ಹಾವನ್ನು ತಪ್ಪಿಸಲು ಹೋಗಿ ಬಸ್ಸು- ಓಮಿನಿ ಕಾರು ಡಿಕ್ಕಿ; ಚಾಲಕ ಗಂಭೀರ
ಮಂಗಳೂರು: ರಸ್ತೆಯಲ್ಲಿ ಅಡ್ಡ ಬಂದ ನಾಗರಹಾವನ್ನು ತಪ್ಪಿಸಲು ಹೋಗಿ ಖಾಸಗಿ ಬಸ್ಸು ಹಾಗೂ ಓಮಿನಿ ಕಾರು ಪರಸ್ಪರ ಡಿಕ್ಕಿಯಾಗಿ ಕಾರಿನ ಚಾಲಕ ಗಂಭೀರ ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾಣಿ ಶಾಲೆಯ ಬಳಿ ಶುಕ್ರವಾರ ಸಂಭವಿಸಿದೆ.
ಮಂಗಳೂರು ಕಡೆಯಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಓಮಿನಿ ಕಾರಿಗೆ ಉಪ್ಪಿನಂಗಡಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ಸು ಡಿಕ್ಕಿ ಹೊಡದು ಈ ಘಟನೆ ಸಂಭವಿಸಿದೆ.
ಬಸ್ಸಿನ ಎದುರಗಡೆಯಿಂದ ತೆರಳುತ್ತಿದ್ದ ಕಾರಿಗೆ ನಾಗರಹಾವು ಅಡ್ಡಬಂದಿದ್ದು, ಅದನ್ನು ತಪ್ಪಿಸಲು ಚಾಲಕ ಹಠಾತ್ ಬ್ರೇಕ್ ಹಾಕಿದ್ದು, ಕಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಬಸ್ ಚಾಲಕ ಬಸ್ಸನ್ನು ಎಡಕ್ಕೆ ತಿರುಗಿಸುತ್ತಿದ್ದಂತೆ ಎದುರಿನಿಂದ ಬಂದ ಒಮಿನಿಗೆ ಡಿಕ್ಕಿಯಾಗಿದೆ. ಕಾರಿನ ಚಾಲಕ ಹಾವನ್ನು ಬಚಾವು ಮಾಡಲು ಬ್ರೇಕ್ ಹಾಕಿದರೂ ಹಾವು ಕಾರಿನ ಚಕ್ರದಡಿಗೆ ಬೀಳುವುದನ್ನು ತಪ್ಪಿಸಲು ಸಾಧ್ಯವಾಗಿಲ್ಲ.
ಗಾಯಗೊಂಡ ಕಾರಿನ ಚಾಲಕನನ್ನು ಸ್ಥಳೀಯರ ನೆರವಿನಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ವಿಟ್ಲ ಪೋಲಿಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.