ನಾಲ್ಕು ದಿನದಲ್ಲಿ ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಉಡುಪಿ ನಗರಸಭೆಗೆ ಬೀಗ – ಅನ್ಸಾರ್ ಅಹಮದ್
ಉಡುಪಿ: ಮುಂದಿನ ನಾಲ್ಕು ದಿನದ ಒಳಗಡೆ ಜಿಲ್ಲಾಡಳಿತ ಹಾಗೂ ನಗರಸಭೆ ನೀರಿನ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸದೇ ಇದ್ದಲ್ಲಿ ಸಂಘಟನೆ ವತಿಯಿಂದ ಉಡುಪಿ ನಗರಸಭೆಗೆ ಬೀಗ ಜಡಿದು ಪ್ರತಿಭಟಿಸುವ ಎಚ್ಚರಿಕೆಯನ್ನು ನೀಡುತ್ತಿದ್ದೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಉಡುಪಿ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ಅನ್ಸಾರ್ ಅಹಮದ್ ರವರು ತಿಳಿಸಿರುತ್ತಾರೆ.
ಕಳೆದ ಹಲವಾರು ದಿನಗಳಿಂದ ಉಡುಪಿ ಜನತೆ ನೀರಿಲ್ಲದೆ ಪರದಾಡುವಂತಾಗಿದೆ. ಜನರು ಇಷ್ಟೆಲ್ಲಾ ಕಷ್ಟಪಡುತ್ತಿದ್ದರೂ ಜಿಲ್ಲಾಡಳಿತ ಹಾಗೂ ಉಡುಪಿ ನಗರಸಭೆ ಯಾವುದೇ ರೀತಿಯ ವಿಶೇಷ ಕಾಳಜಿ ವಹಿಸಿ ಕೊಳ್ಳುತ್ತಿಲ್ಲ. ನೀರಿನ ಸಮಸ್ಯೆ ಆರಂಭವಾಗುವಾಗ ಸುಮ್ಮನಿದ್ದ ಜಿಲ್ಲಾಡಳಿತ ಹಾಗೂ ನಗರಸಭೆ ಈಗ ಸಮಸ್ಯೆ ಮಿತಿ ಮೀರಿದಾಗ ಕಾಟಾಚಾರಕ್ಕಾಗಿ ಪರಿಹಾರ ಹುಡುಕುವ ಕೆಲಸಕ್ಕೆ ಕೈ ಹಾಕಿದೆ.
ಜಿಲ್ಲಾಡಳಿತ ನಡವಳಿಕೆ ಸಾರ್ವಜನಿಕರಲ್ಲಿ ಸಂಶಯ ಮೂಡುತ್ತಿದೆ. ಮಳೆಗಾಲ ಬರುವ ತನಕ ಕಾಲಹರಣ ಮಾಡುವ ಕೆಲಸ ಮಾಡುತ್ತಿದೆ ಎಂದು ಸಾರ್ವಜನಿಕರು ಮಾತನಾಡುಕೊಳ್ಳುವಂತಾಗಿದೆ. ಲೋಕಸಭಾ ಚುನಾವಣೆಯ ದಿನದವರೆಗೆ ದಿನದ 24 ಗಂಟೆ ಬರುತ್ತಿದ್ದ ನೀರು ಚುನಾವಣೆಯ ಮರುದಿನವೇ ಮಂಗ ಮಾಯವಾಗಿದೆ. ಮುಂದಿನ ನಾಲ್ಕು ದಿನದ ಒಳಗಡೆ ಜಿಲ್ಲಾಡಳಿತ ಹಾಗೂ ನಗರಸಭೆ ನೀರಿನ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸುವಂತೆ ಅವರು ಆಗ್ರಹಿಸಿದ್ದಾರೆ.