ನಾಪತ್ತೆಯಾಗಿರುವ ಮೀನುಗಾರರ ಪತ್ತೆಗೆ ಇಸ್ರೊ ನೆರವು – ಸಚಿವ ವೆಂಕಟರಾವ್ ನಾಡಗೌಡ
ಉಡುಪಿ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿರುವ ಮೀನುಗಾರರ ಪತ್ತೆಗೆ ಇಸ್ರೊ ನೆರವು ಕೋರಲಾಗಿದೆ ಎಂದು ಪಶು ಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಹೇಳಿದ್ದಾರೆ.
ಮೀನುಗಾರಿಕೆ ಬೋಟ್ನಲ್ಲಿದ್ದ ಮಾಲೀಕ ಚಂದ್ರಶೇಖರ್ ಕೋಟ್ಯಾನ್ ಹಾಗೂ ತಾಂಡೇಲ ದಾಮೋದರ ಸಾಲಿಯಾನ್ ಅವರ ಬಡಾನಿಡಿಯೂರು ಗ್ರಾಮದ ಪಾವಂಜಿಗುಡ್ಡೆ ಮನೆಗಳಿಗೆ ಬುಧವಾರ ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಡಿಸೆಂಬರ್ 13ರಂದು ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ ಏಳು ಮೀನುಗಾರರಿದ್ದ ಬೋಟ್ 15ರ ರಾತ್ರಿ ಒಂದು ಗಂಟೆವರೆಗೆ ಸಂಪರ್ಕದಲ್ಲಿದ್ದು ನಂತರ ಸಂಪರ್ಕಕ್ಕೆ ಸಿಗಲಿಲ್ಲ. ಮೀನುಗಾರರ ಪತ್ತೆಗೆ ನಿರಂತರ ಪ್ರಯತ್ನಗಳ ನಡೆಯುತ್ತಿವೆ. ಈ ಸಂಬಂಧ ಉಪಗ್ರಹ ಮೂಲಕ ಪತ್ತೆ ಮಾಡಲು ಇಸ್ರೋಗೂ ಮನವಿ ಮಾಡಲಾಗಿದೆ ಎಂದು ಹೇಳಿದರು.
ಪ್ರಕರಣ ಸಂಬಂಧ ಡಿ 22ರಂದು ದೂರು ದಾಖಲಿಸಿಕೊಳ್ಳಲಾಗಿದೆ. ಮೀನುಗಾರರ ಪತ್ತೆಗಾಗಿ ನೆರೆ ರಾಜ್ಯಗಳಾದ ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಿಗೂ ಪತ್ರ ಬರೆದು ಮನವಿ ಮಾಡಲಾಗಿದೆ. ಆದರೆ, ಈವರೆಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ರಾಜ್ಯ ಸರ್ಕಾರದಿಂದ ಸ್ಥಳೀಯ ಮೀನುಗಾರರ ಸಹಕಾರ ಪಡೆದು ಎಲ್ಲ ಬಂದರುಗಳೂ ಸೇರಿದಂತೆ ಶಂಕಾಸ್ಪದ ಸ್ಥಳಗಳಲ್ಲಿ ಪತ್ತೆ ಕಾರ್ಯ ನಡೆಸಲಾಗಿದೆ. ಸಮುದ್ರದಲ್ಲೂ ಕೂಡ ಹೆಲಿಕಾಪ್ಟರ್ ಮತ್ತು ತಟ ರಕ್ಷಣಾ ಪಡೆಗಳ ಮೂಲಕ ಪತ್ತೆಗೆ ಪ್ರಯತ್ನಿಸಲಾಗಿದೆ ಎಂದರು.
ಈಗಾಗಲೆ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ನೌಕಾದಳವನ್ನು ಬಳಸಿಕೊಳ್ಳಲು ಕೋರಲಾಗಿದೆ. ಅಲ್ಲದೆ, ಗೂಗಲ್ ಸೇರಿದಂತೆ ಉಪಗ್ರಹ ಸಂಸ್ಥೆಗಳ ನೆರವು ಪಡೆಯಲಾಗಿದೆ ಎಂದರು.
ಗುಜರಾತ್ ಗಡಿದಾಟಿ ಪಾಕಿಸ್ತಾನ ಗಡಿ ಪ್ರವೇಶಿಸುವ ಸಾಧ್ಯತೆ ಕಡಿಮೆ. ಬೋಟ್ನಲ್ಲಿ ಅಷ್ಟು ಪ್ರಮಾಣದ ಇಂಧನ ಇರಲಿಲ್ಲ ಎಂದು ಹೇಳಲಾಗಿದೆ. ಈ ಹಿಂದಿನ ಕೆಲವು ಪ್ರಕರಣಗಳ ಆಧಾರದಂತೆ ಬೇರೆ ರಾಜ್ಯದ ಮೀನುಗಾರರು ನಮ್ಮ ಮೀನುಗಾರರನ್ನು ಅಪಹರಿಸಿರುವ ಸಂಶಯ ಇದೆ. ಈ ವಿಚಾರದಲ್ಲೂ ನೆರೆ ರಾಜ್ಯಗಳ ಸರ್ಕಾರದೊಂದಿಗೆ ನಿರಂತರ ಸಂಪರ್ಕ ಮಾಡಲಾಡಲಾಗುತ್ತಿದೆ ಎಂದು ಸಚಿವರು ಹೇಳಿದರು.
ಮೀನುಗಾರರು ಜೀವಂತವಾಗಿರುತ್ತಾರೆ ಎಂಬ ಅಚಲ ವಿಶ್ವಾಸ ನಮ್ಮ ಸರ್ಕಾರದ್ದು. ಅವರ ಪತ್ತೆಗೆ ಅವಿರತ ಪ್ರಯತ್ನಗಳ ನಡೆದಿದ್ದು ಶೀಘ್ರವೇ ನಿರೀಕ್ಷಿತ ಫಲಿತಾಂಶಕ್ಕೆ ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದರು.
ಇನ್ನು ಬೇರೆ ಯಾವುದಾದರೂ ಮೂಲದ ಮೂಲಕ ಶೋಧ ಕಾರ್ಯಾಚರಣೆ ಮಾಡಲು ಅವಕಾಶ ಇರುವ ಬಗ್ಗೆ ಹೇಳಿದರೆ, ಸರಕಾರ ಮುಕ್ತ ಮನಸ್ಸಿನಿಂದ ಆ ಕೆಲಸ ಮಾಡಲಿದೆ. ನಾಪತ್ತೆಯಾಗಿರುವ ಬೋಟಿನ ಬಣ್ಣ ಬದಲಾಯಿಸಿ ಮೀನುಗಾರರನ್ನು ಅಪಹರಿಸಿರುವ ಬಗ್ಗೆ ಕೆಲ ಮೀನುಗಾರರು ಸಂಶಯ ವ್ಯಕ್ತಪಡಿಸಿದ್ದು, ಈ ಹಿನ್ನೆಲೆಯಲ್ಲಿ ಅಲ್ಲಿನ ಬೋಟ್ ಗಳನ್ನು ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ತನಿಖೆ ನಡೆಸಲು ಆದೇಶ ನೀಡಲಾಗುವುದು ಎಂದು ತಿಳಿಸಿದರು.
ನಾಪತ್ತೆಯಾಗಿರುವ ಮೀನುಗಾರರನ್ನು ಪತ್ತೆ ಹಚ್ಚುವವರೆಗೆ ಮುಖ್ಯಮಂತ್ರಿ ಪರಿಹಾರನಿಧಿಯಿಂದ ಪ್ರತಿ ಕುಟುಂಬಕ್ಕೆ ತಲಾ ಒಂದು ಲಕ್ಷ ತಾತ್ಕಾಲಿಕ ಪರಿಹಾರ ಬಿಡುಗಡೆ ಮಾಡಲು ಆದೇಶಿಸಲಾಗಿದೆ.
ಈ ಕುರಿತು ಮುಖ್ಯಮಂತ್ರಿ ಗಳ ಜೊತೆ ಚರ್ಚೆ ಮಾಡಿದ್ದೇವೆ. ಉತ್ತರ ಕನ್ನಡ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಇಂದೇ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದು, ಅದೇ ರೀತಿ ಉಡುಪಿ ಜಿಲ್ಲಾಧಿಕಾರಿಗಳಿಗೂ ತಿಳಿಸಲಾಗಿದೆ. ನಾಳೆ ಆ ಪರಿಹಾರ ಮೊತ್ತ ವಿತರಿಸಲು ವ್ಯವಸ್ಥೆ ಮಾಡಲಾಗುವುದು ಎಂದರು.
ಸಚಿವರ ಭೇಟಿಯ ವೇಳೆ ಕುಟುಂಬಸ್ಥರು ಮತ್ತು ಮೀನುಗಾರರ ಮಹಿಳೆಯರು ಸಚಿವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಘಟನೆ ನಡೆದು ಇಷ್ಟು ದಿನವಾದರೂ ಭೇಟಿ ನೀಡದೆ ಈಗ ಬಂದ ಕಾರಣವೇನು ಎಂದು ಪ್ರಶ್ನೆ ಮಾಡಿದರು. ಈ ವೇಳೆ ಸಚಿವರ ಸರ್ಕಾರ ಕೈಗೊಂಡ ಕ್ರಮಗಳನ್ನು ವಿವರಿಸಿದರೂ ಕೂಡ ಯಾರೂ ಕೂಡ ಕೇಳುವ ಸ್ಥಿತಿಯಲ್ಲಿರಲಿಲ್ಲ ಅಲ್ಲದೆ ನಮಗೆ ಸರ್ಕಾರ ನೀಡುವ ಪರಿಹಾರ ಬೇಡ ಕೂಡಲೇ ನಾಪತ್ತೆಯಾದ ಮೀನುಗಾರರನ್ನು ಹುಡುಕಿಕೊಂಡಿ ಎಂದು ಒತ್ತಾಯಿಸಿದರು.
ಮೊಗವೀರ ಸಮುದಾಯ ದೇವರ ಮೊರೆ ಹೋಗಿದ್ದು ಗಮನಕ್ಕೆ ಬಂದಿದೆ. ದೈವದ ನುಡಿಯ ಪ್ರಕಾರ ಉತ್ತರ ಭಾಗದಲ್ಲೂ ಹುಡುಕಾಟ ನಡೆಸುತ್ತೇವೆ. ಎಲ್ಲಿದ್ದಾರೆ ಎಂಬ ಬಗ್ಗೆ ಒಂದು ಸೂಚನೆ ನೀಡಿದರೆ ಆ ಬಗ್ಗೆಯೂ ಕ್ರಮ ಕೈಗೊಳ್ಳುತ್ತೇವೆ ಎಂದು ಮೀನುಗಾರಿಕಾ ಸಚಿವರು ಭರವಸೆ ನೀಡಿದರು.
ನಾನು ಸಮುದ್ರಕ್ಕೆ ಹಾರುತ್ತೇನೆ ಎಂದು ಹೇಳಿಲ್ಲ.. ನಾನೂ ಸಮುದ್ರಕ್ಕೆ ಇಳಿಯಲು ಸಿದ್ಧ ಎಂದು ಹೇಳಿದ್ದೇನೆ. ಇಡೀ ಸಕರ್ಾರ ಮೀನುಗಾರರನ್ನು ಕಡೆಗಣನೆ ಮಾಡಿಲ್ಲ ಎಂದರು.
ಈ ವೇಳೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನಿಸ್ಸ್, ಎಸ್ಪಿ ಲಕ್ಷ್ಮಣ ನಿಂಬರಗಿ, ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಪಾರ್ಶ್ವನಾಥ್, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಹಾಜರಿದ್ದರು.