ನಾಗರಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸಿ -ಬೆಂಗಳೂರು ನಗರ ಪೊಲೀಸ್ ಆಯುಕ್ತ
ಬೆಂಗಳೂರು: ನಾಗರಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸಿ, ನೆನ್ನೆ ಹಿಡಿದಿರುವ ವಾಹನಗಳನ್ನು ಬಿಟ್ಟು ಕಳುಹಿಸಿ, ನಾಳೆಯಿಂದ ಜಪ್ತಿ ಮಾಡುವ ವಾಹನಗಳನ್ನು ಲಾಕ್ ಡೌನ್ ಮುಗಿಯುವವರೆಗೂ ಬಿಡಬೇಡಿ ಎನ್ನುವುದು ಸೇರಿದಂತೆ ಕೊರೊನಾ ಸುರಕ್ಷೆಗಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ನಗರ ಪೊಲೀಸರಿಗೆ 15 ಪ್ರಮುಖ ಸೂಚನೆಗಳನ್ನು ನೀಡಿದ್ದಾರೆ.
ಇಂದು ಬೆಳಗ್ಗೆ ವೈರ್ ಲೆಸ್ ನಲ್ಲಿ ಸಂದೇಶ ನೀಡಿರುವ ಪೊಲೀಸ್ ಆಯುಕ್ತರು, ಪ್ರತಿಯೊಂದು ಸೂಚನೆಯನ್ನು ಸ್ಪಷ್ಟವಾಗಿ ವಿವರಿಸಿದ್ದಾರೆ. ಜೊತೆ ಪೊಲೀಸರ ಕಾರ್ಯವನ್ನು ಶ್ಲಾಘಿಸಿದ್ದು, ಮುಂದೆಯೂ ಇದನ್ನೇ ಮುಂದುವರೆಸಬೇಕು ಹಾಗೂ ತಮ್ಮ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಆಯುಕ್ತರು ಸೂಚನೆ ನೀಡಿದ್ದಾರೆ.
ಪೊಲೀಸ್ ಆಯುಕ್ತರ ಸೂಚನೆಗಳು
1 ಹಾಲು, ಪೆಪರ್, ತರಕಾರಿ ಸರಬರಾಜು ಮತ್ತು ಎಟಿಎಂಗೆ ಹಣ ತುಂಬುವ ವಾಹನಗಳಿಗೆ ಅಡ್ಡಿ ಇಲ್ಲದಂತೆ ವ್ಯವಸ್ಥೆ ಮಾಡಬೇಕು.
2 ತರಕಾರಿ, ದಿನ, ಹಣ್ಣು ಮತ್ತು ದಿನನಿತ್ಯದ ಅಂಗಡಿಗಳಲ್ಲಿ ಸೋಷಿಯಲ್ ಡಿಸ್ಟೇನ್ಸ್ ನ್ನು ನಿರ್ವಹಣೆ ಮಾಡಲು ಸಿಮೇಸುಣ್ಣದಲ್ಲಿ ವೃತ್ತ ಬರೆಯದೆ, ಪೈಂಟಿಂಗ್ ಮಾಡಿಸಬೇಕು ಹಾಗೂ ಅದು ಪಾಲನೆಯಾಗುವಂತೆ ನೋಡಿಕೊಳ್ಳಬೇಕು.
3 ಎಲ್ಲಾ ಠಾಣೆಗಳಲ್ಲಿ ಸಾರ್ವಜನಿಕ ಸಂಪರ್ಕ ಶಾಖೆಗಳನ್ನು ಸ್ಥಾಪಿಸಿ ಹಿರಿಯ ಎಎಸ್ ಐ ಹಂತದ ಅಧಿಕಾರಿಗಳನ್ನು ನಿಯೋಜಿಸಬೇಕು, ಜನ ಸಮಸ್ಯೆ ಹೇಳಿಕೊಂಡು ಬಂದಾಗ ಅವರೊಂದಿಗೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು, ಕೂರಿಸಿ ಸಮಸ್ಯೆ ಕೇಳಬೇಕು. ಕೆಳಹಂತದಲ್ಲಿ ಸಮಸ್ಯೆ ಬಗೆ ಹರಿಯದಿದ್ದರೆ ಎಸಿಪಿ, ಡಿಸಿಪಿಗಳ ಗಮನಕ್ಕೆ ತಂದು ಪರಿಹಾರ ದೊರಕಿಸಬೇಕು. ಸಮಸ್ಯೆ ತಂದವರೊಂದಿಗೆ ಒರಟಾಗಿ ನಡೆದುಕೊಳ್ಳುವುದು, ಅವಮಾನ ಮಾಡುವುದು, ಬೈಯದನ್ನು ಮಾಡಬಾರದು.
4 ಎಲ್ಲಾ ಠಾಣೆಗಳಲ್ಲಿ ಸಂಚಾರಿ ಮತ್ತು ಕಾನೂನು ಸುವ್ಯವಸ್ಥೆಯ ಪೊಲೀಸರು ರಸ್ತೆಗಳನ್ನು ಮುಚ್ಚಬೇಕು. ಜನ ಸಂಚರಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
5 ಇಂದು ಬೆಂಗಳೂರಿನಾದ್ಯಂದ 2008 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಅವರಿಗೆಲ್ಲಾ ಎಚ್ಚರಿಕೆ ಕೊಟ್ಟು ಕಳುಹಿಸಿ. ನಾಳೆಯಿಂದ ಸಂಚರಿಸುವ ವಾಹನಗಳನ್ನು ಲಾಕ್ ಡೌನ್ ಅವಧಿ ಮುಗಿಯುವವರೆಗು ಬಿಡಬೇಡಿ. ಎನ್ ಡಿ ಎಂ ಎ ಕಾಯ್ದೆಯಡಿ ಪ್ರಕರಣ ದಾಖಲಿಸುತ್ತೇವೆ ಎಂದು ತಿಳುವಳಿಕೆ ನೀಡಿ.
6 ತುರ್ತು ಸೇವೆಗಾಗಿ ಪೊಲೀಸ್ ಇಲಾಖೆಯಿಂದ ನೀಡಲಾಗಿರುವ ಪಾಸ್ ಗಳು ದುರುಪಯೋಗವಾಗುತ್ತಿವೆ. ಈ ಬಗ್ಗೆ ಹಿರಿಯ ಅಧಿಕಾರಿಗಳಾದ ಡಿಸಿಪಿಗಳು, ಎಸಿಪಿಗಳು ಗಮನ ಹರಿಸಬೇಕು. ದಾಕ್ಷಿಣ್ಯಕ್ಕಾಗಿ ಖಂಡಾಪಟ್ಟೆ ಪಾಸ್ ಗಳನ್ನು ವಿತರಿಸಬಾರದು. ಊಟ ಸರಬರಾಜು, ದಿನಸಿ ಅಂಗಡಿಗಳಿಗೆ, ಗ್ರಾಮೀಣ ಭಾಗದಿಂದ ತರಕಾರಿ ತಂದು ಮಾರಾಟ ಮಾಡುವವರಿಗೆ ಮಾತ್ರ ಪಾಸ್ ಗಳನ್ನು ನೀಡಬೇಕು. ವಿತರಿಸಲಾಗಿರುವ ಪಾಸ್ ಗಳನ್ನು ಕಾಲ ಕಾಲಕ್ಕೆ ಪರಿಶೀಲನೆ ನಡೆಸಬೇಕು.
7 ಸಂಚಾರ ಮತ್ತು ಕಾನೂನು ಸುವ್ಯವಸ್ಥೆಯ ಪೊಲೀಸರು ಜೊತೆಯಲ್ಲಿ ಕೆಲಸ ಮಾಡಬೇಕು, ಸಾಧ್ಯವಾಗುವ ಕಡೆ ವಿಡಿಯೋ ರೆರ್ಕಾಡ್ ಮಾಡಬೇಕು.
8 ನೋ ಲಾಠಿ ಬಂದೋಬಸ್ತ್ ಗೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಸದ್ಯಕ್ಕೆ ಅದನ್ನೇ ಮುಂದುವರೆಸಿ, ಮುಂದೆ ನೋ ಲಾಠಿ ಬಂದೋಬಸ್ತನ್ನು ಪುನರ್ ಪರಿಶೀಲನೆ ಮಾಡುತ್ತೇನೆ. ಅಗತ್ಯ ಇದ್ದರೆ ಸೂಕ್ತ ನಿರ್ದೇಶನ ನೀಡುತ್ತೇನೆ.
8 ವಾಹನ ಜಪ್ತಿ ಮಾಡುವಾಗ ಅದನ್ನು ವಿಡಿಯೋ ದಾಖಲು ಮಾಡಬೇಕು
9 ಪಿಜಿಗಳಲ್ಲಿ (ಪೆಯಿಂಗ್ ಗೆಸ್ಟ್ ಹಾಸ್ಟೇಲ್) ಇರುವವರಿಗೆ ಹೆಚ್ಚು ದುಡ್ಡು ವಸೂಲಿ ಮಾಡಬಾರದು, ಅಲ್ಲೆ ಊಟದ ವ್ಯವಸ್ಥೆ ಮಾಡಬೇಕು. ಊಟ ಕೊಟ್ಟು ಹೊರಗೆ ಕಳುಹಿಸುವುದು, ಪಿಜಿ ಬಾಗಿಲು ಹಾಕುತ್ತೇನೆ ಎಂದು ಬೆದರಿಸುವುದನ್ನು ಮಾಡಬಾರದು. ಕೆಲವು ಪಿಜಿಗಳಲ್ಲಿ ತೊಂದರೆ ಕೊಡುತ್ತಿರುವುದು ಕಂಡು ಬಂದಿದೆ, ಸ್ಥಳೀಯ ಪೊಲೀಸರು ಮತ್ತು ಬಿಬಿಎಂಪಿ ಅಧಿಕಾರಿಳು ಜೊತೆಯಾಗಿ ಹೋಗಿ ಎಚ್ಚರಿಕೆ ನೀಡಬೇಕು. ತಿಂಗಳ ಕೊನೆ ಬರುತ್ತಿದೆ. ಸರ್ಕಾರ ಸೂಚನೆ ನೀಡಿದೆ. ಹಾಗಾಗಿ ಮನೆ ಮಾಲೀಕರು ಬಾಡಿಗೆದಾರರಿಗೆ ತೊಂದರೆ ಕೊಡುವುದನ್ನು ಮಾಡದಂತೆ ಎಚ್ಚರಿಕೆ ನೀಡಬೇಕು.
10 ಈಗಾಗಲೇ ಸಂಚಾರಿ ಪೊಲೀಸರು ಮೂರು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಸಿಬ್ಬಂದಿಗಳಿಗೂ ಮೂರು ಶಿಫ್ಟ್ ನಲ್ಲಿ ಕೆಲಸ ಮಾಡುವಂತೆ ವ್ಯವಸ್ಥೆ ಮಾಡಬೇಕು. ಕೆಲಸದ ವೇಳೆಯಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು. ಈಗ ಹನ್ನೆರೆಡು ಗಂಟೆ ಕೆಲಸ ಮಾಡುತ್ತಿದ್ದಾರೆ ಅವರಿಗೆ ವಿಶ್ರಾಂತಿ ಸಿಗುವಂತೆ ಕ್ರಮ ಕೈಗೊಳ್ಳಬೇಕು. ಸೋಂಕು
11 ಡಯಾಲಿಸ್, ಕಿಮೋಥೆರಪಿ, ಹೃದಯಾಘಾತ ಸೇರಿದಂತೆ ಇತರ ತುರ್ತು ಆರೋಗ್ಯ ಸಂದರ್ಭದಲ್ಲಿ ಹೋಯ್ಸಳ ವಾಹನಗಳು ಖುದ್ದಾಗಿ ಹೋಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಬೇಕು. ದೂರ ಇದ್ದರೆ, ಬದಲಿ ವಾಹನದ ವ್ಯವಸ್ಥೆ ಮಾಡಬೇಕು. ಆಸ್ಪತ್ರೆಗೆ ಬಿಟ್ಟು ಬರಬೇಕು. ಅಲ್ಲೇ ಕಾಯುತ್ತಾ ನಿಲ್ಲಬಾರದು.
12 ಮುಂಜಾನೆ ಚೆಡ್ಡಿಹಾಕಿಕೊಂಡು, ಶೂ ಹಾಕಿಕೊಂಡು ವಾಕಿಂಗ್ ಮಾಡುವವರಿಗೆ ಒಳ್ಳೆಯ ಮಾತಿನಲ್ಲಿ ಎಚ್ಚರಿಕೆ ಕೊಟ್ಟು ಕಳುಹಿಸಬೇಕು. ಮನೆ ಬಿಟ್ಟು ಯಾರು ಹೊರಗೆ ಬರದಂತೆ ಸೂಚಿಸಬೇಕು.
13 ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಒಡಿಸಾ, ಪಶ್ಚಿಮ ಬಂಗಾಳ, ಈಶಾನ್ಯ ರಾಜ್ಯಗಳ ಜನ ಹಾಗೂ ಉತ್ತರ ಭಾಗದ ಜನ ಬಂದು ಸಮಸ್ಯೆ ಹೇಳಿಕೊಂಡರೆ ಸಮಾಧಾನದಿಂದ ಕೇಳಿ ಬಗೆ ಹರಿಸಬೇಕು. ಠಾಣೆ ಮಟ್ಟದಲ್ಲಿ ಸಾಧ್ಯವಾಗದಿದ್ದರೆ ಡಿಸಿಪಿಗಳ ಗಮನಕ್ಕೆ ತರಬೇಕು, ಅಲ್ಲೂ ಸಾಧ್ಯವಾಗದಿದ್ದರೆ ಪೊಲೀಸ್ ಆಯುಕ್ತರ ಗಮನಕ್ಕೆ ತರಬೇಕು.
14 ಸುಮಾರು ಜನ ದಾನ ಮಾಡಲು ಬರುತ್ತಾರೆ. ಅದನ್ನು ಗೌರವಯುತವಾಗಿ ಸ್ವೀಕರಿಸಿ ಕಳುಹಿಸಬೇಕು. ಅನಗತ್ಯವಾಗಿ ಫೋಟೋ ಸೆಷನ್ಸ್ ನಡೆಸಿ ಪ್ರಚಾರದ ಸರಕನ್ನಾಗಿ ಬಳಸಿಕೊಳ್ಳಲು ಅವಕಾಶ ಮಾಡಿಕೊಡಬಾರದು, ಗಾಂಭೀರ್ಯತೆ ಕಾಪಾಡಬೇಕು.
15 ಬಿಬಿಎಂಪಿ ಅಧಿಕಾರಿಗಳ ಸಂಪರ್ಕ ಮಾಡಿ ಸಿಎಆರ್, ಕೆಎಸ್ಆರ್ ಪಿ ಕ್ವಾಟ್ರಸ್ಗಳನ್ನು ಸ್ವಚ್ಚಗೊಳಿಸುವ ಕೆಲಸವನ್ನು ಮಾಡಿಸಬೇಕು.
ಸಿಬ್ಬಂದಿಗಳು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ, ಇದೇ ರೀತಿ ತಾಳ್ಮೆಯಿಂದ ಕೆಲಸ ಮಾಡುವುದನ್ನು ಮುಂದುವರೆಸಬೇಕು. ಸಿಬ್ಬಂದಿಗಳಿಗೆ ದಾನಿಗಳಿಂದ ಸೋಂಕು ತಡೆಯುವ ಸಲಕರಣೆಗಳನ್ನು ಒದಗಿಸಬೇಕು ಎಂದು ಸೂಚನೆ ನೀಡಲಾಗಿದೆ.