ನವೆಂಬರ್ 11ಕ್ಕೆ ಮಂಗಳೂರಿಗೆ ಪರಿವರ್ತನಾ ಯಾತ್ರೆ:-ವೇದವ್ಯಾಸ್ ಕಾಮತ್
ಮಂಗಳೂರು: ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ನವೆಂಬರ್ 2 ರಂದು ಬೆಂಗಳೂರಿನಿಂದ ಪ್ರಾರಂಭವಾದ ಭಾರತೀಯ ಜನತಾ ಪಾರ್ಟಿಯ ನವಕರ್ನಾಟಕ ಪರಿವರ್ತನಾ ಯಾತ್ರೆ ಮಂಗಳೂರು ನಗರಕ್ಕೆ ಇದೇ ನವೆಂಬರ್ 11ರ ಸಂಜೆ 5 ಗಂಟೆಗೆ ಕೇಂದ್ರ (ನೆಹರೂ) ಮೈದಾನಕ್ಕೆ ತಲುಪಿ ಬೃಹತ್ ಸಮಾವೇಶಕ್ಕೆ ಸಾಕ್ಷಿಯಾಗಲಿದೆ.
ರಾಜ್ಯದಲ್ಲಿ ಸಿದ್ಧರಾಮಯ್ಯ ಸರ್ಕಾರದ ವ್ಯಾಪಕ ಭ್ರಷ್ಟಾಚಾರ, ಅವ್ಯವಹಾರ, ಹಗರಣ, ತುಷ್ಟೀಕರಣ ನೀತಿಯನ್ನು ರಾಜ್ಯದ ಮೂಲೆ ಮೂಲೆಗೆ ತಲುಪಿಸಲು ಈ ಯಾತ್ರೆ ಸಿದ್ಧವಾಗಿದೆ.
ಧರ್ಮಗಳ ಮಧ್ಯೆ, ಜಾತಿಗಳ ಮಧ್ಯೆ ವೈಷಮ್ಯ ತಂದಿಟ್ಟಿರುವ ಕಾಂಗ್ರೆಸ್ ಸರ್ಕಾರ, ಜನಸಾಮಾನ್ಯರಿಗೆ ನೆಮ್ಮದಿಯ ಬದುಕೆಂದರೆ ಕನಸಿನ ಮಾತು ಎನ್ನುವ ವಾತಾವರಣ ನಿರ್ಮಿಸಿದೆ.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಮೋದಿ ಸರ್ಕಾರ ಇರುವುದರಿಂದ ರಾಜ್ಯದ ಅಭಿವೃದ್ಧಿಗೆ ಹೆಚ್ಚಿನ ಅವಕಾಶ ಇತ್ತು. ಆದರೆ ಸಿದ್ಧರಾಮಯ್ಯ ಸರ್ಕಾರ ಇದನ್ನು ಸದುಪಯೋಗ ಪಡಿಸಿಕೊಳ್ಳದೇ ಕೇವಲ ರಾಜಕೀಯ ಮಾಡಿ ರಾಜ್ಯದ ಅಭಿವೃದ್ಧಿಗೆ ಅಡ್ಡಗಾಲು ಹಾಕಿದ್ದಾರೆ.
ಈ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವುದು ನಿಶ್ಚಿತ. ಕೇಂದ್ರ ಸರ್ಕಾರದ ಹೊಂದಾಣಿಕೆಯೊಂದಿಗೆ ರಾಜ್ಯದ ಅಭಿವೃದ್ಧಿಗೆ ಶ್ರಮಿಸುವುದಕ್ಕೆ ನಮ್ಮ ಪ್ರಥಮ ಆದ್ಯತೆ. ರಾಜ್ಯದ ಎಲ್ಲಾ ವರ್ಗದ ಜನಸಾಮಾನ್ಯರ ಏಳಿಗೆಯೇ ನಮ್ಮ ಧ್ಯೇಯ. ಭಾರತದ ಜೊತೆಗೆ ಕರ್ನಾಟಕವೂ ಯಶಸ್ಸಿನ ಶಿಖರವೇರುವುದನ್ನು ನೋಡುವ ಕಾಲ ಬಂದಿದೆ. ಅದರ ಮುನ್ನುಡಿಯೇ ನವಕರ್ನಾಟಕ ಪರಿವರ್ತನಾ ಯಾತ್ರೆ.
ಈ ಯಾತ್ರೆಯಲ್ಲಿ ಕೇಂದ್ರದ ಸಚಿವರುಗಳು, ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ, ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ, ಅರವಿಂದ ಲಿಂಬಾವಳಿ, ಸಿ.ಟಿ.ರವಿ, ರವಿ ಕುಮಾರ್, ದಕ್ಷಿಣ ಕನ್ನಡ ಜಿಲ್ಲೆ ಸಂಸದರಾದ ನಳಿನ್ ಕುಮಾರ್ ಕಟೀಲ್, ಸೇರಿದಂತೆ ಹಲವು ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.
ಬಿಜೆಪಿ ಕಾರ್ಯಕರ್ತರು ತಮ್ಮ ವಾರ್ಡ್ ಹಾಗೂ ಮಂಗಳೂರು ನಗರವನ್ನು ಬ್ಯಾನರ್, ಫ್ಲೆಕ್ಸ್, ಪಕ್ಷದ ಧ್ವಜಗಳಿಂದ ಸಿಂಗರಿಸಿ ಯಾತ್ರೆಯ ರಥವನ್ನು ಅದ್ಧೂರಿಯಾಗಿ ಸ್ವಾಗತಿಸಬೇಕು. ನಂತರ ನಡೆಯಲಿರುವ ಬೃಹತ್ ಸಮಾವೇಶಕ್ಕೆ ಪಕ್ಷದ ಹಿತೈಷಿಗಳು, ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಮಂಗಳೂರಿನ ನಾಗರಿಕರು ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇನೆ ಎಂದು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷರು ಡಿ.ವೇದವ್ಯಾಸ್ ಕಾಮತ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.