಗಿದೆ.

ಎಂಪಿಎಲ್ ಹಬ್ಬದಲ್ಲಿ ಭಾಗವಹಿಸಲು ಅಪರಾಹ್ನ 1.00 ಗಂಟೆಗೆ ಸೈಕಲಿಗರದಂಡು ಸ್ವಚ್ಛತೆ ಮತ್ತು ಇಂಧನ ಉಳಿತಾಯದ ಸಂದೇಶಗಳನ್ನು ಹೊತ್ತುಕೊಂಡು ಮಣಿಪಾಲದಿಂದ ಹೊರಟು ಕಟಪಾಡಿ- ಶಂಕರಪುರ- ಪಡುಬಿದ್ರಿ ಮಾರ್ಗವಾಗಿ ಸಾಗಿ ಪಣಂಬೂರು ಕರಾವಳಿ ತೀರವನ್ನು ಸೇರಲಿದೆ. ಈ ಕಾರ್ಯಕ್ರಮವು ಶಂಕರಪುರ ರೋಟರ್ಯಾಕ್ಟ್‍ಕ್ಲಬ್, ಉಡುಪಿ ಸೈಕ್ಲಿಸ್ಟ್‍ಕ್ಲಬ್, ಮಣಿಪಾಲ ವಿಶ್ವವಿದ್ಯಾಲಯ ಕ್ರೀಡಾ ಕೌನ್ಸಿಲ್ ಇವರ ಸಂಯಕ್ತ ಆಸರೆಯಲ್ಲಿ ಜರಗಲಿದೆ. ಅತ್ತ ಮಂಗಳೂರು ನೆಹರೂ ಮೈದಾನದಿಂದ ಎಂಪಿಎಲ್‍ನಲ್ಲಿ ಭಾಗವಹಿಸುವ ಆಟಗಾರರು, ಕ್ರಿಕೆಟ್ ಪ್ರೇಮಿಗಳನ್ನೊಳಗೊಂಡ ಬೈಕ್‍ರ್ಯಾಲಿ ಅಪರಾಹ್ನ 3.30ಕ್ಕೆ ಹೊರಟು ಪಣಂಬೂರು ಕಡಲ ತೀರವನ್ನು ಸೇರಲಿದೆ.

ಕಡಲ ತೀರದಲ್ಲಿ ಸಂಜೆ 5.30ಕ್ಕೆ ಆರಂಭವಾಗಲಿರುವ ಸಭಾ ಕಾರ್ಯಕ್ರಮದಲ್ಲಿ ಎಂಪಿಎಲ್ ಟ್ರೋಫಿಯ ಅನಾವರಣವಾಗಲಿದೆ. ಈ ಕಾರ್ಯಕ್ರಮದಲ್ಲಿ ದೇಶ-ವಿದೇಶಗಳ ಗಣ್ಯರು ಭಾಗವಹಿಸಲಿದ್ದಾರೆ.


Spread the love

Exit mobile version