ನಾಗರಿಕರಿಗಾಗಿ ಆನ್‌ಲೈನ್ ಶೀಘ್ರ ದೂರು ವಿಭಾಗ ಪ್ರಾರಂಭ ; ಅಣ್ಣಾಮಲೈ
ತರೀಕೆರೆ: ಭದ್ರತೆ ಹಾಗೂ ಶಾಂತಿ ಇಲ್ಲದಿದ್ದರೆ ಪೊಲೀಸ್ ಇಲಾಖೆ ಇದ್ದು ವ್ಯರ್ಥ. ಜನಸಂಪರ್ಕ ಸಭೆಗಳಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಗೆ ಸಹಕಾರಿಯಾ ಗುತ್ತದೆ. ಶಕ್ತಿಯುತ ಹಾಗೂ ಸಂವೇದ ನಾಯುತ ಪೊಲೀಸ್ ವ್ಯವಸ್ಥೆಯಿಂದ ಸಾರ್ವಜನಿಕರು ಒಳ್ಳೆಯ ವ್ಯವಸ್ಥೆಯನ್ನೇ ನಿರೀಕ್ಷಿಸುತ್ತಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸೋಮವಾರ ನಡೆದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.
‘ಜಮೀನು ವ್ಯಾಜ್ಯಕ್ಕೆ ಸಂಬಂಧಪಟ್ಟ ದೂರುಗಳು ಸಾಕಷ್ಟು ಬರುತ್ತಿದ್ದು ನಾಗರಿಕರು ಇವುಗಳನ್ನು ಕೋರ್ಟ್‌ನಲ್ಲಿ ಬಗೆಹರಿಸಿಕೊಳ್ಳಬೇಕು. ಪೊಲೀಸರು ರೋಬೋಟ್ ಗಳಂತೆ ಕಾನೂನು ಹೇಳಿಕೊಂಡು ಕೆಲಸ ಮಾಡದೇ, ಕೆಲವು ದೂರುಗಳನ್ನು ಮಾನವೀಯ ದೃಷ್ಟಿಯಲ್ಲಿ ಬಗೆಹರಿಸಿಕೊಡಬೇಕಿದೆ. ದಿನನಿತ್ಯದ ಚಟುವಟಿಕೆ ತಿಳಿಯಲು ಎಲ್ಲಾ ಠಾಣೆ ಗಳಲ್ಲಿ ಬೆಳಿಗ್ಗೆ 9 ಗಂಟೆಗೆ ವೈರ್‌ಲೆಸ್‌ನಲ್ಲಿ ಮಾತನಾಡುವ ವ್ಯವಸ್ಥೆ ಆರಂಭಿಸಲಾ ಗುವುದು. ನಾಗರಿಕರಿಗಾಗಿ ಆನ್‌ಲೈನ್ ದೂರು ವಿಭಾಗ ಪ್ರಾರಂಭಿಸಲಾ ಗುವುದು’ ಎಂದರು.
‘ತರೀಕೆರೆಯಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ವಾಹನ ಸವಾರರ ಮೇಲೆ ಕಡೂರಿನಲ್ಲಿ 2016 ನೇ ಸಾಲಿನಲ್ಲಿ 6,636 ಪ್ರಕರಣಗಳು ದಾಖಲಾಗಿದ್ದರೆ ತರೀಕೆರೆಯಲ್ಲಿ 2,248 ಮಾತ್ರ ದಾಖಲಾಗಿದೆ. ವಾಹನ ಸವಾ ರರು ಯಾರೊಬ್ಬರು ಹೆಲ್ಮೆಟ್ ಧರಿಸಲ್ಲ. ರಸ್ತೆಯಲ್ಲಿ ಪೊಲೀಸರು ಹೆಚ್ಚಾಗಬೇಕು. ದಿನವೊಂದಕ್ಕೆ 100 ಕೇಸುಗಳನ್ನು ದಾಖಲಿಸಬೇಕು’ ಎಂದು ಅವರು ಸೂಚಿಸಿದರು.
ಸಾರ್ವಜನಿಕರಿಂದ ಬಂದ ಸಂಚಾರ ವ್ಯವಸ್ಥೆಯ ದೂರಿನ ಬಗ್ಗೆ ಉತ್ತರಿಸಿ, ‘15ದಿನಗಳಲ್ಲಿ ಸಂಚಾರ ವ್ಯವಸ್ಥೆ ಸುಗಮಗೊಳಿಸಲಾಗುವುದು. ಅಪಘಾ ತಕ್ಕೆ ಕಾರಣವಾಗುವ ಇಲಾಖೆಯ ಅಧಿಕಾರಿ ಮೇಲೆ ಕೇಸು ದಾಖಲಿಸ ಲಾಗುವುದು’ ಎಂದರು.
ಪುರಸಭೆ ಉಪಾಧ್ಯಕ್ಷ ಅಶೋಕ್ ಕುಮಾರ್, ಎಂಎಡಿಬಿ ಮಾಜಿ ಅಧ್ಯಕ್ಷ ಎನ್.ಮಂಜುನಾಥ್, ಡಿಸಿಸಿ ಬ್ಯಾಂಕ್ ನಿರ್ದೆಶಕ ಟಿ.ಎಲ್.ರಮೇಶ್ , ನಿವೃತ್ತ ಯೋಧ ಶ್ರೀನಿವಾಸ್, ಕರವೇ ಮುಖಂಡ ವಿಕಾಸ್, ಪುರಸಭೆ ಮಾಜಿ ಅಧ್ಯಕ್ಷ ಟಿ.ಕೆ. ರಮೇಶ್, ದಸಂಸ ಮುಖಂಡರಾದ ಬಾಲರಾಜ್, ನಾಗರಾಜು ಸಮಸ್ಯೆಗಳನ್ನು ಹೇಳಿಕೊಂಡರು.
ಡಿವೈಎಸ್‍ಪಿ ತಿರುಮಲೇಶ್, ಪೋಲಿಸ್ ಅಧಿಕಾರಿಗಳಾದ ತಿಪ್ಪೇಸ್ವಾಮಿ, ದೇವ ರಾಜು, ಇಮ್ರಾನ್ ಅಹಮದ್ ಇದ್ದರು.