ನಾಪತ್ತೆ ಬಾಲಕನ ಪತ್ತೆಗೆ ನೆರವಾದ ಫೇಸ್ಬುಕ್
ಉಡುಪಿ: ಸುಮಾರು ಮೂರು ವರ್ಷದ ಹಿಂದೆ ನಾಪತ್ತೆಯಾಗಿದ್ದ ಬಾಲಕ ಮತ್ತೆ ಆತನ ಪೋಷಕರ ಬಳಿ ಸೇರುವಂತೆ ಮಾಡಲು ಸಾಮಾಜಿಕ ಜಾಲತಾಣ ಫೇಸ್ಬುಕ್ ಸಹಾಯ ಮಾಡಿದೆ.
ಮಣಿಪಾಲ ಅನಂತನಗರದ ಹುಡ್ಕೋ ಕಾಲನಿಯ ಶ್ರೀಧರ್ ಕೆ.ಅಮೀನ್ ಎಂಬವರ ದತ್ತು ಪ್ರೇಮ್ ಕಿರಣ್ 2015ರ ಜ.20ರಂದು ಮನೆಯಿಂದ ಮಣಿಪಾಲ ಎಂಐಟಿ ಮೈದಾನಕ್ಕೆ ಆಡಿ ಬರುವುದಾಗಿ ಹೇಳಿ ಹೋದವನು ವಾಪಸ್ ಬಾರದೆ ನಾಪತ್ತೆಯಾಗಿದ್ದನು. ಶ್ರೀಧರ್ ಈ ಕುರಿತು ಉಡುಪಿ ಪೊಲೀಸರಿಗೆ ದೂರು ದಾಖಲಿಸಿದ್ದರು.
ಪ್ರಕರಣದ ಬಗ್ಗೆ ಮಾತನಾಡಿದ ಜಿಲ್ಲಾ ಅಪರಾಧ ಪೊಲೀಸ್ ಠಾಣೆಯ(ಡಿಸಿಬಿ) ಹಾಗೂ ಅಕ್ರಮ ಮಾನವ ಸಾಗಣೆ ವಿರೋಧಿ ಘಟಕದ ಅಧಿಕಾರಿ ರತ್ನಕುಮಾರ್ ಜಿ, ಬಾಲಕನಿಗೆ ಓದಿನಲ್ಲಿ ಆಸಕ್ತಿ ಇರಲಿಲ್ಲ. ಅದಕ್ಕಾಗಿ ಕೆಲಸ ಮಾಡಿ ಹಣ ಸಂಪಾದಿಸುವ ಉದ್ದೇಶದಿಂದ ಮನೆ ಬಿಟ್ಟು ಹೋಗಿದ್ದ ಎಂದು ಹೇಳಿದ್ದಾರೆ.
‘ಈತನ ಪತ್ತೆಗೆ ನಾವು ಬೆಂಗಳೂರು ಸೈಬರ್ ಕ್ರೈಂ ವಿಭಾಗದ ಸಹಾಯವನ್ನು ಪಡೆದಿದ್ದೆವು. ಕಳೆದ ತಿಂಗಳು ಪ್ರೇಮ್ ಹೊಸದಾಗಿ ಪ್ರೊಫೈಲ್ ಚಿತ್ರ ಅಪ್ಲೋಡ್ ಮಾಡಿದ್ದ. ಇದರ ಬೆನ್ನುಬಿದ್ದ ಪೊಲೀಸರು ಪ್ರೇಮ್ನನ್ನು ಮುಂಬಯಿನಲ್ಲಿ ಪತ್ತೆಹಚ್ಚಿದ್ದಾರೆ. ಅಲ್ಲಿ ಆತ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ’ ಎಂದು ರತ್ನಕುಮಾರ್ ಹೇಳಿದ್ದಾರೆ.