ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪನೆ ಕುರಿತು ಸಿಎಂಗೆ ಮನವಿ: ಕೋಟ ಶ್ರೀನಿವಾಸ ಪೂಜಾರಿ
ಉಡುಪಿ: ಸಮಾಜದ ದಮನಿತ ವರ್ಗದ ಜನರ ಏಳಿಗೆಗಾಗಿ, ಅವರ ಧ್ವನಿಗೆ ಶಕ್ತಿ ಕೊಡುವ ನಿಟ್ಟಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಅಭಿವೃದ್ಧಿ ನಿಗಮ ಸ್ಥಾಪಿಸುವ ಕುರಿತಂತೆ, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವುದಾಗಿ ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಶುಕ್ರವಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಜಿಲ್ಲಾ ಬಿಲ್ಲವ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ, ಬ್ರಹ್ಮಶ್ರೀ ನಾರಾಯಣ ಗುರುಗಳ 165 ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ಪ್ರತಿಪಾದಿಸಿದ ನಾರಾಯಣ ಗುರುಗಳ ಸಂದೇಶ ಇವತ್ತಿನ ಜಗತ್ತಿಗೆ ಅತ್ಯಂತ ಪ್ರಸ್ತುತವಾಗಿದೆ. ಇಡೀ ಪ್ರಪಂಚ ಒಂದೇ ಕುಟುಂಬದಂತೆ ಶಾಂತಿ, ಸಮಾನತೆ, ಸಹಬಾಳ್ವೆಯಿಂದ ಬದುಕಬೇಕೆಂದು ಗುರುಗಳು ಬಯಸಿದ್ದರು. ಅವರು ಜಗತ್ತಿಗೇ ಸಾರಿದ ಸಮಾನತೆಯ ಸಂದೇಶ ನಮಗೆಲ್ಲರಿಗೂ ಆದರ್ಶ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅಸ್ಪ್ರಶ್ಯತೆ, ಮೇಲು-ಕೀಳೆಂಬ ಭಾವಗಳು ತಾಂಡವವಾಡುತ್ತಿದ್ದ ಕಾಲಘಟ್ಟದಲ್ಲಿ ಜನಿಸಿದ ನಾರಾಯಣ ಗುರುಗಳು, ಸಮಾಜದ ಶೋಷಿತರ ಧ್ವನಿಯಾಗುತ್ತಾ, ಕ್ರಾಂತಿಯ ಕಿಡಿಯನ್ನು ಹಚ್ಚಿ, ಭಾಷೆಗೆ ಬರಹದ ಮೂರ್ತರೂಪ ನೀಡಿದರು. ಮನುಕುಲದಲ್ಲಿ ಎಲ್ಲರೂ ಸಮಾನರು ಎಂದು ಪ್ರತಿಪಾದಿಸಿ, ಜನರಲ್ಲಿ ವಿದ್ಯೆಯ ಮೂಲಕ ಅರಿವನ್ನು ಮೂಡಿಸಿದರು, ಅವರು ಸಾರಿದ ಸಮಾನತೆಯನ್ನು ಒಪ್ಪಿಕೊಂಡು, ಅಸ್ಪøಶ್ಯತೆ ಆಚರಣೆ ಇಲ್ಲದ ರಾಜ್ಯದ ಜಿಲ್ಲೆಗಳೆಂದರೆ ಬಹುಶ: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಮಾತ್ರ, ನಾರಾಯಣ ಗುರುಗಳ ತತ್ವ ಮತ್ತು ಆದರ್ಶದ ಹಾದಿಯಲ್ಲಿಯೇ ತಾವು ಸಚಿವರಾಗಿ ಕರ್ತವ್ಯ ನಿರ್ವಹಿಸುವುದಾಗಿ ಸಚಿವರು ಹೇಳಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷೆ ನೀತಾ ಗುರುರಾಜ್ ಪೂಜಾರಿ, ಜಿ.ಪಂ. ಸದಸ್ಯರಾದ ಜನಾರ್ಧನ ತೋನ್ಸೆ, ಗೀತಾಂಜಲಿ ಸುವರ್ಣ, ಶಿಲ್ಪಾ ಸುವರ್ಣ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕಾಪು ತಹಶೀಲ್ದಾರ್ ಮುಹಮ್ಮದ್ ಇಸಾಕ್, ಕಟಪಾಡಿ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಬಿ.ಎನ್.ಶಂಕರ ಪೂಜಾರಿ, ಗೌರವಾಧ್ಯಕ್ಷ ಶಿವಾನಂದ್ ಉಪಸ್ಥಿತರಿದ್ದರು.
ಹಿರಿಯಡ್ಕ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ನಳಿನಾದೇವಿ ಎಂ. ಆರ್ ಉಪನ್ಯಾಸ ನೀಡಿದರು. ಸಪ್ನಾ ಮತ್ತು ನಾಗರಾಜ ಶೇಟ್ ಬಳಗದವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಪೂರ್ಣಿಮಾ ವಂದಿಸಿದರು, ದಯಾನಂದ ಉಗ್ಗೆಲ್ಬೆಟ್ಟು ನಿರೂಪಿಸಿದರು.