ನವದೆಹಲಿಯ ಮೋತಿಭಾಗ್ ಮೆಟ್ರೋ ಸ್ಟೇಷನ್‌ಗೆ ಸರ್ ಎಂ. ವಿಶ್ವೇಶ್ವರಯ್ಯ ನಾಮಕರಣ

Spread the love

ನವದೆಹಲಿಯ ಮೋತಿಭಾಗ್ ಮೆಟ್ರೋ ಸ್ಟೇಷನ್‌ಗೆ ಸರ್ ಎಂ. ವಿಶ್ವೇಶ್ವರಯ್ಯ ನಾಮಕರಣ

ನವದೆಹಲಿ: ದೆಹಲಿ ಕರ್ನಾಟಕ ಸಂಘದ ಸುಸಜ್ಜಿತ ಸಾಂಸ್ಕೃತಿಕ ಸಮುಚ್ಛಯದ ಅಂಚಿನಲ್ಲಿ ಇರುವ ಮೋತಿಭಾಗ್ ಮೆಟ್ರೋ ಸ್ಟೇಷನ್‌ಗೆ ಸರ್ ಎಂ ವಿಶ್ವೇಶ್ವರಯ್ಯ ಮೋತಿಭಾಗ್ ಎಂಬ ಹೆಸರನ್ನು ನೀಡಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕನ್ನಡಿಗ ಸಾಧಕರೊಬ್ಬರ ಹೆಸರು ಅಜರಾಮರವಾಗಲಿದೆ ಎಂದು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ವಸಂತ ಶೆಟ್ಟಿ ಬೆಳ್ಳಾರೆ ಅವರು ಇಂದು ಇಲ್ಲಿ ಹೇಳಿದರು.

ನವದೆಹಲಿಯ ಮಜ್ಲಿಸ್ ಪಾರ್ಕ್‌ನಿಂದ ಶಿವವಿಹಾರ್‌ವರೆಗಿನ ೫೯ ಕಿಲೋ ಮೀಟರ್ ಉದ್ದದ ಪಿಂಕ್‌ಲೈನ್ ಮೆಟ್ರೋದ ದಾರಿಯಲ್ಲಿ ಬರುವ ಮೋತಿಭಾಗ್ ಸ್ಟೇಷನ್ ಬಹಳ ಮುಖ್ಯವಾದ ಮೆಟ್ರೋ ಸ್ಟೇಷನ್ ಆಗಿದ್ದು ಅದರ ನಾಮಕರಣವನ್ನು ಸರ್ ಎಂ ವಿಶ್ವೇಶ್ವರಯ್ಯ ಮೋತಿಭಾಗ್ ಎಂದಿಡಲು ದೆಹಲಿ ಕರ್ನಾಟಕ ಸಂಘವು ಕೇಂದ್ರ ಸರಕಾರ ಮತ್ತು ದೆಹಲಿ ಮೆಟ್ರೋ ರೈಲು ಕಾರ್ಪೋರೇಶನ್ ಜತೆ ಅನೇಕ ಪತ್ರವ್ಯವಹಾರವನ್ನು ಮಾಡಿದಲ್ಲದೇ, ಕನ್ನಡಿಗರೊಬ್ಬರ ಹೆಸರನ್ನಿಡಲು ತೀವ್ರವಾದ ಗುಣಾತ್ಮಕ ಲಾಬಿಯನ್ನು ನಡೆಸಿದೆ ಎಂದು ಅವರು ತಿಳಿಸಿದರು.

ಆರಂಭದಲ್ಲಿ ಮೆಟ್ರೋ ರೈಲು ನಿಲ್ದಾಣಗಳಿಗೆ ಆ ಪರಿಸರದ ಹೆಸರನ್ನು ಬಿಟ್ಟು ಇತರ ಹೆಸರನ್ನು ನೀಡುವ ಸಂಪ್ರದಾಯವಿರಲಿಲ್ಲ. ಆದರೆ ಸಂಘದ ಸಮುಚ್ಛಯದ ಸಮೀಪದಲ್ಲಿಯೇ ಹಾದುಹೋಗುವ ಈ ಮೆಟ್ರೋ ರೈಲಿನ ನಿಲ್ದಾಣಕ್ಕೆ ದೆಹಲಿ ಕರ್ನಾಟಕ ಸಂಘ ನಿಲ್ದಾಣ ಎಂಬ ಹೆಸರಿಡಬೇಕು ಎಂದು ಕೂಡಾ ಒತ್ತಾಯಿಸಲಾಗಿತ್ತು. ಆದರೆ ದೆಹಲಿ ಮೆಟ್ರೋ ರೈಲು ಕಾರ್ಪೋರೇಶನ್‌ನ ನಿಯಮದಂತೆ ಸಂಘದ ಹೆಸರು ಅಲ್ಲದಿದ್ದರೆ, ಕನ್ನಡಿಗ ಸಾಧಕನೊಬ್ಬನ ಹೆಸರನ್ನು ಇಡಬೇಕು ಎಂದು ಮಾಜಿ ಕೇಂದ್ರ ಸಚಿವ ಶ್ರೀ ಆಸ್ಕರ್ ಫೆರ್ನಾಂಡಿಸ್ ಅವರ ಮೂಲಕ ೨೦೧೩ರಲ್ಲಿ ಅಂದಿನ ಕೇಂದ್ರ ಸರಕಾರದ ನಗರಾಡಳಿತ ಸಚಿವ ಶ್ರೀ ಕಮಲ್‌ನಾಥ್ ಅವರಿಗೆ ಮನವಿಯನ್ನು ಸಲ್ಲಿಸಲಾಗಿತ್ತು. ಕೇಂದ್ರದಲ್ಲಿ ಸರಕಾರವು ಬದಲಾದ ನಂತರ ಮತ್ತೆ ಪುನಃ ಸರಕಾರದ ಅಂದಿನ ನಗರಾಡಳಿತ ಸಚಿವರಾಗಿದ್ದ ಶ್ರೀ ವೆಂಕಯ್ಯ ನಾಯ್ಡು ಅವರಿಗೆ ಮನವಿಯನ್ನು ಸಲ್ಲಿಸಲಾಯಿತು. ಸಂಘದ ಕಾರ್ಯಕಾರಿ ಸಮಿತಿಯು ನಿರಂತರವಾಗಿ ಕೇಂದ್ರ ಸಚಿವರನ್ನು ಒತ್ತಾಯಿಸಿದ ಪರಿಣಾಮವಾಗಿ ಮೆಟ್ರೋ ಸ್ಟೇಷನ್‌ಗೆ ಸರ್ ಎಂ ವಿಶ್ವೇಶ್ವರಯ್ಯ ಅವರ ಹೆಸರು ಬಂದಿದೆ. ಇದಕ್ಕಾಗಿ ಸಂಘದ ಮಾಜೀ ಅಧ್ಯಕ್ಷ ಹಾಗೂ ಮಾಜೀ ಪ್ರಿನ್ಸಿಪಲ್ ಇನ್‌ಫಾರ್ಮೇಶನ್ ಆಫೀಸರ್ ದಿವಂಗತ ಐ. ರಾಮಮೋಹನ್ ರಾವ್ ಅವರು ಸೇರಿದಂತೆ ಅನೇಕರು ಸಲಹೆ ಮತ್ತು ಪ್ರೋತ್ಸಾಹವನ್ನು ನೀಡಿದ್ದಾರೆ ಎಂದು ಶ್ರೀ ವಸಂತ ಶೆಟ್ಟಿ ಅವರು ವಿವರಿಸಿದರು.

ಸಂಘದ ಬಾಗಿಲಿಗೆ ಮೆಟ್ರೋ ರೈಲಿನ ಓಡಾಟದ ಆರಂಭ ಸದ್ಯದಲ್ಲಿಯೇ ಆಗಲಿದೆ. ಇದೇ ಎಪ್ರಿಲ್ ೨೪ರಿಂದ ಟ್ರಯಲ್ ರನ್ ಆರಂಭವಾಗಿದ್ದು, ಮೆಟ್ರೋ ಓಡಾಟಕ್ಕೆ ಎಲ್ಲಾ ಏರ್ಪಾಡುಗಳು ನಡೆದಿವೆ. ಅಲ್ಲದೇ ಮೆಟ್ರೋ ಸ್ಟೇಷನ್‌ನ ಹೆಸರು ಕೂಡಾ ಹಾಕಲಾಗಿದೆ. ನವದೆಹಲಿಯ ಪ್ರಮುಖ ರಸ್ತೆಯೊಂದರಲ್ಲಿ ಪ್ರಯಾಣಿಸುತ್ತಿರುವಾಗ ಸರ್ ಎಂ ವಿಶ್ವೇಶ್ವರಯ್ಯ ಅವರ ಹೆಸರನ್ನು ನೋಡುವುದೇ ಕನ್ನಡಿಗರಾದ ನಮಗೆಲ್ಲ ಬಹಳ ಹೆಮ್ಮೆಯ ಸಂದರ್ಭವಾಗಿದೆ. ರಾಷ್ಟ್ರಪತಿ ಭವನ, ಪಾರ್ಲಿಮೆಂಟು, ವಿದೇಶಿ ರಾಯಭಾರಿ ಕಚೇರಿಗಳು, ವಿವಿಧ ರಾಜ್ಯಗಳ ಭವನಗಳು, ಕೇಂದ್ರ ಸಚಿವರ ಮತ್ತು ಸರಕಾರದ ಉನ್ನತಾಧಿಕಾರಿಗಳ ನಿವಾಸಗಳಿರುವ ಪ್ರದೇಶದಿಂದ ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಮುಖ ರಸ್ತೆಯಾದ ರಾವ್ ತುಲಾರಾಮ್ ಮಾರ್ಗವು ಸರ್ ಎಂ ವಿಶ್ವೇಶ್ವರಯ್ಯ ಮೋತಿಭಾಗ್ ಮೆಟ್ರೋ ನಿಲ್ದಾಣ ಮತ್ತು ದೆಹಲಿ ಕರ್ನಾಟಕ ಸಂಘದ ಸಾಂಸ್ಕೃತಿಕ ಸಮುಚ್ಛಯದಿಂದಲೇ ಆರಂಭಗೊಳ್ಳುತ್ತದೆ.

ನವದೆಹಲಿಯಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಅವರ ಹೆಸರನ್ನು ಮೆಟ್ರೋ ನಿಲ್ದಾಣಕ್ಕೆ ನೀಡಿ ಕನ್ನಡಿಗರ ಕನ್ನಡದ ಅಸ್ಮಿತತೆಯನ್ನು ರಾಷ್ಟ್ರ ರಾಜಧಾನಿಯಲ್ಲಿ ಮೆರೆಯುವಂತೆ ಮಾಡಿದ ಕೇಂದ್ರ ಸರಕಾರ, ಸರಕಾರದ ವಿವಿಧ ಸಚಿವರು, ಕರ್ನಾಟಕದ ಸಂಸತ್ ಸದಸ್ಯರು, ಮಾಧ್ಯಮದ ಮಿತ್ರರು ಮತ್ತು ದೆಹಲಿ ಕರ್ನಾಟಕ ಸಂಘದ ಎಲ್ಲಾ ಹಿತಚಿಂತಕರಿಗೆ ಸಂಘದ ಕಾರ್ಯಕಾರಿ ಸಮಿತಿಯು ತನ್ನ ಆಭಾರವನ್ನು ವ್ಯಕ್ತಪಡಿಸುತ್ತದೆ.

ರಾಷ್ಟ್ರ ರಾಜಧಾನಿಯಲ್ಲಿ ಕನ್ನಡದ ಸಾಂಸ್ಕೃತಿಕ ಕುರುಹನ್ನು ಅಚ್ಚಳಿಯದಂತೆ ಮಾಡುವ ಪ್ರಯತ್ನವು ತಾನು ಅಧ್ಯಕ್ಷನಾಗಿರುವ ಸಂದರ್ಭದಲ್ಲಿ ನಡೆದಿರುವುದು ತನಗೆ ಹೆಮ್ಮೆ ಮತ್ತು ಸಂತೋಷದಾಯಕ ವಿಚಾರವಾಗಿದೆ ಎಂದು ಅವರು ಹೇಳಿದರು. ದೆಹಲಿ ಕರ್ನಾಟಕ ಸಂಘವು ಕಳೆದ ನಾಲ್ಕು ವರ್ಷಗಳಲ್ಲಿ ದೆಹಲಿಯಲ್ಲಿ ದಾಖಲೆಯ ಕನ್ನಡ ಕಾರ್ಯಕ್ರಮಗಳನ್ನು ನಡೆಸಿರುವುದರ ಜತೆಗೆ ಇಂತಹ ದೂರದೃಷ್ಟಿಯ ಕಾರ್ಯಕ್ರಮಗಳನ್ನು ಮಾಡುತ್ತಿರುವುದರಿಂದ ಸಂಘವು ಕೇವಲ ದೆಹಲಿ ಮತ್ತು ಸುತ್ತಲಿನ ಕನ್ನಡಿಗರ ಸಾಂಸ್ಕೃತಿಕ ಕೇಂದ್ರವಾಗಿರದೇ ಕರ್ನಾಟಕದ ನುಡಿಗಳ, ನಾಡಿನ ಜನ, ನೆಲ ಮತ್ತು ಜಲದ ವಿಚಾರವಾಗಿಯೂ ಗಂಭೀರವಾದ ಚಿಂತನೆಗಳನ್ನು ಮಾಡುವ ಸಾಮಾಜಿಕ ಕೇಂದ್ರವಾಗಿದೆ ಎಂದು ಶ್ರೀ ವಸಂತ ಶೆಟ್ಟಿ ಬೆಳ್ಳಾರೆ ಅವರು ವಿವರಿಸಿದರು.

ದೆಹಲಿ ಕರ್ನಾಟಕ ಸಂಘವು ತನ್ನ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ದೇಶದ ಇನ್ನಿತರ ಕನ್ನಡ ಸಂಘಗಳಿಗಿಂತ ವಿಭಿನ್ನವಾಗಿದೆ. ನವದೆಹಲಿಯ ಪ್ರತಿಷ್ಟಿತ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಕನ್ನಡ ಭಾಷಾ ಪೀಠದ ಸ್ಥಾಪನೆ, ಕರ್ನಾಟಕದಿಂದ ಐಎಎಸ್ ಪರೀಕ್ಷೆ ಬರೆಯಲು ಬರುವ ಯುವಕರಿಗೆ ತಾತ್ಕಾಲಿಕ ವಾಸ್ತವ್ಯ, ಪ್ರತಿಷ್ಟಿತ ಶಿವರಾಮ ಕಾರಂತ ಪ್ರಶಸ್ತಿ, ಡಾ. ಸರೋಜಿನಿ ಮಹಿಷಿ ಪ್ರಶಸ್ತಿ, ರಂಗಭೂಮಿ ಪ್ರಶಸ್ತಿ, ನವದೆಹಲಿಯಲ್ಲಿರುವ ಪ್ರತಿಭಾವಂತ ಹಾಗೂ ಆರ್ಥಿಕವಾಗಿ ಅನಾನುಕೂಲದಲ್ಲಿರುವ ಕನ್ನಡ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್, ಪ್ರತಿವಾರ ನುರಿತ ಕನ್ನಡಿಗ ವೈದ್ಯಕೀಯ ತಜ್ಞರಿಂದ ಅಪೇಕ್ಷಿತರಿಗೆ ಉಚಿತ ಸಲಹೆಯ ಅನುಕೂಲತೆ, ಇತರ ಕನ್ನಡ ಸಂಸ್ಥೆಗಳಿಗೆ ರಿಯಾಯತಿ ದರದಲ್ಲಿ ಸಂಘದ ಸಭಾಂಗಣವನ್ನು ಉಪಯೋಗಿಸಲು ದೊರಕಿಸುವುದು, ನಾಡಿನ ವಿಶೇಷವಾಗಿ ಗ್ರಾಮೀಣ ಪ್ರದೇಶದ ಹಾಗೂ ದೆಹಲಿಯ ಚಿತ್ರಕಲಾವಿದರಿಗೆ ಸಂಘದ ಆರ್ಟ್ ಗ್ಯಾಲರಿಯನ್ನು ನೀಡುವುದು ಮುಂತಾದ ಜನಪರವಾದ ಹಾಗೂ ಕರ್ನಾಟಕದ ಸುಸಂಸ್ಕೃತಿಯನ್ನು ಬಿಂಬಿಸುವ ಅನೇಕ ಕಾರ್ಯಕ್ರಮಗಳನ್ನು ದೆಹಲಿ ಕರ್ನಾಟಕ ಸಂಘವು ಹಮ್ಮಿಕೊಂಡಿದೆ ಎಂದು ಶ್ರೀ ವಸಂತ ಶೆಟ್ಟಿ ಬೆಳ್ಳಾರೆ ಅವರು ತಿಳಿಸಿದರು.

ರಾಜ್ಯದಲ್ಲಿ ಹೊಸ ಸರಕಾರವು ಅಧಿಕಾರವನ್ನು ಸ್ವೀಕರಿಸಿದ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಅಭಿನಂದಿಸಿದ ದೆಹಲಿ ಕರ್ನಾಟಕ ಸಂಘದ ಕಾರ್ಯಕಾರಿ ಸಮಿತಿಯು ನವದೆಹಲಿಯಲ್ಲಿ ಕರ್ನಾಟಕದ ಕೆಲಸಗಳನ್ನು ನಡೆಸಲು ರಾಜ್ಯ ಸರಕಾರವು ಮತ್ತಷ್ಟು ಪ್ರೋತ್ಸಾಹವನ್ನು ನೀಡುವ ಭರವಸೆಯನ್ನು ಹೊಂದಿದೆ. ಮುಖ್ಯಮಂತ್ರಿಯಲ್ಲದೇ ಇತರ ಮಂತ್ರಿಗಳನ್ನು ಕೂಡಾ ಸಂಪರ್ಕಿಸಿ ಸಂಘದ ಮುಂದಿನ ಯೋಜನೆಗಳ ಕುರಿತು ಪ್ರಾಥಮಿಕ ವಿವರಗಳನ್ನು ನೀಡಲಾಗುವುದು. ದೆಹಲಿಯಲ್ಲಿ ವೃತ್ತಿಯಲ್ಲಿರುವ ಮಹಿಳೆಯರಿಗೆ ಹಾಸ್ಟೆಲ್ ವ್ಯವಸ್ಥೆ ಮೊದಲಾದ ವಿಸ್ತೃತ ಯೋಜನೆಗಳನ್ನು ಹಾಕಲಾಗಿದೆ ಎಂದು ಅವರು ತಿಳಿಸಿದರು.

ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ೧೯೧೨ರಲ್ಲಿ ಮೈಸೂರು ಸಂಸ್ಥಾನದ ದಿವಾನರಾಗಿ ನೇಮಕಗೊಂಡರು. ಅವರು ನಿರ್ಮಿಸಿದ ಕೃಷ್ಣರಾಜ ಸಾಗರ ಅಣೆಕಟ್ಟು, ಮೈಸೂರು ವಿಶ್ವವಿದ್ಯಾಲಯ, ಮೈಸೂರು ಸಕ್ಕರೆ ಕಾರ್ಖಾನೆ, ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಬೆಂಗಳೂರಿನಲ್ಲಿ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್), ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಕನ್ನಡ ಸಾಹಿತ್ಯ ಪರಿಷತ್, ಜೋಗದ ಜಲವಿದ್ಯುತ್ ಯೋಜನೆ ವಿಶ್ವೇಶ್ವರಯ್ಯನವರನ್ನು ಅಜರಾಮರನನ್ನಾಗಿಸಿವೆ. ಅವರು ಕೇವಲ ಮೈಸೂರು ಪ್ರಾಂತ್ಯವಲ್ಲದೇ ದೇಶದ ವಿವಿದೆಡೆ ಹಲವಾರು ದೂರದೃಷ್ಟಿಯ, ಉನ್ನತ ತಂತ್ರಜ್ಞಾನಗಳ ಇಂಜಿನೀಯರಿಂಗ್ ಕಾರ್ಯಗಳನ್ನು ನೆರವೇರಿಸಿದ್ದಾರೆ. ಬ್ರಿಟಿಷ್ ಸರಕಾರವು ಅವರಿಗೆ ನೈಟ್ ಪದವಿಯನ್ನು ನೀಡಿದರೆ ಭಾರತ ಸರಕಾರವು ಅತ್ಯಂತ ಗೌರವಯುತವಾದ ಭಾರತರತ್ನ ಪ್ರಶಸ್ತಿಯನ್ನು ನೀಡಿದೆ. ದೆಹಲಿಯಲ್ಲಿ ಕರ್ನಾಟಕದ ಪ್ರಾತಿನಿಧ್ಯವನ್ನು ಕಲೆ, ಸಂಸ್ಕೃತಿ, ಶಿಕ್ಷಣ, ಭಾಷೆ, ಸಾಹಿತ್ಯದ ಮೂಲಕ ಬೆಳೆಸುತ್ತಿರುವ ದೆಹಲಿ ಕರ್ನಾಟಕ ಸಂಘವು ಕರ್ನಾಟಕದ ಮಹಾನ್ ಚೇತನವನ್ನು ದೆಹಲಿಯಲ್ಲಿ ಶಾಶ್ವತವನ್ನಾಗಿಸಲು ಮಾಡಿದ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದೆ.


Spread the love
1 Comment
Inline Feedbacks
View all comments
drona
6 years ago

Wishvarayya can now be correctly pronounced by a certain resident from now on.