ನಾಗರಿಕ ಸೇವಾ ಪರೀಕ್ಷೆ- ಉಡುಪಿ ಜಿಲ್ಲಾಡಳಿತದಿಂದ ತರಬೇತಿ; ಅಗಸ್ಟ್ 14 ರಂದು ಓರಿಯೆಂಟೇಶನ್
ಉಡುಪಿ: ಆಗಸ್ಟ್ 14 ರಂದು ಬೆಳಗ್ಗೆ 11 ಗಂಟೆಗೆ ಉಡುಪಿ ಅಜ್ಜರಕಾಡಿನಲ್ಲಿರುವ ಟೌನ್‍ಹಾಲ್‍ನಲ್ಲಿರುವ ಭಾರತೀಯ ನಾಗರಿಕ ಸೇವಾ ಪರೀಕ್ಷೆಯ ಕುರಿತು ಓರಿಯೆಂಟೇಶನ್ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮವನ್ನು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ಉದ್ಘಾಟಿಸಲಿರುವರು.
2017 ರ ಭಾರತೀಯ ನಾಗರಿಕ ಸೇವಾ ಪರೀಕ್ಷೆಯಲ್ಲಿ ಕುಮಾರಿ ನಂದಿನಿ ಕೆ ಆರ್( ಪ್ರಥಮ ರ್ಯಾಂಕ್) ಮತ್ತು ನವೀನ್ ಭಟ್ ವೈ (37ನೇ ರ್ಯಾಂಕ್) ಇವರು ತಮ್ಮ ಯಶಸ್ಸಿನ ಪಯಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಿದ ಬಗ್ಗೆ ಅನಿಸಿಕೆಗಳನ್ನು ಹಂಚಿಕೊಳ್ಳಲಿರುವರು.
ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಮತ್ತು ಕುಂದಾಪುರ ಸಹಾಯಕ ಕಮೀಷನರ್ ಶಿಲ್ಪಾ ನಾಗ್ ಇವರು ಭಾರತೀಯ ನಾಗರಿಕ ಸೇವಾ ಪರೀಕ್ಷೆಯ ನಮೂನೆ ಮತ್ತು ಜಿಲ್ಲಾಡಳಿತವು ನೀಡಲು ಉದ್ದೇಶಿಸಿರುವ ಕೋಚಿಂಗ್ ಕಾರ್ಯಕ್ರಮದ ಕುರಿತು ವಿವರಿಸಲಿರುವರು. ಕಾರ್ಯಕ್ರಮದ ನಂತರ ಉಡುಪಿ ಅಜ್ಜರಕಾಡಿನಲ್ಲಿರುವ ಟೌನ್‍ಹಾಲ್‍ನಲ್ಲಿಯೇ ರಿಜಿಸ್ಟ್ರೇಷನ್ ಮಾಡಲಾಗುವುದು ಹಾಗೂ ರಿಜಿಸ್ಟ್ರೇಷನ್‍ನ್ನು ಆನ್‍ಲೈನ್ www.udupi.nic.in ನಲ್ಲೂ ಮಾಡಬಹುದಾಗಿದೆ. ಕಾಲೇಜು ವಿದ್ಯಾರ್ಥಿಗಳು ಹಾಗೂ ಸಿವಿಲ್ ಸರ್ವಿಸ್ ಪರೀಕ್ಷೆ ಬರೆಯಲು ಆಸಕ್ತಿ ಹೊಂದಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿ ಸದರಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.