ನಾನು ಜನರ ಸೇವಕ; ಪ್ರಚಾರಕ್ಕಾಗಿ ಕೆಲಸ ಮಾಡುತ್ತಿಲ್ಲ – ಮಾಜಿ ಶಾಸಕ ಸುರೇಶ್ ಹೇಳಿಕೆಗೆ ಅಣ್ಣಾಮಲೈ ಸ್ಪಷ್ಟನೆ
ಚಿಕ್ಕಮಗಳೂರು: ತರೀಕೆರೆ ಪಟ್ಟಣದಲ್ಲಿ ನೀರಿನ ಟ್ಯಾಂಕರ್ಗಳನ್ನು ಬಿಡಬೇಕು ಎಂಬ ವಿಚಾರಕ್ಕೆ ಮಾಜಿ ಶಾಸಕ ಡಿ.ಎನ್. ಸುರೇಶ್ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಪೊಲೀಸರೊಂದಿಗೆ ನಡೆದ ಮಾತಿನ ಚಕಮಕಿ ಬಗ್ಗೆ ಎಸ್ಪಿ ಅಣ್ಣಾಮಲೈ ಸ್ವಷ್ಟನೆ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮಗೆ ರೈತರ ಮೇಲೆ ಅಪಾರ ಗೌರವವಿದೆ. ರೈತರಿಗೆ ಯಾವುದೇ ರೀತಿಯ ತೊಂದರೆ ಕೊಟ್ಟಿಲ್ಲ. ನಿನ್ನೆ ಪ್ರತಿಭಟನೆ ವೇಳೆ ರಸ್ತೆ ತಡೆ ನಡೆಸಿದ್ದರು. ಆದರೆ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿತ್ತು. ಅವರಿಗೆ ತೊಂದರೆ ಆಗುತ್ತಿತ್ತು. 20 ನಿಮಿಷಗಳ ಕಾಲ ತಡವಾಗಿ ವಿದ್ಯಾರ್ಥಿಗಳು ಪರೀಕ್ಷೆಗೆ ಹೋದರು. ಸಾಕಷ್ಟು ವಿದ್ಯಾರ್ಥಿಗಳು ನನಗೆ ಕರೆ ಮಾಡಿ ಈ ಬಗ್ಗೆ ಹೇಳಿದ್ದಾರೆ ಎಂದು ತಿಳಿಸಿದರು. ಮಾಜಿ ಶಾಸಕರ ಕೊರಳ ಪಟ್ಟಿಗೆ ಕೈ ಹಾಕುವ ಉದ್ದೇಶ ಇರಲಿಲ್ಲ. ನಾವು ರೈತರಿಗೆ ಯಾವುದೇ ತೊಂದರೆ ಕೊಟ್ಟಿಲ್ಲ.
ನಾನು ಪುಕ್ಕಲ ಎಂಬ ಸುರೇಶ್ ಹೇಳಿಕೆ ರಾಜಕೀಯವಾದದ್ದು. ಹಾಗಾಗಿ ಈ ಬಗ್ಗೆ ಉತ್ತರ ನೀಡಲ್ಲ. ನಾವು ಯೂನಿಫಾರ್ಮ್ ಹಾಕಿಕೊಂಡಿದ್ದು, ಜನರಿಗಾಗಿ ಕೆಲಸ ಮಾಡುತ್ತಿದ್ದೇವೆ. ನನ್ನ ಬಗ್ಗೆ ಕೆಲವರು ಒಳ್ಳೆಯ ಅಧಿಕಾರಿ ಎಂದರೆ ಇನ್ನೂ ಕೆಲವರು ಕೆಟ್ಟ ಅಧಿಕಾರಿ ಎನ್ನುತ್ತಾರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆಲ್ಲಾ ಅಧಿಕಾರಿಗಳಾದ ನಮಗೆ ಸರ್ವೆ ಸಾಮಾನ್ಯವಾದ ಸಂಗತಿ. ಯಾವುದೇ ಹೆಸರು ಪಡೆಯುವುದಕ್ಕಾಗಿ ನಾವು ಕೆಲಸ ಮಾಡುವುದಿಲ್ಲ ಜನರ ಸೇವೆ ಮಾಡುವುದಷ್ಟೇ ನಮ್ಮ ಕೆಲಸ. ಕೆಲವೊಮ್ಮೆ ಒಳ್ಳೆಯ ಹೆಸರು ಪಡೆದರೆ ಇನ್ನು ಕೆಲವೊಮ್ಮೆ ಕೆಟ್ಟ ಹೆಸರು ತಗೊಳ್ಳುತ್ತೇವೆ ಇದಕ್ಕೆಲ್ಲಾ ನಾನು ತಲೆಕೆಡಿಸಿಕೊಳ್ಳೊದಿಲ್ಲ. ನನ್ನ ಆತ್ಮಸಾಕ್ಷಿಯಂತೆ ಕೆಲಸ ಮಾಡುವುದು ನನ್ನ ಪದ್ದತಿ. ನನಗೆ ಸಮಸ್ಯೆ ಬಗೆಹರಿಯಬೇಕು. ರೋಡ್ ಕ್ಲೀಯರ್ ಆಗಬೇಕು. ವಿದ್ಯಾರ್ಥಿಗಳು ಬೇಗ ಪರೀಕ್ಷೆಗೆ ಹೋಗಬೇಕೆಂಬ ಉದ್ದೇಶವಿತ್ತು ಎಂದು ಹೇಳಿದರು.
ಆದರೆ ಕೆಲ ವಿದ್ಯಾರ್ಥಿಗಳು 20 ನಿಮಿಷಗಳ ಕಾಲ ಪರೀಕ್ಷೆಗೆ ತಡವಾಗಿ ಹೋಗಿದ್ದು ನಮಗೆ ನೋವಾಗಿದೆ. ನಾನು ಉದ್ದೇಶ ಪೂರ್ವಕವಾಗಿ ಯಾವುದೇ ಕೆಲಸ ಮಾಡಿಲ್ಲವೆಂದು ಅಣ್ಣಾಮಲೈ ಸ್ವಷ್ಟನೆ ನೀಡಿದ್ದಾರೆ.
Video Courtesy : Eenadu